ಬೆಂಗಳೂರು, ಮಾರ್ಚ್ 05: 17 ವರ್ಷದ ಹಿಂದೆ ನಿವೃತ್ತ ಐಐಎಸ್ಸಿ ಪ್ರೊ. ಪುರುಷೋತ್ತಮ್ ಲಾಲ್ ಸಚ್‌ದೇವ್, ಪತ್ನಿ ರೀಟಾ, ಪುತ್ರ ಮುನ್ನಾ ತ್ರಿವಳಿ ಕೊಲೆ ಪ್ರಕರಣಕ್ಕೆ (triple murder case) ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮೂಲದ ನಾಲ್ವರು ವಲಸೆ ಕಾರ್ಮಿಕ ಅಪರಾಧಿಗಳಿಗೆ ಹೈಕೋರ್ಟ್ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಪಶ್ಚಿಮ ಬಂಗಾಳದ ದೀಪಕ್ ಹಲ್ದಾರ್, ಆತನ ಪತ್ನಿ ಸುಚಿತ್ರಾ ಹಲ್ದಾರ್, ಮುಜಫರ್ ನಗರ ಮೂಲದ ಮೊಹಮ್ಮದ್ ಸರ್ಬಲ್ ಮತ್ತು ಬಿದನ್ ಶಿಕಾರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಆರೋಪಿಗಳನ್ನು ಖುಲಾಸೆಗೊಳಿಸಿದ್ದ ಬೆಂಗಳೂರಿನ 65ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ ಹೈಕೋರ್ಟ್ ವಿಭಾಗೀಯ ಪೀಠವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾ.ಹೆಚ್.ಪಿ.ಸಂದೇಶ್ ಮತ್ತು ನ್ಯಾ.ಟಿ.ವೆಂಕಟೇಶ ನಾಯ್ಕ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಇದನ್ನೂ ಓದಿ: ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಕೇಸ್: ಡಿಕೆಶಿಗೆ ಕೋರ್ಟ್ ಬಿಗ್ ರಿಲೀಫ್
ಆರೋಪಿಗಳು ಹಣ, ಚಿನ್ನಾಭರಣಕ್ಕಾಗಿ ನಿವೃತ್ತ ಪ್ರೊಫೆಸರ್ ಸೇರಿ ಮೂವರನ್ನು ಕತ್ತು ಹಿಸುಕಿ ಕೊಂದಿದ್ದರು. ಆರೋಪಿಗಳಾದ ದೀಪಕ್ ಹಲ್ದಾರ್ ಹಾಗೂ ಸುಚಿತ್ರಾ ಹಲ್ದಾರ್ ಕೊಲೆ ನಡೆದ ಮನೆಯಲ್ಲೇ ಮನೆಗೆಲಸದವರಾಗಿ ಕೆಲಸ ಮಾಡುತ್ತಿದ್ದರು. ಹಣ ಮತ್ತು ಆಭರಣದ ಆಸೆಗಾಗಿ ಅಮಾಯಕರನ್ನು ಹತ್ಯೆ ಮಾಡಿರುವುದು ಅತ್ಯಂತ ಗಂಭೀರ ಅಪರಾಧವಾಗಿದ್ದು, ಇಂತಹ ಕೃತ್ಯಗಳು ಸಮಾಜದ ಶಾಂತಿ ಹಾಗೂ ಸಹಬಾಳ್ವೆಗೆ ಧಕ್ಕೆಯಾಗಿದೆ ಎಂದು ನ್ಯಾಯಪೀಠ ಆಘಾತ ವ್ಯಕ್ತಪಡಿಸಿದೆ.
ಪೊಲೀಸ್ ವೆರಿಫಿಕೇಷನ್ ಅಗತ್ಯ
ಇನ್ನು ಮನೆಯೊಳಗೆ ಕೆಲಸಕ್ಕೆ ನೇಮಿಸಿಕೊಳ್ಳುವ ಕಾರ್ಮಿಕರ ಕುರಿತು ಪೊಲೀಸ್ ವೆರಿಫಿಕೇಷನ್ ನಡೆಸುವುದು ಅಗತ್ಯ. ಮನೆಗೆಲಸದವರು ಸೇರಿದಂತೆ ವಲಸೆ ಕಾರ್ಮಿಕರನ್ನು ನೇಮಿಸುವ ಸಂದರ್ಭದಲ್ಲಿ ಅವರ ಹಿನ್ನೆಲೆಯ ಬಗ್ಗೆ ಸಮಗ್ರ ಮಾಹಿತಿ ಪರಿಶೀಲಿಸುವ ವ್ಯವಸ್ಥೆ ಅಗತ್ಯ.
ಇದಕ್ಕಾಗಿ ವಲಸೆ ಕಾರ್ಮಿಕರ ವಿವರಗಳನ್ನು ಪರಿಶೀಲಿಸಲು ಸುಲಭವಾದ ಆನ್‌ಲೈನ್ ವ್ಯವಸ್ಥೆಯನ್ನು ಸರ್ಕಾರ ರೂಪಿಸುವ ಅಗತ್ಯವಿದೆ ಎಂದು ಪೀಠ ಹೇಳಿದೆ. ಈ ಪರಿಶೀಲನಾ ಪ್ರಕ್ರಿಯೆಯ ವೇಳೆ ಕಾರ್ಮಿಕರಿಗೆ ಯಾವುದೇ ರೀತಿಯ ಕಿರುಕುಳವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಕೂಡ ಪೀಠ ಸ್ಪಷ್ಟಪಡಿಸಿದೆ. ಈ ತೀರ್ಪಿನ ಪ್ರತಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಳುಹಿಸಲು ನ್ಯಾಯಾಲಯ ಆದೇಶಿಸಿದೆ.
ಘಟನೆ ಹಿನ್ನೆಲೆ
ಬೆಂಗಳೂರಿನ ಆರ್.ಟಿ.ನಗರದಲ್ಲಿ 2009ರ ಫೆಬ್ರುವರಿ 16ರಂದು ಭೀಕರ ತ್ರಿವಳಿ ಹತ್ಯೆ ಸಂಭವಿಸಿತ್ತು. ನಿವೃತ್ತ ಐಐಎಸ್ಸಿ ಪ್ರೊ.ಪುರುಷೋತ್ತಮ ಲಾಲ್ ಸಚ್‌ದೇವ್ (71), ಅವರ ಪತ್ನಿ ರೀಟಾ ಸಚ್‌ದೇವ್ (62) ಹಾಗೂ ಪುತ್ರ ಮುನ್ನಾ (35) ಆರ್.ಟಿ.ನಗರದ 80 ಅಡಿ ರಸ್ತೆಯಲ್ಲಿರುವ ನಿವಾಸದಲ್ಲಿ ವಾಸಿಸುತ್ತಿದ್ದರು.
ಇದನ್ನೂ ಓದಿ: ಹೃದಯಾಘಾತ ಪ್ರಕರಣಕ್ಕೆ ಟ್ವಿಸ್ಟ್: ತಿಂಗಳ ಬಳಿಕ ಕೊಲೆ ರಹಸ್ಯ ಬಯಲು, ಪತ್ನಿಯೇ ಪತಿಗೆ ಚಟ್ಟ ಕಟ್ಟಿದ್ದು
ಮನೆಗೆಲಸದ ವಲಸೆ ಕಾರ್ಮಿಕ ದಂಪತಿ ಸೇರಿದಂತೆ ನಾಲ್ವರು ಮನೆಗೆ ನುಗ್ಗಿ ಮೂವರನ್ನೂ ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
