ನಾನು ಅಷ್ಟೊಂದು ಹೆದರಿದ್ದೆ… ಕೈಲ್ ಜೇಮಿಸನ್ ಬಹಿರಂಗ ಹೇಳಿಕೆ – Kannada News | Kyle Jamieson Shaken by 15 Year Old Vaibhav Sooryavanshi

ವಯಸ್ಸು ಜಸ್ಟ್​ ನಂಬರ್ ಅಷ್ಟೇ… ಎಂಬುದನ್ನು ವೈಭವ್ ಸೂರ್ಯವಂಶಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಐಪಿಎಲ್ ಇತಿಹಾಸದ ಅತ್ಯಂತ ಕಿರಿಯ ಆಟಗಾರನ ಆಕ್ರಮಣಕಾರಿ ಆಟಕ್ಕೆ ಬೆಚ್ಚಿಬಿದ್ದಿರುವ ಕೈಲ್ ಜೇಮಿಸನ್, ವೈಭವ್‌ರನ್ನು ನೋಡಿ ತಾನು ಭಯಭೀತನಾಗಿದ್ದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಕುತೂಹಲಕಾರಿ ವಿಷಯ ಎಂದರೆ ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಯ ವಿಕೆಟ್ ಅನ್ನು ಜೇಮಿಸನ್ ಅವರೇ ಪಡೆದಿದ್ದರು. ಇದೀಗ ವಿಕೆಟ್ ಪಡೆದಿದ್ದಕ್ಕಿಂತ ಹೆಚ್ಚಾಗಿ, ವೈಭವ್ ಸೂರ್ಯವಂಶಿ ಬಗ್ಗೆ ನೀಡಿದ ಹೇಳಿಕೆ ಈಗ ಎಲ್ಲೆಡೆ ವೈರಲ್ ಆಗಿದೆ.

ಮೇ 1, 2026 ರಂದು ನಡೆದ ಪಂದ್ಯದಲ್ಲಿ, ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದ ವೈಭವ್ ಸೂರ್ಯವಂಶಿ, ಜೇಮಿಸನ್ ಎಸೆದ ಮೊದಲ ಎಸೆತವನ್ನೇ ಬೌಂಡರಿಗಟ್ಟುವ ಮೂಲಕ ತಮ್ಮ ಬ್ಯಾಟಿಂಗ್ ಪರಾಕ್ರಮ ಮೆರೆದಿದ್ದರು. ಆದಾಗ್ಯೂ, ಮರು ಎಸೆತದಲ್ಲೇ ಜೇಮಿಸನ್ ಒಂದು ಅದ್ಭುತ ಯಾರ್ಕರ್ ಮೂಲಕ ವೈಭವ್ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ವಿಕೆಟ್ ಪಡೆದ ಖುಷಿಯಲ್ಲಿ ಜೇಮಿಸನ್ ಅತ್ಯಂತ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು. ಕೇವಲ 15 ವರ್ಷದ ಬಾಲಕನ ಎದುರು ಇಷ್ಟೊಂದು ಅಗ್ರೆಸಿವ್ ಆಗಿ ವರ್ತಿಸಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶಗಳು ವ್ಯಕ್ತವಾಗಿದ್ದವು. ಈ ಆಕ್ರೋಶದ ನಡುವೆ ಇದೀಗ ಜೇಮಿಸನ್ ನೀಡಿರುವ ಹೇಳಿಕೆ ಇದೀಗ ಎಲ್ಲರ ಗಮನ ಸೆಳೆದಿದೆ.

 “ನಾನು ಅಷ್ಟೊಂದು ಹೆದರಿದ್ದೆ…”

ಪಂದ್ಯದ ನಂತರ ಮಾತನಾಡಿದ ಕೈಲ್ ಜೇಮಿಸನ್, ತಾನು ಅಷ್ಟೊಂದು ಆಕ್ರಮಣಕಾರಿಯಾಗಿ ಸಂಭ್ರಮಿಸಲು ಕಾರಣವೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ. “ನನ್ನ ಜೀವನದಲ್ಲಿ ನಾನು ಎಂದಿಗೂ ಒಬ್ಬ 15 ವರ್ಷದ ಬಾಲಕನಿಗೆ ಈ ಮಟ್ಟಿಗೆ ಹೆದರಿರಲಿಲ್ಲ. ಆತ ಅಷ್ಟು ಭಯಾನಕ ಬ್ಯಾಟಿಂಗ್ ಮಾಡುತ್ತಾನೆ,” ಎಂದು ಜೇಮಿಸನ್ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.

ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಶೈಲಿ ಮತ್ತು ಅವರು ಬೌಲರ್‌ಗಳ ಮೇಲೆ ಹೇರುವ ಒತ್ತಡವು ತನ್ನನ್ನು ಆ ಮಟ್ಟಿಗೆ ಆತಂಕಕ್ಕೀಡು ಮಾಡಿತ್ತು ಎಂದು ಅವರು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದರೂ ನಾನು 15 ವರ್ಷದ ಹುಡುಗನಿಗೆ ಚೆಂಡೆಸೆಯಲು ಹೆದರಿದ್ದೇನೆ. ನನ್ನ ಜೀವನದಲ್ಲೇ ಒಬ್ಬ ಬಾಲಕನಿಗೆ ನಾನು ಎಂದಿಗೂ ಈ ಮಟ್ಟಿಗೆ ನಾನು ಹೆದರಿರಲಿಲ್ಲ ಎಂದು ಕೈಲ್ ಜೇಮಿಸನ್, ವೈಭವ್ ಸೂರ್ಯವಂಶಿಯ ಬ್ಯಾಟಿಂಗ್ ಪರಾಕ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ರಣರೋಚಕ ಪಂದ್ಯದಲ್ಲಿ 2 ರನ್​ಗಳ ಜಯ ಸಾಧಿಸಿ ಫೈನಲ್​ಗೇರಿದ ಹೈದರಾಬಾದ್

ವೈಭವ್ ಸೂರ್ಯವಂಶಿ ಈಗಾಗಲೇ ವಿಶ್ವದ ಪ್ರಮುಖ ವೇಗಿಗಳಾದ ಜಸ್​ಪ್ರೀತ್ ಬುಮ್ರಾ, ಜೋಶ್ ಹೇಝಲ್​ವುಡ್, ಕಗಿಸೊ ರಬಾಡ, ಭುವನೇಶ್ವರ್ ಕುಮಾರ್ ಅವರ ಬೆಂಡೆತ್ತಿದ್ದಾರೆ. ಇದಾಗ್ಯೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಬೇಗನೆ ವಿಕೆಟ್ ಒಪ್ಪಿಸಿದ್ದ ಕಾರಣಕ್ಕೆ ಮಿಚೆಲ್ ಸ್ಟಾರ್ಕ್​ ಹಾಗೂ ಕೈಲ್ ಜೇಮಿಸನ್ ಯುವ ದಾಂಡಿಗನ ಪರಾಕ್ರಮದಿಂದ ಪಾರಾಗಿದ್ದಾರೆ. ಇದಾಗ್ಯೂ ವೈಭವ್​ಗೆ ಚೆಂಡೆಸೆಯಲು ಬೌಲರ್​ಗಳು ಎಷ್ಟು ಭಯ ಪಡುತ್ತಿದ್ದಾರೆ ಎಂಬುದಕ್ಕೆ ಕೈಲ್ ಜೇಮಿಸನ್ ನೀಡಿರುವ ಹೇಳಿಕೆಯೇ ಸಾಕ್ಷಿ.

Source link

Leave a Reply

Your email address will not be published. Required fields are marked *