IPL 2026: ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಪರಾಗ್ ‘ವೇಪಿಂಗ್’ (E-Cigarette) ಸೇದುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರ ಬೆನ್ನಲ್ಲೇ ಐಪಿಎಲ್ ನಿಯಮಗಳ ಬಗ್ಗೆ ಪ್ರಶ್ನೆಗಳೆದ್ದಿವೆ.
ಏಪ್ರಿಲ್ 28ರಂದು ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಿಯಾನ್ ಪರಾಗ್ 16 ಎಸೆತಗಳಲ್ಲಿ 29 ರನ್ ಗಳಿಸಿ ಔಟಾದರು. ಅವರು ಪೆವಿಲಿಯನ್‌ಗೆ ಮರಳಿದ ನಂತರ, ಎರಡನೇ ಇನಿಂಗ್ಸ್‌ನ 16ನೇ ಓವರ್ ನಡೆಯುತ್ತಿದ್ದಾಗ ಬ್ರಾಡ್‌ಕಾಸ್ಟ್ ಕ್ಯಾಮೆರಾ ಡ್ರೆಸ್ಸಿಂಗ್ ರೂಮ್‌ನತ್ತ ತಿರುಗಿತು. ಈ ವೇಳೆ ಪರಾಗ್ ಎಲೆಕ್ಟ್ರಾನಿಕ್ ಸಿಗರೇಟ್ ಅಥವಾ ವೇಪ್ ಬಳಸುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಈ ದೃಶ್ಯದ ತುಣುಕುಗಳು ಇದೀಗ ವೈರಲ್ ಆಗಿವೆ.
ನಿಯಮಗಳ ಉಲ್ಲಂಘನೆ:
ರಿಯಾನ್ ಪರಾಗ್ ಅವರ ಈ ನಡೆಯು ಹಲವು ಕಾನೂನು ಮತ್ತು ಕ್ರೀಡಾ ನಿಯಮಗಳ ಉಲ್ಲಂಘನೆ ಎನ್ನಬಹುದು. ಏಕೆಂದರೆ ಭಾರತದಲ್ಲಿ ಇ-ಸಿಗರೇಟ್ ಬಳಕೆಯನ್ನು ನಿಷೇಧಿಸಲಾಗಿದೆ. ಅಲ್ಲದೆ ಇದು ಬಿಸಿಸಿಐನ ಶಿಷ್ಟಾಚಾರದ ಉಲ್ಲಂಘನೆ ಕೂಡ ಹೌದು. ಹಾಗಿದ್ರೆ ರಿಯಾನ್ ಪರಾಗ್ ಉಲ್ಲಂಘಿಸಿರುವ ನಿಯಮಗಳಾವುವು ಎಂದು ನೋಡುವುದಾದರೆ…
- ಭಾರತೀಯ ಕಾನೂನು: ಭಾರತದಲ್ಲಿ 2019 ರಿಂದಲೇ ಇ-ಸಿಗರೇಟ್ ಮತ್ತು ವೇಪ್‌ಗಳ ಬಳಕೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
- ಬಿಸಿಸಿಐ ಶಿಷ್ಟಾಚಾರ: ಕ್ರೀಡಾಂಗಣದ ಆವರಣದಲ್ಲಿ ಮತ್ತು ವಿಶೇಷವಾಗಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಧೂಮಪಾನ ಮಾಡುವುದು ಕಟ್ಟುನಿಟ್ಟಾದ ಶಿಸ್ತು ಉಲ್ಲಂಘನೆಯಾಗಿದೆ.
- ಯುವ ಪೀಳಿಗೆಗೆ ತಪ್ಪು ಸಂದೇಶ: ಲಕ್ಷಾಂತರ ಯುವ ಅಭಿಮಾನಿಗಳು ವೀಕ್ಷಿಸುವ ಐಪಿಎಲ್‌ನಲ್ಲಿ ತಂಡದ ನಾಯಕನೇ ಇಂತಹ ಕೆಲಸ ಮಾಡುವುದು ಬೇಜವಾಬ್ದಾರಿತನ. ಐಪಿಎಲ್ ವೇಳೆ ಆಟಗಾರರು ತಪ್ಪು ಸಂದೇಶ ನೀಡುವಂತಹ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗಬಾರದೆಂಬ ನಿಯಮವಿದೆ.
ಪರಾಗ್ ಮೇಲೆ ಶಿಸ್ತು ಕ್ರಮ?
ಈಗಾಗಲೇ ಕಳಪೆ ಫಾರ್ಮ್‌ನಿಂದಾಗಿ ಟೀಕೆಗೆ ಗುರಿಯಾಗಿರುವ ರಿಯಾನ್ ಪರಾಗ್ ಅವರಿಗೆ ಈ ಘಟನೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಐಪಿಎಲ್ ಆಡಳಿತ ಮಂಡಳಿ ಅಥವಾ ಬಿಸಿಸಿಐ ಈ ಬಗ್ಗೆ ಅಧಿಕೃತ ತನಿಖೆ ನಡೆಸಿ ದಂಡ ಅಥವಾ ಪಂದ್ಯದಿಂದ ನಿಷೇಧ ಹೇರುವ ಸಾಧ್ಯತೆಯಿದೆ.
ಸಂಜು ಸ್ಯಾಮ್ಸನ್ ಬದಲಿಗೆ ನಾಯಕತ್ವ ವಹಿಸಿಕೊಂಡಿದ್ದ ಪರಾಗ್, ಈ ಸೀಸನ್‌ನಲ್ಲಿ ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದಾರೆ. ತಂಡ ಪಂದ್ಯವನ್ನು ಗೆದ್ದಿದ್ದರೂ, ನಾಯಕನ ಈ ವರ್ತನೆಯು ರಾಜಸ್ಥಾನ್ ರಾಯಲ್ಸ್ ಮ್ಯಾನೇಜ್‌ಮೆಂಟ್‌ಗೆ ತಲೆನೋವಾಗಿ ಪರಿಣಮಿಸಿದೆ.
ಐಪಿಎಲ್ ನೀತಿ ಸಂಹಿತೆ ಮತ್ತು ಬಿಸಿಸಿಐನ ಆರೋಗ್ಯ ಮತ್ತು ಸುರಕ್ಷತಾ ಶಿಷ್ಟಾಚಾರಗಳ ಅಡಿಯಲ್ಲಿ ಪರಾಗ್ ಅವರ ಮೇಲೆ ಈ ಕೆಳಗಿನ ಕ್ರಮಗಳನ್ನು ಜರುಗಿಸಬಹುದು:
- ದಂಡ: ಪಂದ್ಯದ ಶುಲ್ಕದಲ್ಲಿ ಶೇಕಡಾವಾರು ಕಡಿತ ಅಥವಾ ಭಾರಿ ಮೊತ್ತದ ದಂಡ ವಿಧಿಸಬಹುದು. ಉದಾಹರಣೆಗೆ, ಈ ಹಿಂದಿನ ಕೆಲವು ಶಿಸ್ತು ಉಲ್ಲಂಘನೆಗಳಿಗೆ ಆಟಗಾರರಿಗೆ ಲಕ್ಷಾಂತರ ರೂಪಾಯಿ ದಂಡ ವಿಧಿಸಲಾಗಿದೆ.
- ಪಂದ್ಯದಿಂದ ನಿಷೇಧ: ಇದು ಗಂಭೀರ ಸ್ವರೂಪದ ಶಿಸ್ತು ಉಲ್ಲಂಘನೆ ಎಂದು ಪರಿಗಣಿಸಲ್ಪಟ್ಟರೆ, ಪರಾಗ್ ಅವರನ್ನು 1 ರಿಂದ 2 ಪಂದ್ಯಗಳ ಕಾಲ ನಿಷೇಧಿಸುವ ಸಾಧ್ಯತೆಯೂ ಇದೆ.
- ಅಧಿಕೃತ ಎಚ್ಚರಿಕೆ: ಮೊದಲ ಬಾರಿಯ ಅಪರಾಧವೆಂದು ಪರಿಗಣಿಸಿ ಬಿಸಿಸಿಐ ಅವರಿಗೆ ಅಧಿಕೃತ ಎಚ್ಚರಿಕೆ ಪತ್ರವನ್ನು ನೀಡಬಹುದು.
- ನಾಯಕತ್ವದ ಮೇಲೆ ಪ್ರಭಾವ: ತಂಡದ ನಾಯಕನಾಗಿ ಇಂತಹ ವರ್ತನೆ ತೋರಿರುವುದರಿಂದ, ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ತನ್ನ ಬ್ರ್ಯಾಂಡ್ ಮೌಲ್ಯ ಕಾಪಾಡಲು ಆಂತರಿಕವಾಗಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬಹುದು.
ಭಾರತೀಯ ಕಾನೂನಿನ ಅಡಿಯಲ್ಲಿ ಕ್ರಮಗಳು:
ಭಾರತದಲ್ಲಿ ಇ-ಸಿಗರೇಟ್ ಅಥವಾ ವೇಪ್‌ಗಳನ್ನು 2019ರ ‘ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ’ (PECA) ಅಡಿಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರ ಅನ್ವಯ:
- ಜೈಲು ಶಿಕ್ಷೆ: ಮೊದಲ ಬಾರಿಯ ಅಪರಾಧಕ್ಕೆ 1 ವರ್ಷದವರೆಗೆ ಜೈಲು ಶಿಕ್ಷೆ ಅನುಭವಿಸುವ ಸಾಧ್ಯತೆಯಿದೆ.
- ದಂಡ: ಕಾನೂನು ಉಲ್ಲಂಘನೆಗಾಗಿ ₹1 ಲಕ್ಷದವರೆಗೆ ದಂಡ ವಿಧಿಸಬಹುದು.
- ಮರುಕಳಿಸಿದರೆ: ಎರಡನೇ ಬಾರಿ ಅಥವಾ ಪದೇ ಪದೇ ಇಂತಹ ಕೃತ್ಯವೆಸಗಿದರೆ 3 ವರ್ಷಗಳವರೆಗೆ ಜೈಲು ಮತ್ತು ₹5 ಲಕ್ಷದವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ಪ್ರಸ್ತುತ ಬಿಸಿಸಿಐ ಈ ದೃಶ್ಯಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಹೇಳಿಕೆ ಹೊರಬೀಳುವ ನಿರೀಕ್ಷೆಯಿದೆ.
