T20 World Cup 2026: 20 ತಂಡಗಳೊಂದಿಗೆ ಶುರುವಾದ ಟಿ20 ವಿಶ್ವಕಪ್ನಲ್ಲಿ ಈಗ ಉಳಿದಿರುವುದು ಕೇವಲ 4 ತಂಡಗಳು ಮಾತ್ರ. ಇನ್ನುಳಿದ 16 ತಂಡಗಳ ವಿಶ್ವಕಪ್ ಅಭಿಯಾನ ಅಂತ್ಯವಾಗಿದೆ. ಈ ನಾಲ್ಕು ತಂಡಗಳು ನಾಕೌಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಲಿದೆ. ಅಂದರೆ ಸೆಮಿಫೈನಲ್ನಲ್ಲಿ ಕಣಕ್ಕಿಳಿಯಲಿದೆ.
ಸೆಮಿಫೈನಲ್ ಪಂದ್ಯಗಳು ಮಾರ್ಚ್ 4 ಮತ್ತು 5 ರಂದು ನಡೆಯಲಿದ್ದು, ಇಲ್ಲಿ ಭಾರತ, ಇಂಗ್ಲೆಂಡ್, ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ತಂಡಗಳು ಕಣಕ್ಕಿಳಿಯಲಿವೆ. ಅಂದರೆ ಗ್ರೂಪ್- 1 ರಿಂದ ಸೆಮಿಫೈನಲ್ಗೇರಿರುವ ತಂಡಗಳು ಗ್ರೂಪ್-2 ನಿಂದ ಅರ್ಹತೆ ಪಡೆದ ತಂಡಗಳ ವಿರುದ್ಧ ಸೆಣಸಲಿದೆ.
ಮಾರ್ಚ್ 4 ರಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ಗೆ ಪ್ರವೇಶಿಸಲಿದೆ.
ಮಾರ್ಚ್ 5 ರಂದು ಜರುಗಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಜಯಗಳಿಸುವ ತಂಡ ಟಿ20 ವಿಶ್ವಕಪ್ನ ಫೈನಲ್ಗೇರಲಿದೆ.
ಟಿ20 ವಿಶ್ವಕಪ್ನ ಫೈನಲ್ ಪಂದ್ಯವು ಮಾರ್ಚ್ 8 ರಂದು, ಭಾನುವಾರ ನಡೆಯಲಿದೆ. ಈ ಮಹಾ ಸಮರಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಅದರಂತೆ ಭಾರತ/ಸೌತ್ ಆಫ್ರಿಕಾ/ ಇಂಗ್ಲೆಂಡ್/ನ್ಯೂಝಿಲೆಂಡ್ ಈ ನಾಲ್ಕು ತಂಡಗಳಲ್ಲಿ ಒಂದು ಟೀಮ್ ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಲಿದೆ.
