ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರ ಹಳೆಯ ಪಾರ್ಟಿ ವಿಡಿಯೋ (Kangana Ranaut Party Video) ವೈರಲ್ ಆಗಿದೆ. ಅದನ್ನು ನೋಡಿದ ಜನರು ಟ್ರೋಲ್ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಕಂಗನಾ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಮೊದಲು ಸಾಧಾರಣ ಹಿಂದೂ ಆಗಿದ್ದೆ. ಆದರೆ ಈಗ ಜಾಗೃತ ಹಿಂದೂವಾಗಿದ್ದೇನೆ. ಅಲ್ಲದೇ, ನಾನು ಸಂಘಿ (Sanghi) ಆಗಲು ಬಯಸುತ್ತೇನೆ’ ಎಂದು ಹೇಳುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಕಂಗನಾ ರಣಾವತ್ (Kangana Ranaut) ಅವರು ಖಾರದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದಕ್ಕೆ ಇದು ಲೇಟೆಸ್ಟ್ ಸೇರ್ಪಡೆ.
2018ರ ಕಾನ್ ಚಲನಚಿತ್ರೋತ್ಸವದ ಆಫ್ಟರ್-ಪಾರ್ಟಿಯಲ್ಲಿ ಕಂಗನಾ ರಣಾವತ್ ಅವರು ಮೈಮರೆತು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿತ್ತು. ಈ ವಿಡಿಯೋ ಇಟ್ಟುಕೊಂಡು ಹಲವರು ಕಂಗನಾ ಅವರ ರಾಜಕೀಯ ಹಾಗೂ ಧಾರ್ಮಿಕ ಸಿದ್ಧಾಂತ ಬದಲಾವಣೆಯನ್ನು ಪ್ರಶ್ನಿಸಿ ಟ್ರೋಲ್ ಮಾಡಿದ್ದರು.
ವಿಡಿಯೋದಲ್ಲಿ ಕಂಗನಾ ಹೇಳಿದ್ದೇನು?
ಈ ಕುರಿತು ವಿಡಿಯೋ ಹಂಚಿಕೊಂಡು ಸುದೀರ್ಘವಾಗಿ ಮಾತನಾಡಿರುವ ಕಂಗನಾ, ‘ನೀನು ಯಾವಾಗ ಸಂಘಿಯಾದೆ ಎಂದು ಜನರು ನನ್ನನ್ನು ಟೀಕಿಸುತ್ತಿದ್ದಾರೆ. ಹೌದು, ನನಗೆ ಸಂಘಿ ಆಗಬೇಕಿದೆ. ಬಿಜೆಪಿ ಮತ್ತು ಆರ್‌ಎಸ್ಎಸ್ ಸಿದ್ಧಾಂತವನ್ನು ಒಪ್ಪಿಕೊಂಡು, ಒಬ್ಬ ಜಾಗೃತ ಹಿಂದೂ ಆಗಲು ನಾನು ಬಯಸುತ್ತೇನೆ. ಬದಲಾಗಲು ನನಗೆ ಏಕೆ ಅವಕಾಶವಿಲ್ಲ?’ ಎಂದು ಪ್ರಶ್ನಿಸಿದ್ದಾರೆ.
‘ಈ ಹಿಂದೆ ನಾನು ಅದೆಲ್ಲವನ್ನೂ ಮಾಡಿದ್ದೇನೆ’
ಮುಂದುವರಿದು ಮಾತನಾಡಿದ ಕಂಗನಾ ಅವರು, ‘ಸಾಮಾಜಿಕವಾಗಿ ಹಿಂದೂ ಹೆಣ್ಣುಮಕ್ಕಳ ವಿಷಯ ಬಂದಾಗ ಸಮಾಜದಲ್ಲಿ ಇಬ್ಬಂದಿತನ ಎದ್ದು ಕಾಣುತ್ತದೆ. ನೀವು ಈ ಹಿಂದೆ ಪಾರ್ಟಿ ಮಾಡುತ್ತಿದ್ದಿರಿ ಎಂದು ಜನರು ನನ್ನ ಕಡೆಗೆ ಬೆಟ್ಟು ಮಾಡಿ ತೋರಿಸುತ್ತಾರೆ. ಹೌದು, ನಾನು ಹಿಂದೆ ಅದೆಲ್ಲವನ್ನೂ ಮಾಡಿದ್ದೇನೆ. ಆದರೆ ಇಂದು ಧಾರ್ಮಿಕ ಮತ್ತು ಶಿಸ್ತುಬದ್ಧ ಜೀವನ ನಡೆಸಲು ಬಯಸುತ್ತಿದ್ದೇನೆ. ಆ ದಾರಿಯನ್ನು ನನಗೇಕೆ ಮುಚ್ಚಲಾಗುತ್ತಿದೆ?’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸೋನಾಕ್ಷಿ ಸಿನ್ಹಾ ವಿರುದ್ಧ ಕಿಡಿಕಾರಿದ ಕಂಗನಾ ರಣಾವತ್; ಖಾರದ ಮಾತುಗಳಲ್ಲಿ ಟೀಕೆ
ಸರಣಿ ಕಂಟ್ರವರ್ಸಿಗಳಲ್ಲಿ ಕಂಗನಾ:
ಇತ್ತೀಚೆಗಷ್ಟೇ ಸೋನಾಕ್ಷಿ ಸಿನ್ಹಾ ಅವರ ಹೆಸರು ಪ್ರಸ್ತಾಪಿಸದೆ ‘ಜೇಬುಗಳ್ಳರಂತೆ ಡ್ರೆಸ್ ಮಾಡಿಕೊಳ್ಳುತ್ತಾಳೆ’ ಎಂದು ಮಾರ್ಮಿಕವಾಗಿ ಪೋಸ್ಟ್ ಹಾಕಿದ್ದ ಕಂಗನಾ, ತೀವ್ರ ಚರ್ಚೆಗೆ ಗ್ರಾಸವಾಗಿದ್ದರು. ಅಲ್ಲದೆ, ಪ್ರತಿಭಟನಾನಿರತ ಯುವಜನತೆಯ ನಡೆ-ನುಡಿಯನ್ನು ಟೀಕಿಸಿ ‘ಜನರೇಷನ್ ಗಟ್ಟರ್’ ಎಂದು ಕರೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಕಂಗನಾ ಅವರು ತಮ್ಮ ಹಳೆಯ ಪಾರ್ಟಿ ವಿಡಿಯೋಗೆ ಈ ರೀತಿ ಸ್ಪಷ್ಟನೆ ನೀಡಿರುವುದು ಬಾಲಿವುಡ್ ಹಾಗೂ ರಾಜಕೀಯ ವಲಯದಲ್ಲಿ ಮತ್ತೆ ಹೊಸ ಸಂಚಲನ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
