‘ನಮ್ಮ ಪರಮಾಣು ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ’: ಇರಾನ್ ಅಧ್ಯಕ್ಷರ ಗುಡುಗು – Kannada News | No one can deny Iran its nuclear rights, says president Masoud Pezeshkian

ಟೆಹ್ರಾನ್, ಏಪ್ರಿಲ್ 19: ಇರಾನ್‌ನ ಪರಮಾಣು ಕಾರ್ಯಕ್ರಮದ ಸುತ್ತಲಿನ ಅಂತರಾಷ್ಟ್ರೀಯ ಬಿಕ್ಕಟ್ಟು ಮತ್ತೆ ತಾರಕಕ್ಕೇರಿದೆ. “ಒಂದು ರಾಷ್ಟ್ರದ ಕಾನೂನುಬದ್ಧ ಹಕ್ಕುಗಳನ್ನು ಕಸಿದುಕೊಳ್ಳಲು ಅಮೆರಿಕ ಯಾರು?” ಎಂದು ಪ್ರಶ್ನಿಸುವ ಮೂಲಕ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ (Masoud Pezeshkian) ಭಾನುವಾರ (ಏಪ್ರಿಲ್ 19) ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚಿನ ಮಾತುಕತೆಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ತನ್ನ ಪರಮಾಣು ಹಕ್ಕುಗಳನ್ನು ತ್ಯಜಿಸಬೇಕು ಎಂದು ಪ್ರತಿಪಾದಿಸಿದ್ದರು. ಇದಕ್ಕೆ ಕಠಿಣವಾಗಿ ಪ್ರತಿಕ್ರಿಯಿಸಿದ ಪೆಜೆಶ್ಕಿಯಾನ್, “ಟ್ರಂಪ್ ಅವರು ಇರಾನ್ ತನ್ನ ಪರಮಾಣು ಹಕ್ಕುಗಳನ್ನು ಬಳಸಬಾರದು ಎಂದು ಹೇಳುತ್ತಾರೆ, ಆದರೆ ನಾವು ಮಾಡಿದ ‘ಅಪರಾಧ’ ಏನು ಎಂಬುದನ್ನು ಅವರು ಹೇಳುತ್ತಿಲ್ಲ. ಒಂದು ಸಾರ್ವಭೌಮ ರಾಷ್ಟ್ರದ ಹಕ್ಕುಗಳನ್ನು ಕಿತ್ತುಕೊಳ್ಳಲು ಅವರ ಅಧಿಕಾರವೇನು?” ಎಂದು ಪ್ರಶ್ನಿಸಿದ್ದಾರೆ.

ಸಂಘರ್ಷದ ಹಾದಿ ಮತ್ತು ಮಾತುಕತೆ

2026ರ ಫೆಬ್ರುವರಿ ಕೊನೆಯಲ್ಲಿ ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವೆ ದೊಡ್ಡ ಮಟ್ಟದ ಮಿಲಿಟರಿ ಸಂಘರ್ಷ ಆರಂಭವಾಯಿತು. ತಿಂಗಳು ಕಾಲ ನಡೆದ ಭೀಕರ ಸಂಘರ್ಷದ ಬಳಿಕ ಈಗ ಕದನ ವಿರಾಮ ಸ್ಥಿತಿ ಇದೆ. ಪ್ರಸ್ತುತ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಶಾಂತಿ ಮಾತುಕತೆಗಳು ನಡೆಯುತ್ತಿವೆ. ಇರಾನ್​ನ ಪರಮಾಣು ಯೋಜನೆಗಳನ್ನು ನಿಲ್ಲಿಸಬೇಕು, ಪರಮಾಣು ಶಸ್ತ್ರಾಸ್ತ್ರ ತಯಾರಿಕೆ ತ್ಯಜಿಸಬೇಕು ಎಂಬುದು ಅಮೆರಿಕದ ಹಠ. ಆದರೆ, ಶಾಂತಿ ಮತ್ತು ವಿದ್ಯುತ್ ಉದ್ದೇಶಕ್ಕೆ ಪರಮಾಣು ಬಳಸುತ್ತಿರುವುದಾಗಿ ಇರಾನ್ ಹೇಳಿದೆ.

ಇದನ್ನೂ ಓದಿ: ಜಾಗತಿಕ ರಾಜಕೀಯದಲ್ಲಿ ಸಂಚಲನ, ಟ್ರಂಪ್ ಮತ್ತು ಪಾಕ್ ಸೇನಾ ಮುಖ್ಯಸ್ಥರ ‘ದೋಸ್ತಿ’ ಮೇಲೆ ಅಮೆರಿಕ ಗುಪ್ತಚರ ಇಲಾಖೆ ಕಣ್ಣು

ಪರಮಾಣು ಶಕ್ತಿ ಉತ್ಪಾದನೆಗೆ ಬೇಕಾದ ಯುರೇನಿಯಂ ಎನ್​ರಿಚ್ಮೆಂಟ್ ಅನ್ನು ಇರಾನ್ ಸಾಕಷ್ಟು ತಯಾರಿಸಿದೆ. ಇನ್ನು ಸ್ವಲ್ಪ ಮಟ್ಟದ ಯುರೇನಿಯಂ ಎನ್​ರಿಚ್ಮೆಂಟ್ ಮಾಡಿದರೆ ಅದು ಪರಮಾಣು ಶಸ್ತ್ರ ತಯಾರಿಕೆಗೆ ಉಪಯೋಗಿಸಬಲ್ಲ ದರ್ಜೆಯದ್ದಾಗಿರುತ್ತದೆ. ಈ ವಿಚಾರಕ್ಕೆ ಅಮೆರಿಕ ತಕರಾರು ಹೊಂದಿದೆ.

ಸದ್ಯ 15 ದಿನಗಳ ಕದನ ವಿರಾಮವು ಇದೇ ಬುಧವಾರದಂದು (ಏಪ್ರಿಲ್ 23) ಅಂತ್ಯಗೊಳ್ಳಲಿದೆ. ತನ್ನ ಪರಮಾಣು ಹಕ್ಕು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಇರಾನ್ ಅಧ್ಯಕ್ಷರು ಹೇಳಿರುವುದು, ಈ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ.

ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟು

ಪರಮಾಣು ಹಕ್ಕಿನ ಜೊತೆಗೆ, ವಿಶ್ವದ ಅತಿ ದೊಡ್ಡ ತೈಲ ಸಾರಿಗೆ ಮಾರ್ಗವಾದ ಹೋರ್ಮುಜ್ ಜಲಸಂಧಿಯನ್ನು (Strait of Hormuz) ಬಂದ್ ಮಾಡುವ ಎಚ್ಚರಿಕೆಯನ್ನು ಇರಾನ್ ಪುನರುಚ್ಚರಿಸಿದೆ.

“ನಮ್ಮ ಬಂದರುಗಳ ಮೇಲೆ ಅಮೆರಿಕ ದಿಗ್ಬಂಧನ ಹೇರಿರುವಾಗ, ಇತರ ದೇಶಗಳ ಹಡಗುಗಳು ಸುಗಮವಾಗಿ ಸಂಚರಿಸಲು ನಾವು ಬಿಡುವುದಿಲ್ಲ” ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಘಾಲಿಬಾಫ್ ಹೇಳಿದ್ದಾರೆ.

ಇದನ್ನೂ ಓದಿ: ಅಮೆರಿಕದಿಂದಾಗಿ ಮತ್ತೆ ಹಾರ್ಮುಜ್ ಜಲಸಂಧಿ ಮುಚ್ಚಿದ ಇರಾನ್

ಇರಾನ್‌ನ ಬೇಡಿಕೆಗಳೇನು?

  • ಯುದ್ಧವನ್ನು ‘ಗೌರವಯುತವಾಗಿ’ (With Dignity) ಕೊನೆಗೊಳಿಸಲು ಇರಾನ್ ಬಯಸುತ್ತಿದೆ.
  • ಅಮೆರಿಕ ಹೇರಿರುವ ಆರ್ಥಿಕ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು ಎಂಬುದು ಇರಾನ್‌ನ ಪ್ರಮುಖ ಷರತ್ತು.
  • ತನ್ನ ಬಳಿ ಇರುವ ಸಂಸ್ಕರಿಸಿದ ಯುರೇನಿಯಂ ಅನ್ನು ಅಮೆರಿಕಕ್ಕೆ ಹಸ್ತಾಂತರಿಸುವ ಪ್ರಸ್ತಾವನೆಯನ್ನು ಇರಾನ್ ತಳ್ಳಿಹಾಕಿದೆ.

ವಿಶ್ವಸಂಸ್ಥೆಯ ನಿಯಮಗಳ ಪ್ರಕಾರ ಶಾಂತಿಯುತ ಉದ್ದೇಶಗಳಿಗಾಗಿ ಪರಮಾಣು ತಂತ್ರಜ್ಞಾನ ಹೊಂದುವ ಹಕ್ಕು ನಮಗಿದೆ ಎಂದು ಇರಾನ್ ವಾದಿಸುತ್ತಿದೆ. ಆದರೆ ಅಮೆರಿಕವು ಇದು ಅಣ್ವಸ್ತ್ರ ತಯಾರಿಕೆಗೆ ದಾರಿ ಮಾಡಿಕೊಡುತ್ತದೆ ಎಂಬ ಆತಂಕದಲ್ಲಿದೆ. ಮುಂಬರುವ ದಿನಗಳಲ್ಲಿ ನಡೆಯುವ ರಾಜತಾಂತ್ರಿಕ ಮಾತುಕತೆಗಳು ಈ ಪ್ರದೇಶದ ಭವಿಷ್ಯವನ್ನು ನಿರ್ಧರಿಸಲಿವೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *