ನೀಟ್ ಪಾಸಾದವರಿಗೆ ಗುಡ್​​​ ನ್ಯೂಸ್: ಯುಜಿಸಿಇಟಿ ಅರ್ಜಿ ಸಲ್ಲಿಕೆಗೆ ಕೆಇಎಯಿಂದ ಹೊಸ ಲಿಂಕ್ ಪ್ರಕಟ – Kannada News | Karnataka NEET Medical Admissions 2026: KEA Reopens UGCET Applications, Deadline July 24

ಬೆಂಗಳೂರು, ಜು.20: ನೀಟ್ (NEET) ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದರೂ, ಇದುವರೆಗೆ ಪದವಿಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (UGCET) ಅರ್ಜಿ ಸಲ್ಲಿಸದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮತ್ತೊಂದು ಸುವರ್ಣ ಅವಕಾಶ ನೀಡಿದೆ. ಇಂತಹ ಅಭ್ಯರ್ಥಿಗಳಿಗಾಗಿ ಕೆಇಎ ಹೊಸ ಅಪ್ಲಿಕೇಶನ್ ಲಿಂಕ್ ಅನ್ನು ಬಿಡುಗಡೆ ಮಾಡಿದ್ದು, ಜುಲೈ 24 ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.

ಇದುವರೆಗೆ ಯುಜಿಸಿಇಟಿ ಅರ್ಜಿ ಸಲ್ಲಿಸದ ಹೊಸ ಅಭ್ಯರ್ಥಿಗಳು ಈ ಹೊಸ ಲಿಂಕ್ ಮೂಲಕ ತಕ್ಷಣವೇ ಅರ್ಜಿ ಸಲ್ಲಿಸಬಹುದಾಗಿದೆ. ಇದರೊಂದಿಗೆ, ಈಗಾಗಲೇ ಯುಜಿಸಿಇಟಿ ಅಪ್ಲಿಕೇಶನ್ ಸಲ್ಲಿಸಿದ್ದು, ನೀಟ್ ಮೂಲಕ ವೈದ್ಯಕೀಯ ಪ್ರವೇಶಾತಿಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ತಮ್ಮ ನೀಟ್ ರೋಲ್ ನಂಬರ್ ಅನ್ನು ಯುಜಿಸಿಇಟಿ ಅರ್ಜಿಯೊಂದಿಗೆ ಲಿಂಕ್ ಮಾಡಲು ಶೀಘ್ರದಲ್ಲೇ ಪ್ರತ್ಯೇಕ ಲಿಂಕ್ ಒದಗಿಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ವೈದ್ಯಕೀಯ (MBBS), ದಂತವೈದ್ಯಕೀಯ (BDS), ಆಯುರ್ವೇದ (BAMS), ಯುನಾನಿ (BUMS) ಮತ್ತು ಹೋಮಿಯೋಪತಿ (BHMS) ಕೋರ್ಸ್‌ಗಳ ಪ್ರವೇಶಾತಿಯು ಸಂಪೂರ್ಣವಾಗಿ ನೀಟ್ ರಾಂಕ್ ಆಧಾರದ ಮೇಲೆ ನಡೆಯಲಿದೆ. ಹೊಸದಾಗಿ ನೋಂದಾಯಿಸಿಕೊಂಡ ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆಗೆ (Document Verification) ಹಾಜರಾಗುವ ಕುರಿತಾದ ಸಂಪೂರ್ಣ ವಿವರಗಳನ್ನು ಕೆಇಎ ಶೀಘ್ರದಲ್ಲೇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ.

ಹೊರರಾಜ್ಯದ ಅಭ್ಯರ್ಥಿಗಳಿಗೆ ನಿಯಮಗಳೇನು?

ಕರ್ನಾಟಕೇತರ (ಹೊರರಾಜ್ಯದ) ಅಭ್ಯರ್ಥಿಗಳು ಕೂಡ ಕೆಇಎ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡು, ನಿಗದಿತ ಅರ್ಜಿ ಶುಲ್ಕ ಪಾವತಿಸಿ, ತಮ್ಮ ದ್ವಿತೀಯ ಪಿಯುಸಿ/ಹೈಯರ್ ಸೆಕೆಂಡರಿ ಅಂಕಗಳನ್ನು ನಮೂದಿಸಬೇಕಾಗುತ್ತದೆ. ಅವರು ತಮ್ಮ ಅಂಕಪಟ್ಟಿಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬಹುದಾಗಿದ್ದು, ಇಂತಹ ಅಭ್ಯರ್ಥಿಗಳು ನೇರವಾಗಿ ದಾಖಲಾತಿ ಪರಿಶೀಲನೆಗೆ ಹಾಜರಾಗುವ ಅಗತ್ಯವಿರುವುದಿಲ್ಲ.

ಆದರೆ ಭಾರತದ ಸಾಗರೋತ್ತರ ನಾಗರಿಕ (OCI), ಭಾರತೀಯ ಮೂಲದ ವ್ಯಕ್ತಿ (PIO), ಅನಿವಾಸಿ ಭಾರತೀಯರು (NRI), ವಿದೇಶಿ ನಾಗರಿಕರು ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಸೀಟುಗಳು, ಎನ್‌ಆರ್‌ಐ ವಾರ್ಡ್ ಸೌಲಭ್ಯ ಅಥವಾ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನಲ್ಲಿನ ನಿರ್ದಿಷ್ಟ ಸೀಟುಗಳಿಗೆ ಅರ್ಹತೆ ಹೊಂದಿರುವ ಹೊರರಾಜ್ಯದ ಅಭ್ಯರ್ಥಿಗಳು ಕಡ್ಡಾಯವಾಗಿ ಸ್ಲಾಟ್ ಕಾಯ್ದಿರಿಸಿ, ನಿಗದಿತ ದಿನಾಂಕದಂದು ದಾಖಲೆ ಪರಿಶೀಲನೆಗೆ ಹಾಜರಾಗಬೇಕಾಗುತ್ತದೆ. ಈ ದಿನಾಂಕಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು.

ಇದನ್ನೂ ಓದಿ: ಕುರಿ ಕಾಯುತ್ತಲೇ ನೀಟ್‌ನಲ್ಲಿ ಅಪ್ರತಿಮ ಸಾಧನೆ; ದೇಶಕ್ಕೇ 694ನೇ ರ‍್ಯಾಂಕ್ ಪಡೆದ ಕೊಪ್ಪಳದ ಹಳ್ಳಿ ಹೈದ

ಡಿಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ!

ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆ ಅಭ್ಯರ್ಥಿಗಳಿಗೆ ಜುಲೈ 21 ರಿಂದ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದೆ. ಜುಲೈ 21 ರಿಂದ ಜುಲೈ 24 ರವರೆಗೆ ಅಭ್ಯರ್ಥಿಗಳು ತಮ್ಮ ಆದ್ಯತೆಯ ಕಾಲೇಜುಗಳ ಆಯ್ಕೆಯನ್ನು ದಾಖಲಿಸಬಹುದು. ಹಾಗೂ ಜುಲೈ 24 ರ ಸಂಜೆ 6 ಗಂಟೆಗೆ ಅಣಕು ಸೀಟು ಹಂಚಿಕೆಯ ಫಲಿತಾಂಶ ಪ್ರಕಟವಾಗಲಿದೆ. ಇದರ ನಂತರ ಅಭ್ಯರ್ಥಿಗಳು ಜುಲೈ 27 ರವರೆಗೆ ತಮ್ಮ ಆಯ್ಕೆಗಳನ್ನು ಸೇರಿಸಲು, ಮಾರ್ಪಡಿಸಲು ಅಥವಾ ಡಿಲೀಟ್ ಮಾಡಲು ಅವಕಾಶವಿರುತ್ತದೆ. ಮೊದಲ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶವು ಜುಲೈ 27 ರ ಸಂಜೆ 6 ಗಂಟೆಗೆ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಆರ್ಕಿಟೆಕ್ಚರ್ ಕೋರ್ಸ್‌ಗಳ ಪ್ರವೇಶಾತಿ ಬಯಸುವ ಅಭ್ಯರ್ಥಿಗಳು ತಮ್ಮ ನಾಟಾ ಅಂಕಪಟ್ಟಿಯನ್ನು ಜುಲೈ 20 ರ ಒಳಗಾಗಿ ಕೆಇಎ ಕಚೇರಿಗೆ ಸಲ್ಲಿಸುವುದನ್ನು ಕಡ್ಡಾಯ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *