ನಾನು ಆಫ್ರಿಕನ್​​ ಅಲ್ಲ, ಭಾರತೀಯ: ಜನಾಂಗೀಯವಾಗಿ ನಿಂದಿಸಿದವರಿಗೆ ಕ್ರೀಡಾ ಸಾಧನೆ ಮೂಲಕ ಉತ್ತರ ನೀಡಿದ ಮಜ್ಗುಲ್ – Kannada News | Siddi Community’s Judo Pride: Rohit Majgul’s Inspiring Journey to Global Games

ಅಹಮದಾಬಾದ್: “ನನ್ನ ಗುಂಗುರು ಕೂದಲು ಮತ್ತು ರೂಪ ನೋಡಿ ಜನ ನನ್ನನ್ನು ಆಫ್ರಿಕನ್ ಎಂದು ಕರೆಯುತ್ತಾರೆ, ಜನಾಂಗೀಯವಾಗಿ ನಿಂದಿಸುತ್ತಾರೆ. ಆದರೆ ಒಂದು ದಿನ ಬರಲಿದೆ, ಅಂದು ಇದೇ ಜನ ನನ್ನೊಂದಿಗೆ ಫೋಟೋ ತೆಗೆದುಕೊಳ್ಳಲು ಸಾಲು ನಿಲ್ಲುತ್ತಾರೆ” – ಇದು 21 ವರ್ಷದ ಜೂಡೋ ಪಟು ರೋಹಿತ್ ಮಜ್ಗುಲ್ (Rohit Majgul) ಏಳು ವರ್ಷಗಳ ಹಿಂದೆ ತನಗೇ ತಾನು ಮಾಡಿಕೊಂಡಿದ್ದ ಶಪಥ. ಇಂದು ಆ ಮಾತು ನಿಜವಾಗಿದೆ. ರೋಹಿತ್ ಮಜ್ಗುಲ್ ಗುಜರಾತ್‌ನ ಜಂಬೂರ್ ಎಂಬ ಪುಟ್ಟ ಹಳ್ಳಿಯವರು. ಈ ಗ್ರಾಮವನ್ನು ‘ಮಿನಿ ಆಫ್ರಿಕಾ’ ಎಂದು ಕರೆಯಲಾಗುತ್ತದೆ. 2019ರಲ್ಲಿ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯ ವೇಳೆ ರೋಹಿತ್ ಅವರನ್ನು ನೋಡಿ ಕೆಲವರು ‘ಆಫ್ರಿಕನ್’ ಎಂದು ಗೇಲಿ ಮಾಡಿದ್ದರು. ಇದರಿಂದ ಮನನೊಂದಿದ್ದ ರೋಹಿತ್, ಕ್ರೀಡೆಯ ಮೂಲಕವೇ ತನ್ನ ಅಸ್ಮಿತೆಯನ್ನು ಸಾಬೀತುಪಡಿಸಲು ನಿರ್ಧರಿಸಿದರು.

ಕಳೆದ ವಾರ ನವದೆಹಲಿಯಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಹರಿಯಾಣದ ಗರ್ವಿತ್ ಹೂಡಾ ಅವರನ್ನು ಸೋಲಿಸುವ ಮೂಲಕ -66 ಕೆಜಿ ವಿಭಾಗದಲ್ಲಿ ರೋಹಿತ್ ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದಿದ್ದಾರೆ. ರೋಹಿತ್ ತಂದೆ ಬಶೀರ್ ಅವರು ಹೋಟೆಲ್‌ಗಳಲ್ಲಿ ಪ್ರವಾಸಿಗರಿಗೆ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ನೀಡಿ ಕುಟುಂಬವನ್ನು ಸಾಕುತ್ತಿದ್ದರು. ಮನೆಯಲ್ಲಿ ಸರಿಯಾದ ಕುಡಿಯುವ ನೀರು ಅಥವಾ ಮಲಗಲು ಮಂಚವೂ ಇಲ್ಲದ ಕಡು ಬಡತನದಲ್ಲಿ ರೋಹಿತ್ ಬೆಳೆದಿದ್ದಾರೆ.

ಇದನ್ನೂ ಓದಿ: ‘ಅವುಗಳಿಗೆ ಅನ್ನಕ್ಕಿಂತ ಹೆಚ್ಚಾಗಿ ನಿಮ್ಮ ಪ್ರೀತಿ ಬೇಕು’: ಬೆಂಗಳೂರಿನ ಜನರೇ ಬೀದಿ ನಾಯಿಗಳಿಗೆ ಕಲ್ಲು ಹೊಡೆಯಬೇಡಿ, ಸುಧಾ ಮೂರ್ತಿ ಮನವಿ

ಸಿದ್ಧಿ ಸಮುದಾಯದವರು ಸುಮಾರು 300 ವರ್ಷಗಳ ಹಿಂದೆ ಆಫ್ರಿಕಾದಿಂದ ಭಾರತಕ್ಕೆ ಬಂದು ನೆಲೆಸಿದವರು. ಈ ಸಮುದಾಯದ ಕ್ರೀಡಾ ಪ್ರತಿಭೆಯನ್ನು ಗುರುತಿಸಲು ಸರ್ಕಾರ ಹಮ್ಮಿಕೊಂಡಿದ್ದ ಯೋಜನೆಗೆ ಈಗ ರೋಹಿತ್ ರೂಪದಲ್ಲಿ ದೊಡ್ಡ ಯಶಸ್ಸು ಸಿಕ್ಕಿದೆ. ಸದ್ಯ ರೋಹಿತ್ ಮಜ್ಗುಲ್ ಜಾರ್ಜಿಯಾದ ತಿಬಿಲಿಸಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. “ನಾನು ಕೇವಲ ಪದಕಕ್ಕಾಗಿ ಹೋರಾಡುತ್ತಿಲ್ಲ, ನನ್ನ ಸಮುದಾಯ ಮತ್ತು ಜನರ ಬಗ್ಗೆ ಜಾಗೃತಿ ಮೂಡಿಸಲು ಈ ವೇದಿಕೆಯನ್ನು ಬಳಸಿಕೊಳ್ಳುತ್ತೇನೆ” ಎನ್ನುತ್ತಾರೆ ಈ ಯುವ ಸಾಧಕ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:24 am, Fri, 27 February 26

Source link

Leave a Reply

Your email address will not be published. Required fields are marked *