ಕಳೆದ ಆರೇಳು ವರ್ಷಗಳಿಂದ ಕೊರಿಯನ್ ಸಿನಿಮಾಗಳು (Cinema) ಮತ್ತು ಸರಣಿಗಳು ಜಾಗತಿಕ ಮಟ್ಟದಲ್ಲಿ ಭಾರಿ ಜನಪ್ರಿಯತೆ ಗಳಿಸುತ್ತಿವೆ. ಕೋವಿಡ್ ಸಮಯದಲ್ಲಿ ಬಿಡುಗಡೆ ಆದ ಕೆಲ ಕೊರಿಯನ್ ಸಿನಿಮಾಗಳು, ಆ ಬಳಿಕ ಬಂದ ‘ಸ್ಕ್ವಿಡ್ ಗೇಮ್ಸ್’ ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡಿವೆ. ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಮತ್ತೊಂದು ಕೊರಿಯನ್ ವೆಬ್ ಸರಣಿ ಸಖತ್ ಸದ್ದು ಮಾಡುತ್ತಿದ್ದು, ಟಾಪ್ ಟ್ರೆಂಡಿಂಗ್ನಲ್ಲಿದೆ. ಅದುವೇ ಇತ್ತೀಚೆಗೆ ಬಿಡುಗಡೆ ಆದ ‘ಇಫ್ ವಿಷಸ್ ಕುಡ್ ಕಿಲ್’. ಪ್ರೇಕ್ಷಕರಲ್ಲಿ ಭೀತಿ ಮತ್ತು ಕುತೂಹಲ ಎರಡನ್ನೂ ಒಟ್ಟಿಗೆ ಉಂಟು ಮಾಡುತ್ತಿರುವ ಈ ವೆಬ್ ಸರಣಿ, ಮನುಷ್ಯನ ಕರಾಳ ಆಸೆಗಳ ಬಗೆಗಿನ ಕತೆಯನ್ನು ಒಳಗೊಂಡಿದೆ. ಏಪ್ರಿಲ್ 24 ರಂದು ಈ ವೆಬ್ ಸರಣಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದೆ.
‘ಇಫ್ ವಿಷಸ್ ಕುಡ್ ಕಿಲ್’ ವೆಬ್ ಸರಣಿಯು ಭಿನ್ನ ರೀತಿಯ ಕತೆಯನ್ನು ಒಳಗೊಂಡಿದೆ. ಹೈಸ್ಕೂಲ್ ಯುವಕರಿಗೆ ‘ಗಿರಿಗೊ’ ಹೆಸರಿನ ಮೊಬೈಲ್ ಅಪ್ಲಿಕೇಶನ್ ಬಗ್ಗೆ ಗೊತ್ತಾಗುತ್ತದೆ. ಆ ಅಪ್ಲಿಕೇಶನ್ನಲ್ಲಿ ಯಾರು ಏನೇ ಕೇಳಿಕೊಂಡರೂ ಅದು ನೆರವೇರುತ್ತದೆ. ಈ ಅಪ್ಲಿಕೇಶನ್ ಅನ್ನು ಆ ಯುವಕರು ಟ್ರೈ ಮಾಡುತ್ತಾರೆ. ಅವರು ಹೇಳಿದಂತೆ ಅವರ ಕೋರಿಕೆ ಈಡೇರುತ್ತದೆ ಆದರೆ ಅದಾದ ಬಳಿಕ ನಿಜವಾದ ಹಾರರ್ ಶುರು ಆಗುತ್ತದೆ. ಯಾರು ವಿಶ್ ಕೇಳಿರುತ್ತಾರೆಯೋ, ಆ ವಿಶ್ ಈಡೇರಿದ 24 ಗಂಟೆಗಳ ಬಳಿಕ ವಿಶ್ ಕೇಳಿದ ವ್ಯಕ್ತಿ ಸಾಯಬೇಕಾಗುತ್ತದೆ.
ಇದನ್ನೂ ಓದಿ:‘ರೋಬೊ’ ಸಿನಿಮಾಕ್ಕೂ ಇವಿಎಂಗೂ ಇರುವ ಸಂಬಂಧ ಗೊತ್ತೆ?
ಕೆಲ ವಿದ್ಯಾರ್ಥಿಗಳು ಸಾಯುತ್ತಾರೆ, ಇನ್ನು ಕೆಲವರು ಅದರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ, ಕೆಲವರು ಈ ಸಾವಿನ ಸೈಕಲ್ ಅನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತಾರೆ. ಇದೆಲ್ಲ ಏಕೆ ಶುರುವಾಯ್ತು, ಇದರ ಹಿಂದೆ ಯಾರಿದ್ದಾರೆ ಎಂದೆಲ್ಲ ಹುಡುಕಾಟ ಶುರು ಆಗುತ್ತದೆ. ವೆಬ್ ಸರಣಿಯ ಕೆಲವು ದೃಶ್ಯಗಳು, ಭಯ, ಕುತೂಹಲ ಉಂಟು ಮಾಡುತ್ತವೆ. ರಕ್ತಪಾತವಂತೂ ವಿಪರೀತವಾಗಿದೆ. ಕೆಲವು ದೃಶ್ಯಗಳನ್ನು ಅಳ್ಳೆದೆಯವರು ನೋಡಲು ಸಹ ಆಗದಂತಿದೆ. ಆದರೆ ನೆಟ್ಪ್ಲಿಕ್ಸ್ನಲ್ಲಿ ಈ ವೆಬ್ ಸರಣಿ ಸಖತ್ ಟ್ರೆಂಡಿಂಗ್ನನಲ್ಲಿದೆ.
ವೆಬ್ ಸರಣಿಯ ಕತೆಯನ್ನು ಪಾರ್ಕ್ ಜೂಂಗ್ ಸೀಪ್ ಬರೆದಿದ್ದು, ನಿರ್ದೇಶನ ಮಾಡಿರುವುದು ಪಾರ್ಕ್ ಯೋನ್ ಸೀ. ಪ್ರಸ್ತುತ ನೆಟ್ಫ್ಲಿಕ್ಸ್ನ ಟಾಪ್ ಟ್ರೆಂಡಿಂಗ್ ವೆಬ್ ಸರಣಿ ಇದಾಗಿದ್ದು, ಲಕ್ಷಾಂತರ ಗಂಟೆಗಳ ವೀಕ್ಷಣೆಯನ್ನು ಈಗಾಗಲೇ ಈ ವೆಬ್ ಸರಣಿ ಕಂಡಿದೆ. ವೆಬ್ ಸರಣಿಯ ಬಗ್ಗೆ ಸಾಕಷ್ಟು ಪಾಸಿಟಿವ್ ವಿಮರ್ಶೆಗಳು ಸಹ ವ್ಯಕ್ತವಾಗಿವೆ. ಎಂಟು ಎಪಿಸೋಡ್ಗಳ ವೆಬ್ ಸರಣಿ ಇದಾಗಿದ್ದು, ವೆಬ್ ಸರಣಿಯ ಎರಡನೇ ಭಾಗಕ್ಕಾಗಿ ಈಗಾಗಲೇ ಪ್ರೇಕ್ಷಕರು ಬೇಡಿಕೆ ಇಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
