ಬೆಂಗಳೂರು, ಜೂನ್ 25: ಎನ್.ಸಿ.ಇ.ಆರ್.ಟಿ (NCERT) ಮತ್ತು ಸಿ.ಬಿ.ಎಸ್.ಇ (CBSE) ಪಠ್ಯಪುಸ್ತಕಗಳಲ್ಲಿ ಕೇಸರೀಕರಣ ಆರೋಪ ಕೇಳಿಬಂದಿದ್ದು, ಬಿಜೆಪಿ ಸರಕಾರವು ಮಕ್ಕಳ ಮನಸ್ಸಿನ ಮೇಲೆ ಸೈದ್ಧಾಂತಿಕ ವಿಚಾರಗಳನ್ನು ಹೇರಿಕೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಮಾಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಆರೋಪಿಸಿದ್ದರು. ಈ ವಿವಾದ ಸಂಬಂಧ ಈಗ ಸ್ವತಃ NCERT ಇಂದಲೇ ಸ್ಪಷ್ಟನೆ ಸಿಕ್ಕಿದೆ. ಪಠ್ಯಪುಸ್ತಕಕ್ಕೆ ಇಡಲಾದ ಹೆಸರು, ಕರ್ನಾಟಕದ ಪ್ರಾದೇಶಿಕ ಸೊಗಡನ್ನು ಕಡೆಗಣಿಸಿರುವ ಆರೋಪ ವಿಚಾರ ಸೇರಿ ಎಲ್ಲದಕ್ಕೂ ಉತ್ತರ ನೀಡಲಾಗಿದೆ.
ಕನ್ನಡ ಪಠ್ಯಪುಸ್ತಕಕ್ಕೆ ‘ಕೃಷ್ಣ’ ಎಂದು ಹೆಸರೇಕೆ?
6ನೇ ತರಗತಿ ಕನ್ನಡ R3 ಪಠ್ಯಪುಸ್ತಕಕ್ಕೆ ಇಡಲಾದ ಕೃಷ್ಣ ಎಂಬ ಹೆಸರು ದೇವರಿಗೆ ಸಂಬಂಧಿಸಿದ್ದಲ್ಲ. ಬದಲಾಗಿ ಕರ್ನಾಟಕದ ಪ್ರಮುಖ ನದಿಯಾದ ಕೃಷ್ಣಾ ನದಿಯ ಹೆಸರಾಗಿದೆ. ಎಲ್ಲಾ ಭಾಷಾ ಪಠ್ಯಪುಸ್ತಕಗಳಿಗೂ ಭಾರತದ ಪ್ರಮುಖ ನದಿಗಳ ಹೆಸರನ್ನೇ ಇಡಲಾಗಿದೆ. ಹಿಂದಿಗೆ ಗಂಗಾ, ಇಂಗ್ಲಿಷ್ಗೆ ಕಾವೇರಿ, ಉರ್ದುವಿಗೆ ಜಮುನಾ ಮತ್ತು ಕನ್ನಡಕ್ಕೆ ಕೃಷ್ಣ ಹೆಸರನ್ನು ಪಠ್ಯ ಪುಸ್ತಕಗಳಿಗೆ ಇಟ್ಟಿದ್ದೇವೆ ಎಂದು NCERT ತಿಳಿಸಿದೆ.
ಇದನ್ನೂ ಓದಿ: NCERT ಮತ್ತು CBSE ಪಠ್ಯದಲ್ಲಿ ಕೇಸರೀಕರಣ ವಿವಾದ; ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ
ಆಹಾರ ಸಂಬಂಧಿ ವಿವಾದಕ್ಕೆ ಉತ್ತರವೇನು?
6ನೇ ಅಧ್ಯಾಯ ‘Health is Wealth’ನಲ್ಲಿ ಸಮತೋಲನ ಆಹಾರ (Balanced Diet) ಕುರಿತು ಮಾತ್ರ ಪಾಠವಿದೆ. ಹೀಗಾಗಿ ಹಾಲು, ಹಸಿರು ಸೊಪ್ಪು, ತರಕಾರಿಗಳು, ಹಣ್ಣುಗಳು ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಉಲ್ಲೇಖಿಸಲಾಗಿದೆ. ಪುಟ 63ರಲ್ಲಿ ಸಸ್ಯಾಹಾರ ಹಾಗೂ ಮಾಂಸಾಹಾರ ಎರಡನ್ನೂ ಒಳಗೊಂಡ ಚಿತ್ರವಿದೆ. ಪಠ್ಯದಲ್ಲಿ ಸಸ್ಯಾಹಾರವನ್ನು ಸಮರ್ಥಿಸಿಲ್ಲ, ಮಾಂಸಾಹಾರವನ್ನು ವಿರೋಧಿಸಿಲ್ಲ. ವಿದ್ಯಾರ್ಥಿಗಳಿಗೆ ಆರೋಗ್ಯಕರ ಆಹಾರದ ಬಗ್ಗೆ ಅರಿವು ಮೂಡಿಸುವುದೇ ಅಧ್ಯಾಯದ ಉದ್ದೇಶ ಎಂದೂ ಎಂದು ಸ್ಪಷ್ಟಪಡಿಸಲಾಗಿದೆ.
ಅಲ್ಲದೆ ಪಠ್ಯಪುಸ್ತಕವು NEP 2020 ಮತ್ತು NCF-SE 2023ರ ಸ್ಥಳೀಯತೆ ಹಾಗೂ ಸಾಂಸ್ಕೃತಿಕ ಸಂಪರ್ಕದ ಉದ್ದೇಶಕ್ಕೆ ಅನುಗುಣವಾಗಿದೆ. NCERT ಗುಣಮಟ್ಟದ ಪಠ್ಯಪುಸ್ತಕಗಳನ್ನು ನೀಡಲು ಬದ್ಧವಾಗಿದ್ದು, ಶಿಕ್ಷಣ ತಜ್ಞರು ಹಾಗೂ ಸಾರ್ವಜನಿಕರಿಂದ ಬರುವ ರಚನಾತ್ಮಕ ಸಲಹೆಗಳನ್ನು ಸ್ವಾಗತಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 2:55 pm, Thu, 25 June 26
