ನೊಣಗಳ ಕಾಟದಿಂದ ಮುಕ್ತಿ ಪಡೆಯಲು ಈ ಸಿಂಪಲ್‌ ಮನೆಮದ್ದುಗಳನ್ನು ಪ್ರಯತ್ನಿಸಿ – Kannada News | This home remedy is effective in keeping flies away from the home

ಬಹುತೇಕ ಹೆಚ್ಚಿನ ಮನೆಗಳಲ್ಲಿ ಸೊಳ್ಳೆಗಳಂತೆ ನೊಣಗಳ (Flies) ಕಾಟವೂ ಇದ್ದೇ ಇರುತ್ತದೆ. ಕೊಳಕು ಸ್ಥಳಗಳಲ್ಲಿ ವಾಸಿಸುವ ಇವು ಮನೆಯೊಳಗೆ ನುಗ್ಗಿ ಅಡುಗೆ ಕೋಣೆಯಲ್ಲಿರುವ ಪಾತ್ರೆಗಳು, ಆಹಾರದ ಮೇಲೂ ಸಹ ಕುಳಿತುಬಿಡುತ್ತವೆ. ಈ ಮೂಲಕ ನಾನಾ ರೀತಿಯ ರೋಗಗಳನ್ನು ಸಹ ಹರಡುತ್ತವೆ. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ನೊಣಗಳನ್ನು ತೊಡೆದುಹಾಕಲು ಹೆಚ್ಚಿನವರು ಮಾರುಕಟ್ಟೆಯಲ್ಲಿ ಸಿಗುವಂತಹ ರಾಸಾಯನಿಕಯುಕ್ತ ಕೀಟ, ನೊಣ ನಿವಾರಕಗಳನ್ನು ಬಳಸುತ್ತಾರೆ. ಈ ಕೆಮಿಕಲ್‌ ಉತ್ಪನ್ನಗಳನ್ನು ಬಳಸುವ ಬದಲು ಕೆಲವೊಂದು ಮನೆಮದ್ದುಗಳ ಸಹಾಯದಿಂದ ಸುಲಭವಾಗಿ ನೊಣಗಳನ್ನು ಓಡಿಸಬಹುದು. ಆ ಮನೆಮದ್ದುಗಳು ಯಾವುವು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ನೊಣಗಳ ಕಾಟದಿಂದ ಮುಕ್ತಿ ಪಡೆಯಲು ಸಹಕಾರಿ ಈ ಮನೆಮದ್ದುಗಳು:

ಸಾರಭೂತ ತೈಲ: ಸಾರಭೂತ ತೈಲಗಳು ನೈಸರ್ಗಿಕ ಕೀಟ ನಿವಾರಕಗಳಾಗಿದ್ದು, ಅವು ನೊಣಗಳು ಮತ್ತು ಸೊಳ್ಳೆಗಳನ್ನು ನಿಮಿಷಗಳಲ್ಲಿ  ಮನೆಯಿಂದ ಓಡಿಸುತ್ತದವೆ. ಲ್ಯಾವೆಂಡರ್, ಯೂಕಲಿಪ್ಟಸ್ ಮತ್ತು ಪೈನ್‌ನಂತಹ ಎಣ್ಣೆಗಳ ಬಲವಾದ ವಾಸನೆಗಳನ್ನು ನೊಣಗಳು ಮತ್ತು ಸೊಳ್ಳೆಗಳು ಇಷ್ಟಪಡುವುದಿಲ್ಲ. ಇದಕ್ಕಾಗಿ  ಕೆಲವು ಹನಿ ಸಾರಭೂತ ತೈಲವನ್ನು ಸಣ್ಣ ಹತ್ತಿ ಉಂಡೆಯ ಮೇಲೆ ಹಾಕಿ ನೊಣಗಳಿರುವ ಪ್ರದೇಶಗಳ ಇರಿಸಿ. ಇದು ಕೋಣೆಯಾದ್ಯಂತ ಪರಿಮಳವನ್ನು ಹರಡುತ್ತದೆ ಮತ್ತು ನೊಣಗಳನ್ನು ಓಡಿಸುತ್ತವೆ.  ಅಲ್ಲದೆ ನೀರು ಮತ್ತು ಸಾರಭೂತ ತೈಲಗಳನ್ನು ಬೆರೆಸಿ ಸ್ಪ್ರೇ ಕೂಡ ಮಾಡಬಹುದು.

ಲವಂಗ ಮತ್ತು ನಿಂಬೆಹಣ್ಣು: ಲವಂಗದ ವಾಸನೆಗೆ ನೊಣಗಳು ಓಡಿಹೋಗುತ್ತವೆ. ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ ಅದರಲ್ಲಿ 5-6 ಲವಂಗವನ್ನು ಇಟ್ಟು, ಅದನ್ನು ಕಿಟಕಿ ಅಥವಾ ಬಾಗಿಲಿನ ಬಳಿ ಇರಿಸಿ. ಈ ಸುವಾಸನೆಯು ನೊಣಗಳನ್ನು ಹಿಮ್ಮೆಟ್ಟಿಸಲು ಸಹಕಾರಿ ಅಲ್ಲದೆ ಇದರ ಪರಿಮಳ ಮನೆಯನ್ನು ತಾಜಾವಾಗಿರಿಸುತ್ತದೆ.

ಕರ್ಪೂರ: ಕರ್ಪೂರವು ನೈಸರ್ಗಿಕ ಕೀಟನಾಶಕವಾಗಿ ಕಾರ್ಯನಿರ್ವಹಿಸುತ್ತದೆ. ಒಂದು ಸಣ್ಣ ಪಾತ್ರೆಯಲ್ಲಿ ನೀರಿನಿಂದ ತುಂಬಿಸಿ, 2-3 ಕರ್ಪೂರ ಮಾತ್ರೆಗಳನ್ನು ಸೇರಿಸಿ ಮತ್ತು ಈ ಪಾತ್ರೆಯನ್ನು ನಿಮ್ಮ ಕೋಣೆಯಲ್ಲಿ ಇರಿಸಿ. ಕರ್ಪೂರದ ಸುವಾಸನೆಯು ನೊಣಗಳನ್ನು ಹಿಮ್ಮೆಟ್ಟಿಸುತ್ತದೆ ಮತ್ತು ಸೊಳ್ಳೆಗಳನ್ನು ಓಡಿಸಲೂ ಪರಿಣಾಮಕಾರಿಯಾಗಿದೆ.

ನಿಂಬೆಹಣ್ಣು: ನಿಂಬೆ ರಸಕ್ಕೆ ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಒಂದು ಮಿಶ್ರಣ ತಯಾರಿಸಿ, ಇದನ್ನು ಸ್ಪ್ರೇ ಬಾಟಲಿಗೆ ಸುರಿದು, ನೊಣ ಕೀಟಗಳು ಓಡಾಡುವ ಸ್ಥಳದಲ್ಲಿ ಸ್ಪ್ರೇ ಮಾಡಿ, ಇದು ನೊಣಗಳನ್ನು ಓಡಿಸುವುದು ಮಾತ್ರವಲ್ಲ ಮನೆಗೆ ತಾಜಾ ಪರಿಮಳವನ್ನು ನೀಡುತ್ತದೆ.

ಪುದೀನ ಮತ್ತು ತುಳಸಿ ಸ್ಪ್ರೇ: ನೊಣಗಳು ಪುದೀನ ಮತ್ತು ತುಳಸಿಯ ವಾಸನೆಯನ್ನು ದ್ವೇಷಿಸುತ್ತವೆ. ಈ ಎರಡರ ಪೇಸ್ಟ್ ಮಾಡಿ, ನೀರಿನೊಂದಿಗೆ ಬೆರೆಸಿ, ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ಈ ಮಿಶ್ರಣವನ್ನು ಮೂಲೆಗಳು, ಕಿಟಕಿಗಳು ಮತ್ತು ಅಡುಗೆ ಪ್ರದೇಶದಲ್ಲಿ ಸಿಂಪಡಿಸಿ. ಈ ಪರಿಹಾರವು ನೊಣಗಳನ್ನು ನೈಸರ್ಗಿಕವಾಗಿ ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ನೆಲದ ಮೇಲಿನ ಹಠಮಾರಿ ಕಲೆಗಳನ್ನು ಹೋಗಲಾಡಿಸಲು ಜಸ್ಟ್‌ ಟಿಪ್ಸ್‌ ಪಾಲಿಸಿ

ಆಪಲ್ ಸೈಡರ್ ವಿನೆಗರ್ ಮತ್ತು ಸೋಪ್: ​​ಆಪಲ್ ಸೈಡರ್ ವಿನೆಗರ್ ಅನ್ನು ಒಂದು ಬಟ್ಟಲಿಗೆ ಹಾಕಿ ಕೆಲವು ಹನಿ ಡಿಶ್‌ವಾಶ್ ಸೋಪ್ ಸೇರಿಸಿ. ಈ ಸುವಾಸನೆಯು ನೊಣಗಳನ್ನು ಆಕರ್ಷಿಸುತ್ತದೆ, ಮತ್ತು ನೊಣಗಳು ಆ ನೀರಿಗೆ ಬಿದ್ದು ಸಾಯುತ್ತವೆ. ಈ ಮೂಲಕವೂ ನೊಣಗಳ ಕಾಟದಿಂದ ಮುಕ್ತಿ ಪಡೆಯಬಹುದು.

ಈ ಮನೆಮದ್ದುಗಳು ಮಾತ್ರವಲ್ಲ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕವೂ ನೊಣ, ಕೀಟ ಮತ್ತು ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯಬಹುದು. ಅದಕ್ಕಾಗಿ ಮೊದಲು ಮನೆಯ ಸ್ವಚ್ಛತೆಯ ಬಗ್ಗೆ ಗಮನ ಹರಿಸಿ. ಯಾವಾಗಲೂ ಹಣ್ಣುಗಳು ಮತ್ತು ಆಹಾರ ಪದಾರ್ಥಗಳನ್ನು ಮುಚ್ಚಿಡಿ. ಕಸವನ್ನು ಪ್ರತಿನಿತ್ಯ ಎಸೆಯಿರಿ. ಆದಷ್ಟು ಸ್ವಚ್ಛತೆಯ ಬಗ್ಗೆ ಗಮನ ಹರಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *