ಕಲಬುರಗಿ, ಆಗಸ್ಟ್ 07: ಜಿಲ್ಲೆಯ ಸೇಡಂನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಶವ ಸಂಸ್ಕಾರಕ್ಕೂ (funeral) ಜನರು ಪರದಾಡುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಸೇಡಂ ತಾಲೂಕಿನಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಮಲಾವತಿ ನದಿಯಲ್ಲೇ ಜೀವವನ್ನು ಪಣಕ್ಕಿಟ್ಟು ಟ್ರ್ಯಾಕ್ಟರ್ ಓಡಿಸುವ ಮೂಲಕ ಮೃತದೇಹವನ್ನು ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಿದ ಘಟನೆ ಬೆಳಕಿಗೆ ಬಂದಿದೆ.
ನಡೆದಿದ್ದೇನು?
ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ತವರು ಕ್ಷೇತ್ರ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ಸೇಡಂ ಪಟ್ಟಣದ ಪುರಸಭೆ ಮಾಜಿ ಸದಸ್ಯ, ಮಾದಿಗ ಸಮಾಜದ ಮುಖಂಡ ರಾಜು ಕಾಳಗಿಕರ್ ಅಕಾಲಿಕ ನಿಧನ ಹೊಂದಿದರು. ಪಟ್ಟಣದ ಬಸವನಗರದಲ್ಲಿ ಸಾರ್ವಜನಿಕ ಅಂತಿಮ ದರ್ಶನ ಬಳಿಕ ಕಮಲಾವತಿ ನದಿಯಾಚೆ ಇರುವ ಮಾದಿಗ ಸಮಾಜದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ಮತ್ತು ಸ್ನೇಹಿತರು ನಿರ್ಧರಿಸಿದ್ದರು.
ಇದನ್ನೂ ಓದಿ: ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಗ್ರಾಮಸ್ಥರು!
ಮೃತದೇಹ ಸಾಗಾಟಕ್ಕೆ ಅಡ್ಡಿಯಾಗಿದ್ದು, ಪಟ್ಟಣ ಹೊರವಲಯದ ಕಮಲಾವತಿ ನದಿ. ಸದ್ಯ ಕಮಲಾವತಿ ನದಿ ತುಂಬಿ ಹರಿಯುತ್ತಿದ್ದು, ಟ್ರ್ಯಾಕ್ಟರ್‌ನಲ್ಲಿ ಮೃತ ದೇಹವಿಟ್ಟುಕೊಂಡು ನದಿಯಲ್ಲೇ ಟ್ರ್ಯಾಕ್ಟರ್ ಓಡಿಸಿದ್ದಾರೆ. ಅಲ್ಲದೇ ಅಂತ್ಯಕ್ರಿಯೆಗೆ ಬಂದವರು ಕೂಡ ಕೈ ಕೈ ಹಿಡಿದು ನದಿ ದಾಟಿದ್ದಾರೆ. ಬಳಿಕ ರುದ್ರಭೂಮಿಯಲ್ಲಿ ರಾಜು ಕಾಗಿಳಕರ್‌ರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
85 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ
ಇನ್ನು ಸೇಡಂ ಪಟ್ಟಣ ಹೊರವಲಯದ ಕಮಲಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಬೇಕೆಂದು ಆಗ್ರಹಿಸಿ ಸೇಡಂ ನಾಗರಿಕರು ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದ ಪರಿಣಾಮ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ 85 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿತ್ತು. ಅದರಂತೆ ಸೇತುವೆ ನಿರ್ಮಾಣ ಟೆಂಡರ್ ಪ್ರಕ್ರಿಯೆ ಸಹ ಪೂರ್ಣಗೊಂಡಿದೆ.
ಸೇತುವೆ ನಿರ್ಮಾಣ ಮಾಡದೆ ನಿರ್ಲಕ್ಷ್ಯ
ನದಿಯಲ್ಲಿ ಅಪಾರ ಪ್ರಮಾಣ ನೀರು ಇರುವ ನೆಪವೊಡ್ಡಿ ಅಧಿಕಾರಿಗಳು ಸೇತುವೆ ನಿರ್ಮಾಣಕ್ಕೆ ಕಾಲಹರಣ ಮಾಡುತ್ತಿದ್ದಾರೆ ಅಂತಾ ಸೇಡಂ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮಳೆಗಾಲವಲ್ಲದೆ ಚಳಿಗಾಲ ಹಾಗೂ ಬೇಸಿಗೆಯಲ್ಲೂ ಸೇತುವೆ ನಿರ್ಮಾಣ ಮಾಡದೆ ನಿರ್ಲಕ್ಷ್ಯ ವಹಿಸಿರುವುದರಿಂದ ಪ್ರತಿವರ್ಷವೂ ಇದೇ ರೀತಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಕಬಿನಿ ನದಿ ಪಾತ್ರದಲ್ಲಿರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ
ಆಧುನಿಕ ಯುಗದಲ್ಲೂ ಶವಸಂಸ್ಕಾರಕ್ಕಾಗಿ ಜನರು ಇಷ್ಟೊಂದು ಹರಸಾಹಸ ಪಡುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಇನ್ನಾದರೂ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ಕಮಲಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಿ ಜನರ ಬಹುದಿನಗಳ ಬೇಡಿಕೆ ಈಡೇರಿಸುತ್ತಾರಾ ಕಾದು ನೋಡಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
