T20 World Cup 2026: ಟಿ20 ವಿಶ್ವಕಪ್ನಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ಗೇರಿದ್ದ ಸೌತ್ ಆಫ್ರಿಕಾ ತಂಡವು ನಿರ್ಣಾಯಕ ಪಂದ್ಯದಲ್ಲಿ ಸೋತಿದೆ. ಅದು ಕೂಡ ಹೀನಾಯವಾಗಿ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು 20 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 169 ರನ್ಗಳು ಮಾತ್ರ.
ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ಪರ ಫಿನ್ ಅಲೆನ್ ಹಾಗೂ ಟಿಮ್ ಸೈಫರ್ಟ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಮೂಲಕ ಮೊದಲ ವಿಕೆಟ್ಗೆ 117 ರನ್ ಪೇರಿಸಿದ್ದರು. ಅಷ್ಟೇ ಅಲ್ಲದೆ 12.5 ಓವರ್ಗಳಲ್ಲಿ 173 ರನ್ ಸಿಡಿಸಿ 9 ವಿಕೆಟ್ಗಳ ಜಯ ಸಾಧಿಸಿದ್ದರು. ಈ ಗೆಲುವಿನೊಂದಿಗೆ ನ್ಯೂಝಿಲೆಂಡ್ ಫೈನಲ್ಗೆ ಪ್ರವೇಶಿಸಿದರೆ, ಸೌತ್ ಆಫ್ರಿಕಾ ತಂಡ ಟೂರ್ನಿಯಿಂದ ಹೊರಬಿದ್ದಿದೆ.
ಇತ್ತ ಟೂರ್ನಿಯಿಂದ ಹೊರಬಿದ್ದ ಬಳಿಕ ನಡೆದ ಸುದ್ಧಿಗೋಷ್ಠಿಯಲ್ಲಿ ಸೌತ್ ಆಫ್ರಿಕಾ ತಂಡದ ಮುಖ್ಯ ಕೋಚ್ ಶುಕ್ರಿ ಕಾನ್ರಾಡ್ ಕಾಣಿಸಿಕೊಂಡಿದ್ದರು. ಎಂದಿನಂತೆ ಈ ಬಾರಿ ಕೂಡ ‘ಚೋಕರ್ಸ್’ ಹಣೆಪಟ್ಟಿಯ ಪ್ರಶ್ನೆಯನ್ನು ಅವರ ಮುಂದಿಡಲಾಗಿತ್ತು.
ಐಸಿಸಿ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಸೌತ್ ಆಫ್ರಿಕಾ ತಂಡವು ನಿರ್ಣಾಯಕ ಪಂದ್ಯಗಳಲ್ಲಿ ಸೋತು ಹೊರಬೀಳುವುದು ಸಾಮಾನ್ಯ. ಹೀಗಾಗಿಯೇ ಆಫ್ರಿಕಾ ಪಡೆಯನ್ನು ಚೋಕರ್ಸ್ ಎಂದು ಕರೆಯಲಾಗುತ್ತದೆ. ಇದೀಗ ಮತ್ತೊಮ್ಮೆ ಸೆಮಿಫೈನಲ್ನಲ್ಲಿ ಮುಗ್ಗರಿಸುವ ಮೂಲಕ ಸೌತ್ ಆಫ್ರಿಕಾ ತಂಡ ಹೊರಬಿದ್ದಿದೆ.
ಇದರೊಂದಿಗೆ ಸೌತ್ ಆಫ್ರಿಕಾ ತಂಡದ ಚೋಕರ್ಸ್ ಹಣೆಪಟ್ಟಿ ಮುಂದುವರೆದಿದೆ. ಆದರೆ ಈ ಬಾರಿಯ ಸೋಲನ್ನು ಚೋಕ್ ಎಂದು ಕರೆಯಲಾಗುವುದಿಲ್ಲ ಎಂದಿದ್ದಾರೆ ಸೌತ್ ಆಫ್ರಿಕಾ ತಂಡದ ಮುಖ್ಯ ಕೋಚ್ ಶುಕ್ರಿ ಕಾನ್ರಾಡ್.
ನ್ಯೂಝಿಲೆಂಡ್ ವಿರುದ್ಧದ ಸೋಲನ್ನು ಚೋಕ್ ಎಂದು ಒಪ್ಪಿಕೊಳ್ಳಲಾಗುವುದಿಲ್ಲ. ಏಕೆಂದರೆ ಇದು ನಮಗೆ ಬಿದ್ದಂತಹ ಏಟು. ನಾವು ಅಷ್ಟೊಂದು ಹೀನಾಯವಾಗಿ ಸೋತಿದ್ದೇವೆ. ನಾವು ಪಂದ್ಯದಲ್ಲಿ ಗೆಲ್ಲುವ ಸಣ್ಣ ಲಕ್ಷಣ ತೋರಿದ್ದರೆ ಮಾತ್ರ ಅದನ್ನು ‘ಚೋಕ್’ ಎನ್ನಬಹುದಿತ್ತು.
ನಮಗೆ ಅಂತಹ ಯಾವುದೇ ಅವಕಾಶ ಇರಲಿಲ್ಲ. ಸೌತ್ ಆಫ್ರಿಕಾದಲ್ಲಿ ನಾವು ಇದಕ್ಕೆ ‘ಮೋರ್ಡ್’ (moered) ಎನ್ನುತ್ತೇವೆ. ಇಂದು ನಮಗೆ ಸರಿಯಾದ ‘ಸ್ನಾಟ್‌ಕ್ಲಾಪ್ಡ್’ (snotklapped) ಆಗಿದೆ. ಅಂದರೆ ಸೌತ್ ಆಫ್ರಿಕಾ ಭಾಷೆಯಲ್ಲಿ ಸರಿಯಾಗಿ ಒದೆ ತಿಂದಿದ್ದೇವೆ, ಒದ್ದು ಹೊರಹಾಕಿದ್ದಾರೆ ಎನ್ನುತ್ತೇವೆ. ಅಂತಹದೊಂದು ಹೀನಾಯ ಸೋಲು ಇದಾಗಿದೆ ಶುಕ್ರಿ ಕಾನ್ರಾಡ್ ಹೇಳಿದ್ದಾರೆ.
ಇದಕ್ಕೂ ಮುನ್ನ ಶುಕ್ರಿ ಕಾನ್ರಾಡ್, ಈ ಬಾರಿ ಸೌತ್ ಆಫ್ರಿಕಾ ತಂಡ ವಿಶ್ವಕಪ್ ಮುಡಿಗೇರಿಸಿಕೊಳ್ಳಲಿದೆ ಎಂದಿದ್ದರು. ಅಲ್ಲದೆ ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಗೆದ್ದ ಬಳಿಕ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ನಮ್ಮ ತವರು ಮೈದಾನವಾಗಿದೆ.
ಇದನ್ನೂ ಓದಿ: RCB ಪರ 3 ವರ್ಷ ಬೆಂಚ್ ಕಾದಿದ್ದ ಫಿನ್ ಅಲೆನ್
ಹೀಗಾಗಿ ಇಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೀಗ ಸೆಮಿಫೈನಲ್ ಪಂದ್ಯದಲ್ಲಿ ಹೀನಾಯವಾಗಿ ಸೋತು ಹೊರಬಿದ್ದಿದ್ದಾರೆ. ಈ ಸೋಲನ್ನು ಶುಕ್ರಿ ಕಾನ್ರಾಡ್ ಸೌತ್ ಆಫ್ರಿಕಾ ತಂಡಕ್ಕೆ ಬಿದ್ದಂತಹ ಪೆಟ್ಟು ಎಂದು ಬಣ್ಣಿಸಿದ್ದಾರೆ.
