ನಮ್ಮ ಮೆಟ್ರೋ ರೆಡ್ ಲೈನ್ ವೆಚ್ಚ ಕಡಿತಕ್ಕೆ ಒಂದು ಸ್ಟೇಷನನ್ನೇ ಕೈಬಿಡಲು ನಿರ್ಧರಿಸಿದ ಬಿಎಂಆರ್​ಸಿಎಲ್! – Kannada News | Bengaluru Metro Red Line: BMRCL Drops One Underground Station to Cut Costs by Rs 2,920 Crore for Central Approval

ರೆಡ್ ಲೈನ್ ಮೆಟ್ರೋ ಮಾರ್ಗImage Credit source: tv9

ಬೆಂಗಳೂರು, ಜೂನ್ 19: ಬೆಂಗಳೂರಿನ ಸಂಚಾರ ದಟ್ಟಣೆಗೆ ದೊಡ್ಡ ಮಟ್ಟದ ಪರಿಹಾರ ನೀಡಲಿರುವ ಬಹುನಿರೀಕ್ಷಿತ ಸರ್ಜಾಪುರ-ಹೆಬ್ಬಾಳ ಮೆಟ್ರೋ ‘ರೆಡ್ ಲೈನ್’ (Red Line Metro) ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ಪಡೆದುಕೊಳ್ಳಲು ಬಿಎಂಆರ್‌ಸಿಎಲ್ (BMRCL) ಮಹತ್ವದ ಹೆಜ್ಜೆ ಇಟ್ಟಿದೆ. ಈ ಕಾರಿಡಾರ್‌ನ ವಿಸ್ತೃತ ಯೋಜನಾ ವರದಿಯ (DPR) ಅಂದಾಜು ವೆಚ್ಚ ಅತಿ ಹೆಚ್ಚಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಎರಡು ಬಾರಿ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರದ ನಿಯಮಾವಳಿಗಳಿಗೆ ಪೂರಕವಾಗಿರಲು ಹಾಗೂ ಯೋಜನೆಯನ್ನು ಹಳಿಗೆ ತರಲು ಬಿಎಂಆರ್‌ಸಿಎಲ್ ಸುಮಾರು 2,920 ಕೋಟಿ ರೂಪಾಯಿಗಳ ವೆಚ್ಚವನ್ನು ಕಡಿತಗೊಳಿಸಲು ನಿರ್ಧರಿಸಿದ್ದು, ಇದಕ್ಕಾಗಿ ಮಾರ್ಗದಲ್ಲಿದ್ದ ಒಂದು ಪ್ರಮುಖ ನಿಲ್ದಾಣವನ್ನೇ ಕೈಬಿಡಲು ಮುಂದಾಗಿದೆ.

ಮುಖ್ಯಾಂಶಗಳು

  • ವೆಚ್ಚ ಕಡಿತಕ್ಕೆ ಬಿಎಂಆರ್‌ಸಿಎಲ್ ಬಿಗ್ ಪ್ಲಾನ್.
  • ಪಶು ವೈದ್ಯಕೀಯ ಕಾಲೇಜು ನಿಲ್ದಾಣ ಕಡಿತ.
  • ಕೇಂದ್ರದಿಂದ ಶೀಘ್ರದಲ್ಲೇ ಸಿಗಲಿದೆ ಗ್ರೀನ್ ಸಿಗ್ನಲ್.

ಪಶು ವೈದ್ಯಕೀಯ ಕಾಲೇಜು ನಿಲ್ದಾಣಕ್ಕೆ ಕೊಕ್

ಸರ್ಜಾಪುರದಿಂದ ಹೆಬ್ಬಾಳ ನಡುವಿನ ಒಟ್ಟು 37 ಕಿಲೋಮೀಟರ್ ಉದ್ದದ ಈ ಯೋಜನೆಗೆ 2024ರಲ್ಲಿ ರಾಜ್ಯ ಸರ್ಕಾರ 28,405 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಒಪ್ಪಿಗೆ ನೀಡಿತ್ತು. ಅಂದರೆ ಪ್ರತಿ ಕಿಲೋಮೀಟರ್‌ಗೆ ಅಂದಾಜು 776.3 ಕೋಟಿ ರೂಪಾಯಿ ವೆಚ್ಚವಾಗುತ್ತಿತ್ತು. ಇದರಲ್ಲಿ 17 ಎಲಿವೇಟೆಡ್ (ಮೇಲ್ಸೇತುವೆ) ಮತ್ತು 11 ಅಂಡರ್‌ಗ್ರೌಂಡ್ (ಸುರಂಗ) ನಿಲ್ದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಕೇಂದ್ರದ ಆಕ್ಷೇಪದ ಬಳಿಕ ರಚನೆಯಾದ ಸ್ವತಂತ್ರ ಸಮಿತಿಯ ಶಿಫಾರಸಿನ ಮೇರೆಗೆ, ಮೇಖ್ರಿ ಸರ್ಕಲ್ ಹಾಗೂ ಗಂಗಾನಗರ ನಡುವೆ ನಿರ್ಮಾಣವಾಗಬೇಕಿದ್ದ ‘ಪಶು ವೈದ್ಯಕೀಯ ಕಾಲೇಜು (Veterinary College)’ ಅಂಡರ್‌ಗ್ರೌಂಡ್ ಮೆಟ್ರೋ ನಿಲ್ದಾಣವನ್ನು ಪರಿಷ್ಕೃತ ವರದಿಯಲ್ಲಿ ಕೈಬಿಡಲಾಗಿದೆ. ಬಿಎಂಆರ್‌ಸಿಎಲ್‌ನ ಈ ನಿರ್ಧಾರಕ್ಕೆ ಆ ಭಾಗದ ಪ್ರಯಾಣಿಕರು ಕೊಂಚ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಕೇಂದ್ರದಿಂದ ಗ್ರೀನ್ ಸಿಗ್ನಲ್ ಸಾಧ್ಯತೆ

ಭೂಸ್ವಾಧೀನ, ಸುರಂಗ ಕೊರೆಯುವಿಕೆ, ಹಳಿ ಜೋಡಣೆ, ಸಿಗ್ನಲಿಂಗ್, ವಿದ್ಯುತ್ ಸರಬರಾಜು ಮತ್ತು ರೈಲು ಕೋಚ್‌ಗಳ ಪೂರೈಕೆ ಸೇರಿದಂತೆ 13 ಪ್ರಮುಖ ಅಂಶಗಳನ್ನು ಆಧರಿಸಿ ಬಿಎಂಆರ್‌ಸಿಎಲ್ ಈ ಹಿಂದೆ ವೆಚ್ಚವನ್ನು ಸಮರ್ಥಿಸಿಕೊಂಡಿತ್ತು. ಆದರೆ ಯೋಜನೆ ಮತ್ತಷ್ಟು ವಿಳಂಬವಾಗುವುದನ್ನು ತಪ್ಪಿಸಲು ಸದ್ಯ 2,920 ಕೋಟಿ ರೂಪಾಯಿಗಳನ್ನು ಕಡಿತಗೊಳಿಸಿ ಹೊಸ ಡಿಪಿಆರ್ ಸಿದ್ಧಪಡಿಸಲಾಗಿದೆ. ಈ ಪರಿಷ್ಕೃತ ವರದಿಯನ್ನು ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತಿದ್ದು, ವೆಚ್ಚ ಕಡಿಮೆಯಾಗಿರುವುದರಿಂದ ಈ ಬಾರಿ ಕೇಂದ್ರ ಸಚಿವಾಲಯದಿಂದ ‘ರೆಡ್ ಲೈನ್’ ಯೋಜನೆಗೆ ಶೀಘ್ರದಲ್ಲೇ ಹಸಿರು ನಿಶಾನೆ ಸಿಗುವ ದಟ್ಟ ಮುನ್ಸೂಚನೆ ಇದೆ. ಯೋಜನೆಗೆ ಅನುಮೋದನೆ ಸಿಗುವ ಸಾಧ್ಯತೆ ಹೆಚ್ಚಿರುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *