ಬೆಂಗಳೂರು, ಫೆಬ್ರವರಿ 21: ಬೆಂಗಳೂರಿನ ಗೋರಿಪಾಳ್ಯದಲ್ಲಿರುವ ಇಂದಿರಾ ಕ್ಯಾಂಟೀನ್ ನಿರ್ವಹಣೆಯ ಕೊರತೆಯಿಂದ ಪಾಳು ಬಿದ್ದಿದೆ. ಬಡವರ ಅಕ್ಷಯ ಪಾತ್ರೆ ಎಂದೇ ಕರೆಯಲ್ಪಡುತ್ತಿದ್ದ ಈ ಕ್ಯಾಂಟೀನ್ ಪ್ರಸ್ತುತ ದಯನೀಯ ಸ್ಥಿತಿಯಲ್ಲಿದೆ. ಕಳೆದ ಎರಡು-ಮೂರು ತಿಂಗಳಿಂದ ಕ್ಯಾಂಟೀನ್ ಮುಚ್ಚಲ್ಪಟ್ಟಿದೆ. ಸ್ಥಳೀಯರ ಪ್ರಕಾರ, ಕ್ಯಾಂಟೀನ್ ಆವರಣವನ್ನು ಈಗ ಗಾಂಜಾ ಮತ್ತು ಇತರೆ ಅನೈತಿಕ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಸದ್ಯ ಸ್ಥಳೀಯರು ಆಕ್ರೋಶಗೊಂಡಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಧ್ವನಿ ಎತ್ತಿದ್ದಾರೆ. ಹಿಂದೆ ಬಡವರು ಇಲ್ಲಿ ನೆಮ್ಮದಿಯಿಂದ ಊಟ ಮಾಡುತ್ತಿದ್ದರು. ಆದರೆ ಈಗ ಕ್ಯಾಂಟೀನ್ ಸುತ್ತಮುತ್ತ ಕಸ ಮತ್ತು ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗಿದೆ. ಅಧಿಕಾರಿಗಳು, ಕಾರ್ಪೊರೇಟರ್‌ಗಳು ಈ ಬಗ್ಗೆ ಗಮನಹರಿಸಿ, ಕ್ಯಾಂಟೀನ್ ಅನ್ನು ಸ್ವಚ್ಛಗೊಳಿಸಿ, ಪುನಃ ತೆರೆಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು
