ಕೊಪ್ಪಳ, ಫೆಬ್ರವರಿ 16: ಗ್ರಾಮ ಪಂಚಾಯತ್ ಡಿ ಗ್ರೂಪ್ ನೌಕರ ನೇಣುಬಿಗಿದುಕೊಂಡು ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ಕೊಪ್ಪಳ (Koppal) ಜಿಲ್ಲೆಯ ಕುಷ್ಟಗಿ ತಾಲೂಕಿನ ಜಮಲಾಪೂರ ಗ್ರಾಮದಲ್ಲಿ ನಡೆದಿದೆ. ರಮೇಶ್ ದಂಡಿನ (35) ಆತ್ಮಹತ್ಯೆ ಮಾಡಿರುವ ನೌಕರ. ಇಂದು ನಸುಕಿನ ಜಾವ ನೇಣುಬಿಗಿದುಕೊಂಡು ಗ್ರಾಮ ಪಂಚಾಯತ್ನಲ್ಲೇ ಸಾವಿಗೀಡಾಗಿದ್ದಾರೆ. ಸದ್ಯ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ
ರಮೇಶ್ ವೈಯಕ್ತಿಕ ಕಾರಣದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆಸ್ತಿ ವಿಚಾರಕ್ಕೆ ಕಳೆದ ಕೆಲದಿನಗಳಿಂದ ಸಹೋದರಿಯರು ಗಲಾಟೆ ಮಾಡುತ್ತಿದ್ದರಂತೆ. ಹೀಗಾಗಿ ಆಸ್ತಿ ವಿಚಾರವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನಿನ್ನೆ ಇದೇ ವಿಚಾರಕ್ಕೆ ಗಲಾಟೆಯಾಗಿದ್ದು, ಇಂದು ನಸುಕಿನ ಜಾವ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ರಮೇಶ್ ಆತ್ಮಹತ್ಯೆ ಹಿನ್ನೆಲೆ ಅವರ ಸಹೋದರಿ ಸೇರಿ ಐದಕ್ಕೂ ಹೆಚ್ಚು ಜನರ ವಿರುದ್ಧ ಕುಷ್ಟಗಿ ತಾಲೂಕಿನ ತಾವರಗೇರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಸ್ವಸ್ಥ ನಾಲ್ವರು ಗುತ್ತಿಗೆ ನೌಕರರಿಗೆ ಖಾಸಗಿ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ
ಮತ್ತೊಂದು ಪ್ರಕರಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ನಾಲ್ವರು ಗುತ್ತಿಗೆ ನೌಕರರಿಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ. ಡಿಹೆಚ್ಒ ಮಂಜುನಾಥ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಇದನ್ನೂ ಓದಿ: ಬೀದರ್ ಬ್ರಿಮ್ಸ್ ಆಸ್ಪತ್ರೆಗೇ ತಗುಲಿದೆ ದೊಡ್ಡ ರೋಗ! ಹೆಚ್ಚಿದ ಭ್ರಷ್ಟಾಚಾರ, 4 ತಿಂಗಳಿಂದ ಗುತ್ತಿಗೆ ನೌಕರರಿಗಿಲ್ಲ ವೇತನ
ಹಳೇ ನೌಕರರನ್ನೇ ಮುಂದುವರಿಸುವುದಾಗಿ ಡಿಹೆಚ್ಒ ಭರವಸೆ ನೀಡಿದ್ದು, ಈ ವೇಳೆ ದಲಿತ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿದ್ದು, ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಬಳಿಕ ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಘಟನೆ ಹಿನ್ನೆಲೆ
ಜಮಖಂಡಿಯ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸರ ಮಾಡುತ್ತಿದ್ದ ಗುತ್ತಿಗೆ ನೌಕರರ ಕೆಲಸ ತೆಗೆಯಲು ಮುಂದಾಗಿದ್ದ ವೇಳೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ಭಾನುವಾರ ನಡೆದಿದೆ. ಘಟನೆ ವೇಳೆ ನಾಲ್ವರ ಬಾಯಿಯೊಳಗೆ ಪೆಟ್ರೋಲ್ ಹೋಗಿದ್ದರಿಂದ ಅಸ್ವಸ್ಥಗೊಂಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 10:33 pm, Mon, 16 February 26
