
ನವದೆಹಲಿ, ಮಾರ್ಚ್ 25: ಹರಿಯಾಣದ ಗುರುಗ್ರಾಮದಲ್ಲಿ 4 ವರ್ಷದ ಹೆಣ್ಣುಮಗುವಿನ ಮೇಲೆ ಅತ್ಯಾಚಾರ ನಡೆದಿತ್ತು. ಈ ಪ್ರಕರಣದ ತನಿಖೆ ವೇಳೆ ಹರಿಯಾಣ ಪೊಲೀಸರು ಸೂಕ್ಷ್ಮತೆಯಿಲ್ಲದೆ ವರ್ತಿಸಿದ್ದಾರೆ, ಮಗುವಿನ ಬಳಿ ಯಾವುದೇ ಪುರಾವೆಗಳಿಲ್ಲವೆಂದು ನಿರೂಪಿಸಲು ಪ್ರಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court) ಹರಿಯಾಣ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. 4 ವರ್ಷದ ಮಗುವಿನ ಮೇಲಿನ ಅತ್ಯಾಚಾರದಲ್ಲಿ ಸಾಕ್ಷಿಗಳು ಸ್ಪಷ್ಟವಾಗಿದ್ದರೂ ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ಹೊರಹಾಕಿದೆ. ಹಾಗೇ, ಅತ್ಯಾಚಾರಕ್ಕೊಳಗಾದ ಮಗು ಮತ್ತು ಆಕೆಯ ಪೋಷಕರೊಂದಿಗೆ ಪೊಲೀಸ್ ಅಧಿಕಾರಿಗಳ ನಡವಳಿಕೆಯನ್ನು ನ್ಯಾಯಾಲಯವು ಟೀಕಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಈ ಪ್ರಕರಣದ ತನಿಖೆಗೆ ಎಸ್ಐಟಿ ರಚಿಸಲು ಆದೇಶಿಸಿದೆ. “ಸಂಪೂರ್ಣ ಮನುಷ್ಯ ಸಂವೇದನೆ”ಯೊಂದಿಗೆ ಈ ಪ್ರಕರಣವನ್ನು ಹೊಸದಾಗಿ ತನಿಖೆ ಮಾಡಲು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲು ಆದೇಶಿಸಲಾಗಿದೆ. ಹಾಗೇ, ಗುರುಗ್ರಾಮ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅರೋರಾ ಮತ್ತು ಇತರ ಹಿರಿಯ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಕೂಡ ನೀಡಿದೆ. ಮಗುವಿನ ವೈದ್ಯಕೀಯ ವರದಿಯನ್ನು ಬದಲಾಯಿಸಿದ ವೈದ್ಯರ ವಿರುದ್ಧವೂ ನ್ಯಾಯಾಲಯವು ದೋಷಾರೋಪಣೆ ಮಾಡಿದೆ.
“ಕಮಿಷನರ್ನಿಂದ ಸಬ್-ಇನ್ಸ್ಪೆಕ್ಟರ್ವರೆಗಿನ ಇಡೀ ಪೊಲೀಸ್ ಪಡೆ ಅತ್ಯಾಚಾರಕ್ಕೊಳಗಾದ ಆ ಮಗುವಿನ ಬಳಿ ಯಾವುದೇ ಪುರಾವೆಗಳಿಲ್ಲ ಅಥವಾ ಪೋಷಕರ ಬಳಿ ಯಾವುದೇ ಸಾಕ್ಷಿಗಳಿಲ್ಲ ಎಂದು ಸಾಬೀತುಪಡಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಇಂತಹ ಕೃತ್ಯ ಮಾಡಲು ನಿಮಗೆ ನಾಚಿಕೆಯಾಗಬೇಕು. ಸ್ವಲ್ಪವೂ ಮನುಷ್ಯತ್ವವಿಲ್ಲದೆ ಆ ಕುಟುಂಬದೊಂದಿಗೆ ವರ್ತಿಸಲಾಗಿದೆ” ಎಂದು ಸಿಜೆಐ ನೇತೃತ್ವದ ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: NCERT ಪುಸ್ತಕ ವಿವಾದ; ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಅಧ್ಯಾಯ ಬರೆದ ಲೇಖಕರಿಗೆ ಸುಪ್ರೀಂ ಕೋರ್ಟ್ ನಿಷೇಧ
ಗುರುಗ್ರಾಮದ ಪೊಲೀಸರ ನಿಷ್ಕ್ರಿಯತೆಯನ್ನು ಆರೋಪಿಸಿ ಮಗುವಿನ ಪೋಷಕರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಈ ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಿಸಲು ಪೊಲೀಸ್ ಇಲಾಖೆ ಎಲ್ಲ ರೀತಿಯ ಪ್ರಯತ್ನ ಪಟ್ಟಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದಿದೆ. ಇದಕ್ಕೂ ಮೊದಲು, ಆರೋಪಿಯ ಸಮ್ಮುಖದಲ್ಲಿ ಮ್ಯಾಜಿಸ್ಟ್ರೇಟ್ ಮಗುವನ್ನು ಹೇಗೆ ಪ್ರಶ್ನಿಸಿದರು ಎಂಬುದರ ಕುರಿತು ನ್ಯಾಯಾಲಯವು ಪೊಲೀಸರು ಮತ್ತು ಜಿಲ್ಲಾ ನ್ಯಾಯಾಂಗದಿಂದ ಉತ್ತರಗಳನ್ನು ಕೇಳಿತ್ತು.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ 6ರಿಂದ ಸೆಕ್ಷನ್ 10ಕ್ಕೆ ಅಪರಾಧವನ್ನು ಏಕೆ ಇಳಿಸಲಾಗಿದೆ? ಎಂದು ನ್ಯಾಯಪೀಠ ಕೇಳಿತು. ಸೆಕ್ಷನ್ 6 ಅಪರಾಧ ಸಾಬೀತಾದರೆ ಕನಿಷ್ಠ 20 ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ. ಸೆಕ್ಷನ್ 10ರ ಅಡಿಯಲ್ಲಿ 10 ವರ್ಷಗಳ ಜೈಲು ಶಿಕ್ಷೆಯನ್ನು ಮಾತ್ರ ನೀಡಲಾಗುತ್ತದೆ. ಇಲ್ಲಿಯೂ ಮಗುವಿನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಟೀಕಿಸಿದೆ. “ನೀವು ಆ 4 ವರ್ಷದ ಮಗುವಿನ ಮುಗ್ಧತೆಯನ್ನು ಕೂಡ ನಂಬಿಲ್ಲ. ಆ ಮಗುವಿಗೆ ಸುಳ್ಳು ಹೇಳಲು ಕೂಡ ಬರುವುದಿಲ್ಲ. ಆದರೂ ಆ ಮಗುವಿಗೆ ಹಾಗೂ ಅವರ ಪೋಷಕರಿಗೆ ಹಿಂಸೆ ನೀಡಿದ್ದೀರಿ. ನಿಮಗೆ ಬೇಕಾದಂತೆ ಹೇಳಿಕೆ ಪಡೆಯಲು ಯತ್ನಿಸಿದ್ದೀರಿ. ಇದು ನಾಚಿಕೆಗೇಡು. ರಾಜ್ಯಕ್ಕೆ ಕಾನೂನಿನ ಬಗ್ಗೆ ಗೌರವವಿದ್ದರೆ ಆ ಅಧಿಕಾರಿಗಳನ್ನು ತಕ್ಷಣ ವರ್ಗಾಯಿಸಬೇಕು. ಘಟನೆ ನಡೆದ ಸ್ಥಳದಲ್ಲಿ ಸಿಸಿಟಿವಿ ಇಲ್ಲ ಎಂದು ನೀವು ಹೇಳುತ್ತೀರಿ. 15 ದಿನಗಳಿಂದ ನೀವು ಏನನ್ನೂ ಮಾಡಿಲ್ಲ. ಈ ಪ್ರಕರಣ ನಮ್ಮ ಗಮನಕ್ಕೆ ಬಂದ ತಕ್ಷಣ ನೀವು ಬಂಧಿಸಲು ಪ್ರಾರಂಭಿಸಿದಿರಿ. ಪೊಲೀಸರು ಈ ರೀತಿ ಸಂವೇದನಾರಹಿತರಾಗಿ ಕೆಲಸ ಮಾಡಬಾರದು” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ.
ಇದನ್ನೂ ಓದಿ: ಯಾರನ್ನೂ ನಂಬಬೇಡಿ; ಮದುವೆಗೂ ಮುನ್ನ ಲೈಂಗಿಕ ಕ್ರಿಯೆ ನಡೆಸದಂತೆ ಸುಪ್ರೀಂ ಕೋರ್ಟ್ ಸಲಹೆ
“ಅಫಿಡವಿಟ್ನಲ್ಲಿ ಎಲ್ಲೆಡೆ ಮಗುವಿನ ಹೆಸರನ್ನು ಉಲ್ಲೇಖಿಸಲಾಗಿದೆ. ಸಂತ್ರಸ್ತರ ಹೆಸರನ್ನು ಬಹಿರಂಗಪಡಿಸಬಾರದು ಎಂಬ ಕಿಂಚಿತ್ ತಿಳುವಳಿಕೆಯೂ ಪೊಲೀಸರಿಗೆ, ವಕೀಲರಿಗೆ ಇಲ್ಲವೇ? ಇದುವರೆಗೂ ಆ ಮಗುವಿನ ಮನೆಗೆ ಪೊಲೀಸರು ಭೇಟಿ ನೀಡಿಲ್ಲ. ಪೊಲೀಸರು ಮಹಾರಾಜರೇ? ಅವರು ಯಾಕೆ ಮಗುವಿನ ಮನೆಗೆ ತೆರಳಿ ಮಾಹಿತಿ ಪಡೆಯಲಿಲ್ಲ? ಪೊಲೀಸರು ಪದೇಪದೆ ಪೊಲೀಸ್ ಠಾಣೆಗೆ ಕರೆಸಿ ಇನ್ನಿಲ್ಲದ ರೀತಿ ಪ್ರಶ್ನಿಸಿ ಮಗುವಿಗೆ ಮಾನಸಿಕ ಹಿಂಸೆ ನೀಡಿದ್ದೀರಿ. ಇದರಿಂದ ಮಗುವಿನ ಆಘಾತ ಇನ್ನಷ್ಟು ಹೆಚ್ಚಾಗಿದೆ. ಇಂತಹ ಬೇಜವಾಬ್ದಾರಿ ವರ್ತನೆಯನ್ನು ಕೋರ್ಟ್ ಸಹಿಸುವುದಿಲ್ಲ” ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ.
“ಈ ಪ್ರಕರಣದಲ್ಲಿ ಇನ್ನೂ ಆಳವಾದ ತನಿಖೆಯ ಅಗತ್ಯವಿದೆ. ಮಗು ಮತ್ತು ಆಕೆಯ ಪೋಷಕರ ಘನತೆಯನ್ನು ಕಾಪಾಡುವ ಸಂಪೂರ್ಣ ಮಾನವೀಯ ವಿಧಾನದೊಂದಿಗೆ ಈ ಘಟನೆಯನ್ನು ಅತ್ಯಂತ ಸೂಕ್ಷ್ಮ ರೀತಿಯಲ್ಲಿ ಸಂಪೂರ್ಣವಾಗಿ ತನಿಖೆ ಮಾಡಬೇಕೆಂದು ನಮಗೆ ತೋರುತ್ತದೆ. ಇದು ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸಲಾದ ಒಂದು ಸ್ಪಷ್ಟ ಪ್ರಕರಣವಾಗಿದೆ. ಹೀಗಾಗಿ, ಹೊಸದಾದ ಎಸ್ಐಟಿ ರಚನೆಯಾಬೇಕು. ಹೊಸದಾಗಿ ತನಿಖೆ ನಡೆಯಬೇಕು” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.
ಏನಿದು ಪ್ರಕರಣ?:
ಗುರುಗ್ರಾಮದ ಸೆಕ್ಟರ್ 54ರಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಸುಮಾರು 2 ತಿಂಗಳ ಕಾಲ 4 ವರ್ಷದ ಮಗುವಿನ ಮೇಲೆ ಮನೆಕೆಲಸದಾಕೆಯ ಜೊತೆಗೆ ಬರುತ್ತಿದ್ದ ಪುರುಷರು ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಬಗ್ಗೆ ಮಗುವಿನ ಪೋಷಕರು ಮಾಡಿದ ಆರೋಪಗಳ ನಂತರ, ಫೆಬ್ರವರಿ 4ರಂದು ಸೆಕ್ಟರ್ 53 ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.
ಪೊಲೀಸರ ಪ್ರಕಾರ, ಈ ಘಟನೆ ಡಿಸೆಂಬರ್ 2025 ಮತ್ತು ಜನವರಿ 2026ರ ನಡುವೆ ನಡೆದಿದ್ದರೂ ಆ ಬಾಲಕಿ ತನ್ನ ತಾಯಿಗೆ ತನ್ನ ಮೇಲಿನ ದೌರ್ಜನ್ಯದ ಬಗ್ಗೆ ತಿಳಿಸಿದ ನಂತರ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಆ ಮಗು ಮೊದಮೊದಲು ತನ್ನ ಅಪ್ಪ-ಅಮ್ಮನ ಬಳಿ ಯಾವ ವಿಚಾರವನ್ನೂ ಹೇಳಿರಲಿಲ್ಲ. ಯಾರಿಗೂ ಹೇಳಬಾರದೆಂದು ಮನೆಕೆಲಸದಾಕೆ ಆ ಮಗುವಿಗೆ ಹೆದರಿಸಿದ್ದಳು. ಮನೆಯಲ್ಲಿ ಆ ಮಗುವಿನ ಪೋಷಕರು ಇಲ್ಲದಿದ್ದಾಗ ಈ ಅತ್ಯಾಚಾರ ನಡೆಸಲಾಗುತ್ತಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ