ಆರ್. ಅಶೋಕ್
ಬೆಂಗಳೂರು, ಆಗಸ್ಟ್ 09: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕೀಯದಲ್ಲಿ ಮತ್ತೆ ಆರೋಪ-ಪ್ರತ್ಯಾರೋಪಗಳ ಕಿಡಿ ಹೊತ್ತಿಕೊಂಡಿದೆ. ಈ ಪ್ರಕರಣದಲ್ಲಿ ಇ.ಡಿ (ED) ತನಿಖೆ ಎದುರಿಸುತ್ತಿರುವ ಮಾಜಿ ಸಚಿವ ಬಿ. ನಾಗೇಂದ್ರ ಅವರು ನ್ಯಾಯಾಲಯದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ, ಕೋರ್ಟ್ ಅನುಮತಿ ಪಡೆಯದೇ ದೆಹಲಿಗೆ ಪ್ರವಾಸ ಕೈಗೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ನಾಗೇಂದ್ರ ಅವರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ಆರ್. ಅಶೋಕ್ ಪೋಸ್ಟ್ನಲ್ಲೇನಿದೆ?
ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ, ನ್ಯಾಯಾಲಯದ ಕಣ್ಣಿಗೆ ಮಣ್ಣೆರಚಿ ದೆಹಲಿಗೆ ಓಡಾಡುವಷ್ಟು ಅಧಿಕಾರದ ಮದ ಏರಿದೆಯೇ?
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಪ್ರಕರಣದಲ್ಲಿ ED ತನಿಖೆ ಎದುರಿಸುತ್ತಿರುವ ಕಳಂಕಿತ ಸಚಿವ ನಾಗೇಂದ್ರ ಅವರು, ನ್ಯಾಯಾಲಯ ವಿಧಿಸಿರುವ ಷರತ್ತುಗಳ ನಡುವೆಯೇ ಅನುಮತಿ ಪಡೆಯದೆ… pic.twitter.com/mKu3s6dVH1
— R. Ashoka (@RAshokaBJP) August 9, 2026
ತಮ್ಮ ಪೋಸ್ಟ್‌ನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ಆರ್. ಅಶೋಕ್, “ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ, ನ್ಯಾಯಾಲಯದ ಕಣ್ಣಿಗೆ ಮಣ್ಣೆರಚಿ ದೆಹಲಿಗೆ ಓಡಾಡುವಷ್ಟು ಅಧಿಕಾರದ ಮದ ಏರಿದೆಯೇ?” ಎಂದು ಪ್ರಶ್ನಿಸಿದ್ದಾರೆ. ಮಾಧ್ಯಮ ವರದಿಗಳನ್ನು ಉಲ್ಲೇಖಿಸಿರುವ ಅವರು, ಜುಲೈ 15 ಮತ್ತು ಜುಲೈ 26ರಂದು ನಾಗೇಂದ್ರ ಅವರು ನಡೆಸಿದ್ದಾರೆನ್ನಲಾದ ದೆಹಲಿ ಪ್ರವಾಸದ ಕುರಿತು ಜಾರಿ ನಿರ್ದೇಶನಾಲಯವು (ED) ಈಗಾಗಲೇ ಸಿಸಿಟಿವಿ ದೃಶ್ಯಗಳು ಹಾಗೂ ವಿಮಾನ ನಿಲ್ದಾಣದ ದಾಖಲೆಗಳನ್ನು ಪರಿಶೀಲಿಸುತ್ತಿದೆ ಎಂದು ತಿಳಿಸಿದ್ದಾರೆ.
ಒಂದೆಡೆ ಇ.ಡಿ ತನಿಖೆಗೆ ಕಾಲಾವಕಾಶ ಕೋರುತ್ತಾ, ಇನ್ನೊಂದೆಡೆ ನ್ಯಾಯಾಲಯದ ಅನುಮತಿಯನ್ನೇ ಪಡೆಯದೆ ಪ್ರಯಾಣ ಬೆಳೆಸುವುದು ಕಾಂಗ್ರೆಸ್ ಪಕ್ಷಕ್ಕೆ ಕಾನೂನು ಮತ್ತು ನ್ಯಾಯಾಲಯಗಳ ಮೇಲಿರುವ ಅಸಲಿ ಗೌರವವನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.
“ನಿಮಗೆ ನ್ಯಾಯಾಲಯ ದೊಡ್ಡದೋ, ಹೈಕಮಾಂಡ್ ದೊಡ್ಡದೋ?”
ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದಿರುವ ಅಶೋಕ್, ಅಧಿಕಾರದಲ್ಲಿರುವವರಿಗೆ ಒಂದು ಕಾನೂನು, ಸಾಮಾನ್ಯ ಜನರಿಗೊಂದು ಕಾನೂನು ಎಂಬ ಕಾಂಗ್ರೆಸ್ಸಿಗರ ಮನಸ್ಥಿತಿ ಈಗ ಬಯಲಾಗಿದೆ ಎಂದಿದ್ದಾರೆ. ನೇರವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪ್ರಶ್ನೆ ಎಸೆದಿರುವ ಅವರು, “ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ನ್ಯಾಯಾಲಯದ ಆದೇಶ ದೊಡ್ಡದೋ, ಇಲ್ಲ ನಿಮ್ಮ ಹೈಕಮಾಂಡ್ ಆದೇಶ ದೊಡ್ಡದೋ? ಭ್ರಷ್ಟಾಚಾರ ಮತ್ತು ಕಾನೂನು ಉಲ್ಲಂಘನೆಯ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ ರಾಜಕೀಯ ಅಭಯ ನೀಡುವುದೇ ನಿಮ್ಮ ಪಾರದರ್ಶಕ ಆಡಳಿತವೇ?” ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಈ ಗಂಭೀರ ಬೆಳವಣಿಗೆಯ ಬಗ್ಗೆ ತಕ್ಷಣವೇ ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕು ಹಾಗೂ ಮಾನ್ಯ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವ ಕಳಂಕಿತ ಸಚಿವ ನಾಗೇಂದ್ರ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕಿತ್ತೊಗೆಯಬೇಕು ಎಂದು ಆರ್. ಅಶೋಕ್ ಪ್ರಬಲವಾಗಿ ಒತ್ತಾಯಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
