ಪಕ್ಷಾತೀತವಾಗಿ ವಿದ್ಯಾರ್ಥಿನಿಯ ಕನಸು ನನಸು ಮಾಡಿದ ಕಾಂಗ್ರೆಸ್, ಬಿಜೆಪಿ ನಾಯಕರು – Kannada News | BJP And Congress Leaders sallow the dasarahalli Student Indian Council of Agricultural Research admission

ಬೆಂಗಳೂರು, (ಆಗಸ್ಟ್ 17): ಒಂದು ಕಡೆ ಉನ್ನತ ಶಿಕ್ಷಣದ ಕನಸು. ಮತ್ತೊಂದು ಕಡೆ ಆರು ಲಕ್ಷ ರೂಪಾಯಿಗಳ ಭಾರ. ಆತಂಕದಿಂದಲ್ಲೇ ತಂದೆ-ತಾಯಿಯೊಂದಿಗೆ ದಾಸರಹಳ್ಳಿ ಕ್ಷೇತ್ರದಿಂದ ಬಂದಿದ್ದ ಒಬ್ಬ ಹೆಣ್ಣುಮಗಳ ಕನಸನ್ನು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಪಕ್ಷಾತೀತವಾಗಿ ನನಸಾಗಿಸಿದ್ದಾರೆ. ಹೌದು…. ವಿದ್ಯಾರ್ಥಿನಿಯ Indian Council of Agricultural Research (ICAR) ಪ್ರವೇಶಾತಿ ಸಮಸ್ಯೆಯನ್ನು ಸಚಿವ ಬಾಲಕೃಷ್ಣ, ಸಿಎಂ ಡಿಕೆ ಶಿವಕುಮಾರ್, ತೇಜಸ್ವಿ ಸೂರ್ಯ ಹಾಗೂ ವಿ ಸೋಮಣ್ಣ ಸೇರಿಕೊಂಡು ಬಗೆಹರಿಸಿದ್ದಾರೆ. ಹಾಗಾಗಿ ಇದು ಕೇವಲ ಒಂದು ಭೇಟಿ ಅಲ್ಲ. ಒಂದು ಭೇಟಿಯ ಹಿಂದೆ ಒಂದು ಕುಟುಂಬದ ಕನಸಿತ್ತು. ಆ ಕನಸಿನ ಹಿಂದೆ ಒಬ್ಬ ತಂದೆಯ ಪರಿಶ್ರಮವಿತ್ತು. ಆ ಕನಸಿನ ಮುಂದೆ ಅಡ್ಡಿಯಾಗಿದ್ದ ಸಮಸ್ಯೆಯ ನಡುವೆ,ಮಾನವೀಯತೆ ತೋರಿ ಆ ಹೆಣ್ಣು ಮಗಳ ಬೆನ್ನಿಗೆ ನಿಂತಿದ್ದು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು.

ಒಂದು ಕುಟುಂಬದ ಕನಸು ಮಾಡಿದ ಕಾಂಗ್ರೆಸ್ ಬಿಜೆಪಿ ನಾಯಕರು

ಭೀಮನ ಅಮಾವಾಸ್ಯೆಯ ಪೂಜೆಯನ್ನು ಮುಗಿಸಿ ಬೆಂಗಳೂರಿನ ನಿವಾಸಕ್ಕೆ ಸಚಿವ ಬಾಲಕೃಷ್ಣ ಅವರು ಆಗಮಿಸಿದ್ದರು. ತಂದೆ-ತಾಯಿಯೊಂದಿಗೆ ದಾಸರಹಳ್ಳಿ ಕ್ಷೇತ್ರದಿಂದ ಬಂದಿದ್ದ ಒಬ್ಬ ಹೆಣ್ಣುಮಗಳ ಮುಖದಲ್ಲಿ ಆತಂಕ ಎದ್ದು ಕಾಣುತ್ತಿತ್ತು. ಅದನ್ನು ಗಮನಿಸಿದ ಸಚಿವರು , “ಏನಮ್ಮಾ, ನಿನ್ನ ಸಮಸ್ಯೆ ಏನು?” ಎಂದು ವಿಚಾರಿಸಿದರು. ಆಕೆ ಹೇಳಿದ ಸಮಸ್ಯೆ ಕೇಳಿದಾಗ, ಅದು ಕೇವಲ ಒಂದು ಪ್ರವೇಶಾತಿಯ ಸಮಸ್ಯೆಯಾಗಿರಲಿಲ್ಲ; ಒಂದು ಕುಟುಂಬದ ಭವಿಷ್ಯದ ಪ್ರಶ್ನೆಯಾಗಿತ್ತು.

Indian Council of Agricultural Research (ICAR) ವ್ಯಾಪ್ತಿಗೆ ಒಳಪಡುವ UHS ಬಾಗಲಕೋಟೆ ಕಾಲೇಜಿನಲ್ಲಿ ಪದವಿ ಪ್ರವೇಶ ಪಡೆಯಬೇಕಿದ್ದ ಆಕೆಗೆ, ಪೋರ್ಟಲ್‌ನಲ್ಲಿ ಭಾರತದಲ್ಲಿ ವಾಸಿಸುವ ದೃಢೀಕರಣ ಪತ್ರವನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಪರಿಣಾಮವಾಗಿ, ಸುಮಾರು 6 ಲಕ್ಷ ಪ್ರವೇಶ ಶುಲ್ಕ ಪಾವತಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿತ್ತು. ಕೂಡಲೇ ಹೆಣ್ಮಗಳ ಸಮಸ್ಯೆಯನ್ನು ಕೇಳಿ “ನೋಡೋಣ” ಎಂದು ಹೇಳಿ ಕಳುಹಿಸುವುದು ಸುಲಭವಾಗಿತ್ತು. ಆದರೆ ಸಚಿವ ಬಾಲಕೃಷ್ಣ ಅವರು ಹಾಗೆ ಮಾಡಲಿಲ್ಲ.ಇದು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗೆ ಸಂಬಂಧಿಸಿದ ವಿಚಾರ ಎಂಬುದನ್ನು ಅರಿತ ಅವರು, ತಮ್ಮ ಆಪ್ತ ಕಾರ್ಯದರ್ಶಿಗೆ ತಕ್ಷಣ ಸೂಚನೆ ನೀಡಿ, ಆ ಹೆಣ್ಣುಮಗಳು ಮತ್ತು ಅವರ ತಂದೆಯನ್ನು ತಮ್ಮ ಕಾರಿನಲ್ಲೇ ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ಗೆ ಕರೆದುಕೊಂಡು ಹೋದರು. ಮುಖ್ಯಮಂತ್ರಿಗಳ ಗಮನಕ್ಕೆ ವಿಷಯವನ್ನು ತಂದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದರು.

ಆದರೂ ಪ್ರಯತ್ನ ಅಲ್ಲಿಗೆ ನಿಲ್ಲಲಿಲ್ಲ. “ಸಮಸ್ಯೆ ಬಗೆಹರಿಯುವವರೆಗೂ ಪ್ರಯತ್ನ ನಿಲ್ಲಬಾರದು” ಎಂಬ ಮನೋಭಾವದಿಂದ ಸಚಿವರು ಸಂಸದ ತೇಜಸ್ವಿ ಸೂರ್ಯ ಅವರಿಗೆ ಕರೆ ಮಾಡಿ ವಿಷಯವನ್ನು ವಿವರಿಸಿದರು. ದೆಹಲಿಯ ತಮ್ಮ ಕಚೇರಿಯ ಸಾಯಿ ಬಾಲಾಜಿ ಅವರಿಗೆ ಅಗತ್ಯ ಕ್ರಮಕ್ಕಾಗಿ ಆ ಹೆಣ್ಣುಮಗಳನ್ನು ದೆಹಲಿಗೆ ಕರೆಸಿಕೊಳ್ಳುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರು ಆಕೆಯ ತಂದೆಯ ವೃತ್ತಿಯನ್ನೂ ವಿಚಾರಿಸಿದರು. “ಆಟೋ ಓಡಿಸುತ್ತಾರೆ ಸರ್…”ಎಂಬ ಉತ್ತರ ಕೇಳಿದ ಕ್ಷಣದಲ್ಲಿ, ಆ ತಂದೆಯ ಹೋರಾಟದ ಹಿಂದಿರುವ ಮಗಳ ಭವಿಷ್ಯದ ಕನಸು ಸಚಿವರ ಮನಸ್ಸಿಗೆ ಇನ್ನಷ್ಟು ಹತ್ತಿರವಾಯಿತು.

ಮಗಳ ವಿದ್ಯಾಭ್ಯಾಸಕ್ಕಾಗಿ ದುಡಿಯುತ್ತಿರುವ ಒಬ್ಬ ತಂದೆ. ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ಹಂಬಲಿಸುತ್ತಿರುವ ಒಬ್ಬ ಮಗಳು. ಅವರ ಮುಂದಿದ್ದದ್ದು ಆರು ಲಕ್ಷ ರೂಪಾಯಿಗಳ ದೊಡ್ಡ ಅಡೆತಡೆ. ತಕ್ಷಣವೇ ಸಚಿವ ಬಾಲಕೃಷ್ಣ ಅವರು ಆ ಹೆಣ್ಣುಮಗಳು ಮತ್ತು ಅವರ ತಂದೆಗೆ ವಿಮಾನ ಟಿಕೆಟ್ ವ್ಯವಸ್ಥೆ ಮಾಡಿ, ದೆಹಲಿಯಲ್ಲಿ ವಸತಿ ಸೌಲಭ್ಯವನ್ನೂ ಕಲ್ಪಿಸಿದರು. ಯಾವುದೇ ವಿಳಂಬವಾಗದಂತೆ ಅವರನ್ನು ದೆಹಲಿಗೆ ಕಳುಹಿಸುವ ವ್ಯವಸ್ಥೆ ಮಾಡಿದರು.

ಮರುದಿನ ಬೆಳಿಗ್ಗೆಯೇ ಸಚಿವರು ಮತ್ತೆ ಆ ಹೆಣ್ಣುಮಗಳಿಗೆ ಕರೆ ಮಾಡಿ, ಸಂಬಂಧಪಟ್ಟವರ ಭೇಟಿ ಆಗಿದೆಯೇ? ಸಮಸ್ಯೆಯ ಬಗ್ಗೆ ಏನಾದರೂ ಪ್ರಗತಿ ಕಂಡಿದೆಯೇ? ಎಂದು ಖುದ್ದಾಗಿ ವಿಚಾರಿಸಿದರು. ಅಲ್ಲದೇ ಕೇಂದ್ರ ಸಚಿವ ಸೋಮಣ್ಣ ಅವರ ಗಮನಕ್ಕೂ ವಿಷಯವನ್ನು ತಂದರು. ಅಂತಿಮವಾಗಿ ತೇಜಸ್ವಿ ಸೂರ್ಯ ಹಾಗೂ ಸೋಮಣ್ಣ ಅವರ ಸಹಕಾರದೊಂದಿಗೆ, ಆ ಹೆಣ್ಣುಮಗಳ ಪ್ರವೇಶಾತಿಯ ಸಮಸ್ಯೆ ಬಗೆಹರಿಯಿತು. ಆಕೆಯ ಉನ್ನತ ಶಿಕ್ಷಣದ ಕನಸಿಗೆ ಮತ್ತೆ ದಾರಿ ತೆರೆದಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *