ಜೀಲಾಂಗ್, ಫೆ.18: ಆಸ್ಟ್ರೇಲಿಯಾದ ವಿಕ್ಟೋರಿಯಾ ಪ್ರಾಂತ್ಯದ ಜೀಲಾಂಗ್ ಎಂಬ ನಗರದ ಸಮೀಪವಿರುವ ಕೊರಿಯೊ (Corio) ಎಂಬಲ್ಲಿ ಭಾರತೀಯ ಮೂಲದ 22 ವರ್ಷದ ನರ್ಸ್ ಹರ್ಮನ್ ಪ್ರೀತ್ ಸಿಂಗ್ ಅವರ ಮೇಲೆ ಭೀಕರ ಜನಾಂಗೀಯ ದಾಳಿ ನಡೆದಿದೆ. ಫೆಬ್ರವರಿ 17 ತಡರಾತ್ರಿ ಹರ್ಮನ್ ಪ್ರೀತ್ ಸಿಂಗ್ ಜಿಮ್‌ನಲ್ಲಿ ವರ್ಕೌಟ್ ಮುಗಿಸಿ ಹೊರಬರುವಾಗ ಈ ಘಟನೆ ಸಂಭವಿಸಿದೆ. ಮೂವರು ವ್ಯಕ್ತಿಗಳ ಗುಂಪು ಹರ್ಮನ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಬಿಳಿ ಬಣ್ಣದ ಟಿ-ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ಹರ್ಮನ್ ಅವರನ್ನು “ಇಂಡಿಯನ್ ಡಾಗ್” (ಭಾರತೀಯ ನಾಯಿ) ಎಂದು ಜನಾಂಗೀಯವಾಗಿ ನಿಂದಿಸುತ್ತಿರುವುದು ಕೂಡ ಕಾಣಬಹುದು.
ಹರ್ಮನ್ ಅವರ ಮುಖಕ್ಕೆ ತಲೆಯಿಂದ ಜೋರಾಗಿ ಗುದ್ದಿದ ಪರಿಣಾಮ ಅವರ ಮೂಗಿನಿಂದ ರಕ್ತ ಬಂದು ದೊಡ್ಡ ಗಾಯಗಳಾಗಿವೆ. ಹರ್ಮನ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಘಟನೆಯಿಂದ ಹರ್ಮನ್ ತೀವ್ರ ಆಘಾತಕ್ಕೊಳಗಾಗಿದ್ದಾರೆ. “ನನಗೆ ಈಗ ಸುರಕ್ಷತೆಯ ಭಯವಾಗುತ್ತಿದೆ, ಮತ್ತೆ ಜಿಮ್‌ಗೆ ಹೋಗಲು ಸಾಧ್ಯವೇ ಎಂಬುದು ತಿಳಿಯುತ್ತಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಅವರ ಕುಟುಂಬ ಕೂಡ ಇದರಿಂದ ಭಯಗೊಂಡಿದೆ.
ಕಳೆದ ವರ್ಷ ಅಂದರೆ ಡಿಸೆಂಬರ್ನಲ್ಲಿ ಇಂತಹದೇ ಒಂದು ಘಟನೆ ಸಿಡ್ನಿಯ ಪ್ರಸಿದ್ಧ ಬಾಂಡಿ ಬೀಚ್‌ನಲ್ಲಿ ಹನುಕ್ಕಾ ಹಬ್ಬದ ಆಚರಣೆಯ ವೇಳೆ ಸಾಮೂಹಿಕ ಗುಂಡಿನ ದಾಳಿ ನಡೆದಿತ್ತು. ಈ ದಾಳಿಯಲ್ಲಿ 15 ಜನ ಸಾವನ್ನಪ್ಪಿದ್ದರು. ಈ ದಾಳಿಯ ಹಿಂದೆ ತಂದೆ-ಮಗ (ಸಜಿದ್ ಅಕ್ರಮ್ ಮತ್ತು ನವೀದ್ ಅಕ್ರಮ್) ಇರುವುದು ದೃಢಪಟ್ಟಿತ್ತು. ಸಜಿದ್ ಅಕ್ರಮ್ ಮೂಲತಃ ಹೈದರಾಬಾದ್‌ನವರು ಮತ್ತು ಅವರು ಇಂದಿಗೂ ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದರು. ಸುಮಾರು 30 ವರ್ಷಗಳ ಹಿಂದೆ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದರೂ, ಅವರು ಇಸ್ಲಾಮಿಕ್ ಸ್ಟೇಟ್ (IS) ಸಿದ್ಧಾಂತದಿಂದ ಪ್ರೇರಿತರಾಗಿ ಈ ಕೃತ್ಯ ಎಸಗಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ: ಸ್ಕೂಬಿ ಡೂ ಪಾತ್ರಧಾರಿಗಳ ವೇಷ ತೊಟ್ಟು ಕಳ್ಳತನ ಮಾಡುತ್ತಿದ್ದವರ ಸ್ಕ್ವಿಡ್ ಗೇಮ್ ಪಾತ್ರಧಾರಿಯಂತೆ ಬಂದು ಹಿಡಿದ ಪೊಲೀಸ್
ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಭಾರತೀಯ ಮೂಲದವರ ಮೇಲೆ ನಡೆಯುತ್ತಿರುವ ಇಂತಹ ಹಲ್ಲೆಗಳು ಅಲ್ಲಿನ ಅನಿವಾಸಿ ಭಾರತೀಯರಲ್ಲಿ ಆತಂಕ ಮೂಡಿಸಿವೆ. ಜೀಲಾಂಗ್ ಪೊಲೀಸರು ಹರ್ಮನ್ ಪ್ರೀತ್ ಸಿಂಗ್ ಮೇಲಿನ ಹಲ್ಲೆಯನ್ನು ಜನಾಂಗೀಯ ದ್ವೇಷದ ಅಪರಾಧವೆಂದು ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
