ಸೈಬರ್ ಕ್ರೈಮ್Image Credit source: Philip Dulian via Getty Images
ನವದೆಹಲಿ, ಜೂನ್ 19: ಮಾಜಿ ಪ್ರಧಾನಿ ಐ.ಕೆ. ಗುಜ್ರಾಲ್ ಅವರ ಪುತ್ರ ಹಾಗೂ ಮಾಜಿ ರಾಜ್ಯಸಭಾ ಸಂಸದರಾದ ನರೇಶ್ ಗುಜ್ರಾಲ್ (Naresh Gujral) ಅವರು ಸೈಬರ್ ವಂಚನೆಗೆ ತುತ್ತಾಗಿದ್ದಾರೆ. ಗಾರ್ಮೆಂಟ್ಸ್ ಫ್ಯಾಕ್ಟರಿ ನಡೆಸುತ್ತಿರುವ ನರೇಶ್ ಗುಜ್ರಾಲ್ ಅವರ ಅಕೌಂಟ್ನಿಂದ 7.8 ಕೋಟಿ ರೂ ಹಣ ಲಪಟಾಯಿಸಿದ್ದಾರೆ. ಈ ವಂಚನೆ ಆಗಿರುವುದು ದೆಹಲಿಯಲ್ಲಿ ಜೂನ್ 12ರಿಂದ 16ರ ಅವಧಿಯಲ್ಲಿ. ಪೊಲೀಸರು ಸದ್ಯಕ್ಕೆ 4 ಕೋಟಿ ರೂ ಹಣವನ್ನು ರಿಕವರ್ ಮಾಡಲು ಯಶಸ್ವಿಯಾಗಿದ್ದಾರೆ. ಆದರೆ, ವಂಚಕರು ನರೇಶ್ ಗುಜ್ರಾಲ್ ಅವರ ಹಣ ಲಪಟಾಯಿಸಲು ಬಳಸಿದ ತಂತ್ರ ಮತ್ತು ಮಾರ್ಗ ನಿಜಕ್ಕೂ ಬೆಚ್ಚಿಬೀಳಿಸುವಂಥದ್ದು. ಇದು ಯಾರಿಗೆ ಬೇಕಾದರೂ ಆಗಬಹುದಾದ ವಂಚನೆ.
ಉದ್ಯೋಗಿಯ ಮೊಬೈಲ್ ನಂಬರ್ ಹ್ಯಾಕ್ ಮಾಡಿದ್ರು
ಮಾಜಿ ಪ್ರಧಾನಿ ಐ.ಕೆ. ಗುಜ್ರಾಲ್ ಅವರ ಮಗ ನರೇಶ್ ಗುಜ್ರಾಲ್ ಅವರು ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದನ್ನು ಇಟ್ಟಿದ್ದಾರೆ. ವಂಚಕರು ಈ ಫ್ಯಾಕ್ಟರಿಯ ಉದ್ಯೋಗಿಯೊಬ್ಬರಿಗೆ ವಾಟ್ಸಾಪ್ ಮೆಸೇಜ್ ಕಳುಹಿಸಿದ್ದಾರೆ. ಅದನ್ನು ಒತ್ತಿದ್ದೇ ಆಯ್ತು, ಆ ಉದ್ಯೋಗಿಯ ಫೋನ್ ಅನ್ನು ವಂಚಕರು ಹ್ಯಾಕ್ ಮಾಡಿದ್ದಾರೆ.
ಕಾಂಟ್ಯಾಕ್ಟ್ ಲಿಸ್ಟ್ನಲ್ಲಿ ನಂಬರನ್ನೇ ಬದಲಿಸಿದ್ರು…
ಹ್ಯಾಕ್ ಮಾಡಿದ ನಂತರ, ಆ ಉದ್ಯೋಗಿಯ ಮೊಬೈಲ್ನಲ್ಲಿರುವ ಕಾಂಟ್ಯಾಕ್ಟ್ ಲಿಸ್ಟ್ಗೆ ಹೋಗಿ ನರೇಶ್ ಗುಜ್ರಾಲ್ ಅವರ ಫೋನ್ ನಂಬರ್ಗೆ ಹೋಗಿ ಎಡಿಟ್ ಮಾಡಿದ್ದಾರೆ. ಅಲ್ಲಿ ವಂಚಕರು ಗುಜ್ರಾಲ್ ನಂಬರ್ ಜಾಗಕ್ಕೆ ತಮ್ಮ ಮೊಬೈಲ್ ನಂಬರ್ ಸೇರಿಸಿದ್ದಾರೆ. ಆ ನಂಬರ್ನ ಪ್ರೊಫೈಲ್ ಚಿತ್ರ, ಹೆಸರು ಎಲ್ಲವೂ ನರೇಶ್ ಗುಜ್ರಾಲ್ ಅವರದ್ದೇ ಹಾಕಲಾಗಿತ್ತು. ಹೀಗಾಗಿ, ಯಾರಿಗೂ ಅನುಮಾನ ಬಾರದಂತಾಗಿತ್ತು.
ಇದನ್ನೂ ಓದಿ: ಅಕ್ಸೆಂಚರ್ ಕೊಟ್ಟ ಒಂದು ರಿಪೋರ್ಟ್ಗೆ ಭಾರತದ ಷೇರುಬಜಾರು ಅಲ್ಲೋಲಕಲ್ಲೋಲ; ಶುಕ್ರವಾರ 2 ಲಕ್ಷ ಕೋಟಿ ರೂ ನಷ್ಟ
ಹಣ ವರ್ಗಾಯಿಸುವ ಮೆಸೇಜ್ಗಳು
ಈಗ ವಂಚಕರು ಉದ್ಯೋಗಿಗೆ ಮೆಸೇಜ್ ಕಳುಹಿಸತೊಡಗುತ್ತಾರೆ. ಅಕೌಂಟ್ ನಂಬರ್ ಕೊಟ್ಟು ಅದಕ್ಕೆ ತುರ್ತಾಗಿ ಆರ್ಟಿಜಿಎಸ್ ಮಾಡುವಂತೆ ಸೂಚಿಸುತ್ತಾರೆ. ಯಾವುದೋ ಬ್ಯುಸಿನೆಸ್ಗೆ ಸಂಬಂಧಿಸಿದ್ದಿರಬಹುದು ಎಂದು ಉದ್ಯೋಗಿಯು ಹಣವನ್ನು ಆರ್ಟಿಜಿಎಸ್ ಮಾಡುತ್ತಾರೆ. ಹೀಗೆ ನಾಲ್ಕು ಬಾರಿ ಆರ್ಟಿಜಿಎಸ್ ಮೂಲಕ ಹಣ ಟ್ರಾನ್ಸ್ಫರ್ ಮಾಡಲಾಗುತ್ತದೆ. ಟ್ರಾನ್ಸ್ಫರ್ ಆದ ಒಟ್ಟು ಹಣ 7.8 ಕೋಟಿ ರೂ ಆಗಿದೆ.
ಕುತೂಹಲ ಎಂದರೆ, ಇಷ್ಟು ದೊಡ್ಡ ಮಟ್ಟದ ಟ್ರಾನ್ಸಾಕ್ಷನ್ ನಡೆಯುತ್ತಿರುವಾಗ ಬ್ಯಾಂಕಿನವರಿಗೆ ಅನುಮಾನ ಬರುತ್ತದೆ. ಫ್ಯಾಕ್ಟರಿಯ ಸಿಎಫ್ಒ ಅವರಿಗೆ ತಿಳಿಸುತ್ತಾರೆ. ಹಣ ವರ್ಗಾವಣೆಗೆ ಖುದ್ದು ಗುಜ್ರಾಲ್ ಅವರೇ ಮೆಸೇಜ್ ಕಳುಹಿಸಿದ್ದೆಂದು ಗ್ರಹಿಸಿ ಸಿಎಫ್ಒ ಕೂಡ ಬ್ಯಾಂಕಿನವರಿಗೆ ದೃಢೀಕರಿಸುತ್ತಾರೆ.
ವಂಚನೆ ಬಯಲಾಗಿದ್ದು ಹೇಗೆ?
ಆದರೆ, ಕಂಪನಿಯ ಅಧಿಕಾರಿಯೊಬ್ಬರಿಗೆ ಏನೋ ಸಂದೇಹ ಬಂದು, ನರೇಶ್ ಗುಜ್ರಾಲ್ ಅವರ ಮಗಳನ್ನು ಸಂಪರ್ಕಿಸಿ, ಈ ಪೇಮೆಂಟ್ಗಳನ್ನು ಪರಿಶೀಲಿಸಬೇಕೆಂದು ಕೇಳುತ್ತಾರೆ. ಆಗ ಈ ವಂಚನೆ ಪ್ರಕರಣ ಬಯಲಿಗೆ ಬರುತ್ತದೆ. ಆಕೆ ತನ್ನ ತಂದೆಯನ್ನು ಸಂಪರ್ಕಿಸಿ ಈ ಪೇಮೆಂಟ್ಗಳ ಬಗ್ಗೆ ಕೇಳಿದಾಗ, ತಾನು ಅಂಥ ಯಾವುದನ್ನೂ ಕೇಳಿಲ್ಲವೆಂದು ತಿಳಿಸುತ್ತಾರೆ. ಆಗ ಗುಜ್ರಾಲ್ ಕುಟುಂಬದವರು ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುತ್ತಾರೆ.
ಇದನ್ನೂ ಓದಿ: ಇನ್ಸ್ಟಾ ಸ್ಕ್ರೋಲ್ ಮಾಡುವಾಗ ಬೇಡದ್ದು ಬರುತ್ತಿವೆಯಾ? ನೀವಿಚ್ಛಿಸುವವೇ ಫೀಡ್ನಲ್ಲಿ ಬರುವಂತೆ ಮಾಡುತ್ತದೆ ಈ ಹೊಸ ಮೆಟಾ ಫೀಚರ್
ವಂಚಕರು ಕೊಟ್ಟಿದ್ದ ನಾಲ್ಕು ಅಕೌಂಟ್ಗಳು ಬೇರೆ ಬೇರೆ ರಾಜ್ಯಗಳಲ್ಲಿ ಇರುವಂಥವು. ದೂರು ದಾಖಲಾದ ತಕ್ಷಣ ಕಾರ್ಯಪ್ರವೃತ್ತರಾದ ದೆಹಲಿ ಪೊಲೀಸರು (IFSO ಘಟಕ), ವಂಚಕರು ವರ್ಗಾಯಿಸಿಕೊಂಡಿದ್ದ ಹಣದಲ್ಲಿ ಸುಮಾರು ₹4 ಕೋಟಿಗೂ ಅಧಿಕ ಮೊತ್ತವನ್ನು ಆಯಾ ಬ್ಯಾಂಕ್ಗಳಲ್ಲಿ ಫ್ರೀಜ್ (Freeze) ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಪೊಲೀಸರು ಈ ಹಣವನ್ನು ವರ್ಗಾಯಿಸಿದ ಖಾತೆಗಳನ್ನು ಪತ್ತೆ ಹಚ್ಚುತ್ತಿದ್ದು, ತನಿಖೆ ಮುಂದುವರಿದಿದೆ. ಸಾರ್ವಜನಿಕರು ಇಂತಹ ಸಂದೇಶಗಳು ಬಂದಾಗ ನೇರವಾಗಿ ಸಂಬಂಧಪಟ್ಟ ವ್ಯಕ್ತಿಗೆ ಕರೆ ಮಾಡಿ ಖಚಿತಪಡಿಸಿಕೊಳ್ಳುವುದು ಸೂಕ್ತ ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಪ್ರಿಯಾಂಕಾ ಉಪೇಂದ್ರಗೂ ಆಗಿತ್ತು ಸೈಬರ್ ಫ್ರಾಡ್
ಪ್ರಿಯಾಂಕಾ ಉಪೇಂದ್ರ ಅವರಿಗೂ ಕಳೆದ ವರ್ಷ ಸೈಬರ್ ವಂಚನೆಯಾಗಿ ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದರು. ಪ್ರಿಯಾಂಕಾ ಅವರ ಮೊಬೈಲ್ ಅನ್ನೇ ಹ್ಯಾಕ್ ಮಾಡಿದ್ದ ದುರುಳರು, ವಿವಿಧ ಜನರಿಗೆ ಹಣ ಕಳುಹಿಸುವಂತೆ ಮೆಸೇಜ್ ಹಾಕಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On – 5:40 pm, Fri, 19 June 26