ನಾಳೆ ಪಿತೂರಿ ನಡೆದಿದೆ ಎಂದು ನೆಪ ಹೇಳಬೇಡಿ: ಅಮಿತ್ ಶಾ ಸಭೆಗಳ ಬೆನ್ನಲ್ಲೇ ತೆಲಂಗಾಣ ಸರ್ಕಾರಕ್ಕೆ ಓವೈಸಿ ವಾರ್ನಿಂಗ್ – Kannada News | Owaisi Alarms on Amit Shah’s NRC Push: Warns Telangana Govt for Citizen Protection

ಹೈದರಾಬಾದ್, ಜುಲೈ 09: ದೇಶದಲ್ಲಿ ತೀವ್ರ ರಾಜಕೀಯ ಸಂಚಲನ ಮೂಡಿಸಿದ್ದ ರಾಷ್ಟ್ರೀಯ ನಾಗರಿಕರ ನೋಂದಣಿ(ಎನ್​ಆರ್​ಸಿ) ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಮತ್ತೆ ಮುಂಚೂಣಿಗೆ ತರಲು ಸಜ್ಜಾಗುತ್ತಿದೆ ಎಂದು ಹೈದರಾಬಾದ್​ ಸಂಸದ ಹಾಗೂ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಗಂಭೀರ ಆರೋಪ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಇತ್ತೀಚಿನ ಸಭೆಗಳು ಹಾಗೂ ತೀರ್ಮಾನಗಳ ಹಿಂದೆ ದೊಡ್ಡ ರಾಜಕೀಯ ತಂತ್ರ ಅಡಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.ಅಮಿತ್ ಅವರು ಸಭೆ ನಡೆಸಿದ್ದಾರೆ ಎಂದರೆ ಸುಮ್ಮನೇ ಯಾವುದೋ ಸಭೆಯಾಗಿರುವುದಿಲ್ಲ, ಅವರ ಗುರಿ ದೇಶಾದ್ಯಂತ ‘ಎನ್‌ಆರ್‌ಸಿ’ ಜಾರಿ ಮಾಡುವುದೇ ಆಗಿದೆ ಎಂದು ಓವೈಸಿ ಗುಡುಗಿದ್ದಾರೆ.

ಅಮಿತ್ ಶಾ ನಡೆ ನನಗೆ ಅನುಮಾನ ತಂದಿದೆ

ಕೇಂದ್ರ ಸರ್ಕಾರವು ಇತ್ತೀಚೆಗೆ ರಚಿಸಿರುವ ಒಂದು ಹೊಸ ಆಯೋಗದ ಕಡೆಗೆ ಬೆರಳು ಮಾಡಿರುವ ಓವೈಸಿ, ‘‘ನನ್ನ ಅಂದಾಜು ತಪ್ಪಾಗಿರಬಹುದು, ಆದರೆ ಈ ಆಯೋಗದ ಅಂತಿಮ ಗುರಿ ಎನ್‌ಆರ್‌ಸಿ ಜಾರಿ ಮಾಡುವುದೇ ಆಗಿದೆ. ಕೇಂದ್ರ ಸರ್ಕಾರವು ದೇಶದ ನಾಗರಿಕರ ದಾಖಲೆಗಳನ್ನು ಮರುಪರಿಶೀಲಿಸುವ ನೆಪದಲ್ಲಿ ದೊಡ್ಡ ಪಿತೂರಿ ನಡೆಸುತ್ತಿದೆ,” ಎಂದು ವಾಗ್ದಾಳಿ ನಡೆಸಿದ್ದಾರೆ.

ತೆಲಂಗಾಣದ ಕಾಂಗ್ರೆಸ್ ಸರ್ಕಾರಕ್ಕೆ ಓವೈಸಿ ಡಿಮ್ಯಾಂಡ್

ಕೇಂದ್ರದ ಈ ನಡೆಯಿಂದ ಬಡ ಜನರನ್ನು ರಕ್ಷಿಸಲು ತೆಲಂಗಾಣದ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಳ್ಳಬೇಕು ಎಂದು ಓವೈಸಿ ಒತ್ತಾಯಿಸಿದ್ದಾರೆ.

ತೆಲಂಗಾಣದ ಪ್ರತಿಯೊಬ್ಬ ನಿವಾಸಿಗೆ ರಾಜ್ಯ ಸರ್ಕಾರವೇ ಅಧಿಕೃತವಾಗಿ ‘ಶಾಶ್ವತ ನಿವಾಸ ಪ್ರಮಾಣಪತ್ರ’ ನೀಡಬೇಕು. ಇದರಿಂದ ಭವಿಷ್ಯದಲ್ಲಿ ಕೇಂದ್ರ ಸರ್ಕಾರ ಎನ್‌ಆರ್‌ಸಿ ತಂದರೂ ಬಡವರ ದಾಖಲೆಗಳ ಸಮಸ್ಯೆಗೆ ಆಡಳಿತಾತ್ಮಕ ತೊಂದರೆಗಳು ಎದುರಾಗುವುದಿಲ್ಲ.

ಮತ್ತಷ್ಟು ಓದಿ: ಅಣ್ಣಾಮಲೈ ನಮ್ಮ ಪಕ್ಷದ ಕಾರ್ಯಕರ್ತರ ಬ್ರೈನ್ ವಾಶ್ ಮಾಡುತ್ತಿದ್ದಾರೆ; ತಮಿಳುನಾಡು ಬಿಜೆಪಿ ಮುಖ್ಯಸ್ಥ ಆರೋಪ

ಕರ್ನಾಟಕ ಮಾಡಿದ್ದನ್ನು ನೀವೂ ಮಾಡಿ: ಕರ್ನಾಟಕದಲ್ಲಿರುವ  ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕಾಂಗ್ರೆಸ್ ಸರ್ಕಾರ ತನ್ನ ನಾಗರಿಕರಿಗೆ ಇಂತಹ ಶಾಶ್ವತ ನಿವಾಸ ಪ್ರಮಾಣಪತ್ರಗಳನ್ನು ನೀಡಲು ಶುರು ಮಾಡಿತ್ತು. ತೆಲಂಗಾಣದಲ್ಲೂ ಇರುವುದು ಕಾಂಗ್ರೆಸ್ ಸರ್ಕಾರವೇ ಆಗಿರುವುದರಿಂದ ಕರ್ನಾಟಕದ ಮಾದರಿಯನ್ನೇ ಇಲ್ಲಿಯೂ ತಕ್ಷಣ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವಿಡಿಯೋ

ನೆಪ ಹೇಳಬೇಡಿ, ವಾಸ್ತವಕ್ಕೆ ಬನ್ನಿ: ರೇವಂತ್ ರೆಡ್ಡಿಗೆ ಎಚ್ಚರಿಕೆ

ತೆಲಂಗಾಣದ ಬಡ ಜನರಲ್ಲಿ ಅಗತ್ಯ ದಾಖಲೆಗಳ ಕೊರತೆ ಇದೆ ಎಂಬ ವಾಸ್ತವವನ್ನು ಆಡಳಿತ ಪಕ್ಷ ಅರ್ಥ ಮಾಡಿಕೊಳ್ಳಬೇಕು. ಮುಂದೆ ಒಂದು ದಿನ ಅಂತಿಮ ಮತದಾರರ ಪಟ್ಟಿ ಪ್ರಕಟವಾದಾಗ ಮುಸ್ಲಿಮರು ಅಥವಾ ಬಡವರ ಹೆಸರು ಕೈಬಿಟ್ಟರೆ, ನೋಡಿ ನಮ್ಮ ವಿರುದ್ಧ ಪಿತೂರಿ ನಡೆದಿದೆ ಎಂದು ಕಾಂಗ್ರೆಸ್ ನಾಯಕರು ನೆಪ ಹೇಳಬಾರದು. ಪಿತೂರಿ ನಡೆಯುವ ಮುನ್ನವೇ ಅದಕ್ಕೆ ಪರಿಹಾರ ಕಂಡುಕೊಳ್ಳಿ, ಎಂದು ಓವೈಸಿ ಎಚ್ಚರಿಸಿದ್ದಾರೆ. ಈ ಕುರಿತು ಚರ್ಚಿಸಲು ತಾವು ಜನವರಿ ತಿಂಗಳಿನಿಂದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಭೇಟಿಗೆ ಸಮಯ ಕೇಳುತ್ತಿದ್ದು, ಸಿಎಂ ತುಂಬಾ ಬ್ಯುಸಿಯಾಗಿದ್ದಾರೆ ಎಂದು ಓವೈಸಿ ಹತಾಶೆ ಹೊರಹಾಕಿದ್ದಾರೆ.

ಹಿನ್ನೆಲೆ
2019-20ರಲ್ಲಿ ಸಿಎಎ  ಮತ್ತು ಎನ್‌ಆರ್‌ಸಿ  ಕಾಯ್ದೆಗಳ ವಿರುದ್ಧ ದೇಶಾದ್ಯಂತ ಭಾರಿ ಪ್ರತಿಭಟನೆಗಳು ನಡೆದಿದ್ದವು. ಆ ಸಂದರ್ಭದಲ್ಲೂ ಓವೈಸಿ ಇದರ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡಿದ್ದರು. ಈಗ 2026 ರಲ್ಲಿ ಕೇಂದ್ರ ಸರ್ಕಾರವು ನಾಗರಿಕರ ನೋಂದಣಿ ಪ್ರಕ್ರಿಯೆಯ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲು ಆಂತರಿಕ ಸಭೆಗಳನ್ನು ನಡೆಸುತ್ತಿರುವುದರಿಂದ, ಹಳೇ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:59 am, Thu, 9 July 26

Source link

Leave a Reply

Your email address will not be published. Required fields are marked *