ಆಗ್ರಾ, ಜುಲೈ 05: ಉತ್ತರ ಪ್ರದೇಶದ ಆಗ್ರಾದಲ್ಲಿ ಭೀಕರ ಕೊಲೆಯೊಂದು ಜರುಗಿದೆ. ಪತಿ(Husband)ಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿ, ಆತನ ಶವವನ್ನು ಮನೆಯ ಸ್ನಾನಗೃಹದಲ್ಲೇ ಹೂತುಹಾಕಿ, ಅದರ ಮೇಲೆ ಕಾಂಕ್ರೀಟ್ ಹಾಕಿದ್ದ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡುವ ಮುನ್ನ ಆಕೆ ಪತಿಯ ಊಟದಲ್ಲಿ 15 ರಿಂದ 20 ನಿದ್ರೆ ಮಾತ್ರೆಗಳನ್ನು ಬೆರೆಸಿ ಕೊಟ್ಟಿದ್ದಳು ಎಂಬ ಆಘಾತಕಾರಿ ಸತ್ಯ ತನಿಖೆಯಿಂದ ಬಯಲಾಗಿದೆ. ಮೃತರನ್ನು ಸುರೇಂದ್ರ ಶರ್ಮಾ ಎಂದು ಗುರುತಿಸಲಾಗಿದ್ದು, ಆರೋಪಿ ಪತ್ನಿಯನ್ನು ರೂಬಿ ಶರ್ಮಾ ಎಂದು ಗುರುತಿಸಲಾಗಿದೆ.
45 ದಿನಗಳ ಕಾಲ ನಾಪತ್ತೆಯಾಗಿದ್ದ ಪತಿ
ಸುರೇಂದ್ರ ಶರ್ಮಾ ಅವರು ಸುಮಾರು 45 ದಿನಗಳಿಂದ ಕಾಣೆಯಾಗಿದ್ದರು. ಮೇ 26 ರಂದು ಪತ್ನಿ ರೂಬಿ ಮತ್ತು ಆಕೆಯ ಸೋದರ ಮಾವ ಅನಿಲ್ ಸೇರಿ, ಮೇ 18 ರಿಂದ ಸುರೇಂದ್ರ ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ನೆರೆಹೊರೆಯವರು ಹಾಗೂ ಸಂಬಂಧಿಕರು ಸುರೇಂದ್ರ ಎಲ್ಲಿದ್ದಾರೆ ಎಂದು ಕೇಳಿದಾಗಲೆಲ್ಲಾ ರೂಬಿ, ಅವರು ಕೆಲಸದ ಮೇಲೆ ಹೊರಗೆ ಹೋಗಿದ್ದಾರೆ, ಶೀಘ್ರದಲ್ಲೇ ಬರುತ್ತಾರೆ ಎಂದು ನಂಬಿಸುತ್ತಿದ್ದಳು. ಅಲ್ಲದೆ, ಪತಿ ಕಾಣೆಯಾಗಿದ್ದಕ್ಕೆ ತನಗೆ ತುಂಬ ಬೇಸರವಾಗಿದೆ ಎಂದು ತೋರಿಸಿಕೊಳ್ಳಲು ಜನರ ಮುಂದೆ ಕಣ್ಣೀರು ಹಾಕುತ್ತಾ ನಾಟಕವಾಡುತ್ತಿದ್ದಳು.
ಕಥೆ ಕಟ್ಟಿ ಸಿಕ್ಕಿಬಿದ್ದ ಕಿರಾತಕಿ
ಪೊಲೀಸ್ ತನಿಖೆ ತೀವ್ರಗೊಂಡಾಗ ರೂಬಿ ನೀಡುತ್ತಿದ್ದ ಹೇಳಿಕೆಗಳಲ್ಲಿ ಹಲವು ಗೊಂದಲಗಳು ಮತ್ತು ಅಸಮಂಜಸತೆಗಳು ಕಂಡುಬಂದವು. ಸೋದರ ಮಾವ ಅನಿಲ್ ಕೂಡ ರೂಬಿ ಮೇಲೆಯೇ ಅನುಮಾನ ವ್ಯಕ್ತಪಡಿಸಿದರು. ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಕಠಿಣವಾಗಿ ವಿಚಾರಣೆ ನಡೆಸಿದಾಗ, ಆಕೆ ತನ್ನ ಪಾಪಕೃತ್ಯವನ್ನು ಒಪ್ಪಿಕೊಂಡಿದ್ದಾಳೆ.
ಆಕೆಯ ಪ್ರಕಾರ, ಪತಿ ಸುರೇಂದ್ರ ಭರತ್‌ಪುರದಲ್ಲಿ ಸಂಬಂಧಿಕರೊಂದಿಗೆ ಕುಡಿದು ಜಗಳವಾಡಿದ್ದರು. ಆ ಜಗಳದ ನಂತರ ನ್ಯಾಯಾಲಯ ಮತ್ತು ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂಬ ಭಯ ಸುರೇಂದ್ರಗೆ ಇತ್ತು ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ.
ಮತ್ತಷ್ಟು ಓದಿ:
ರೋಗಿಗಳ ಜೀವದ ಜೊತೆ ಚೆಲ್ಲಾಟ: ಪತಿ ಸರಕಾರಿ ವೈದ್ಯ, ಆದರೆ ಚಿಕಿತ್ಸೆ ನೀಡೋದು ಪತ್ನಿ!
ಯೋಜನೆಯ ಪ್ರಕಾರ ರೂಬಿ ಮೊದಲು ಸುರೇಂದ್ರನ ಊಟದಲ್ಲಿ 20 ನಿದ್ರೆ ಮಾತ್ರೆಗಳನ್ನು ಬೆರೆಸಿದ್ದಳು. ಸುರೇಂದ್ರ ಗಾಢ ನಿದ್ರೆಗೆ ಜಾರಿದ ತಕ್ಷಣ ಆಕೆಯೇ ಆತನನ್ನು ಕೊಲೆ ಮಾಡಿದ್ದಾಳೆ. ನಂತರ ಆತನ ಶವವನ್ನು ಮಣ್ಣಿನ ನೆಲವಿದ್ದ ಸ್ನಾನಗೃಹಕ್ಕೆ ಎಳೆದುಕೊಂಡು ಹೋಗಿ ಹೂತುಹಾಕಿದ್ದಾಳೆ. ಮರುದಿನವೇ ಕಾರ್ಮಿಕರನ್ನು ಕರೆಸಿ ಸ್ನಾನಗೃಹಕ್ಕೆ ಹೆಚ್ಚುವರಿ ಮಣ್ಣು ತರಿಸಿ ಶವದ ಮೇಲೆ ಹಾಕಿಸಿದ್ದಾಳೆ. ದೇಹ ಸಂಪೂರ್ಣವಾಗಿ ಮುಚ್ಚಿದ ನಂತರ, ಅದರ ಮೇಲೆ ಮೇಸ್ತ್ರಿಯನ್ನು ಕರೆಸಿ ಕಾಂಕ್ರೀಟ್ ನೆಲವನ್ನು ಹಾಕಿಸಿದ್ದಾಳೆ.
ಕೊಲೆಯಾದ ಒಂದೇ ದಿನದಲ್ಲಿ ಸ್ನಾನಗೃಹಕ್ಕೆ ಕಾಂಕ್ರೀಟ್ ಹಾಕಿಸಿದ್ದರಿಂದ ಸಂಬಂಧಿಕರಿಗಾಗಲಿ ಅಥವಾ ನೆರೆಹೊರೆಯವರಿಗಾಗಲಿ ಯಾವುದೇ ರೀತಿಯ ದುರ್ವಾಸನೆ ಬರಲಿಲ್ಲ.
ನೆಲ ಒಡೆದು ಶವ ಹೊರತೆಗೆದ ಪೊಲೀಸರು
ಸುಮಾರು 45 ದಿನಗಳ ನಿರಂತರ ತನಿಖೆಯ ನಂತರ ಪೊಲೀಸರು ಈ ಕರಾಳ ರಹಸ್ಯವನ್ನು ಭೇದಿಸಿದ್ದಾರೆ. ಮಣ್ಣಿನಲ್ಲಿ ಹೂತಿದ್ದ ಶವವನ್ನು ಹೊರತೆಗೆಯಲು ಪೊಲೀಸರು ಸ್ನಾನಗೃಹದ ಕಾಂಕ್ರೀಟ್ ನೆಲವನ್ನು ಒಡೆದು ಹಾಕಬೇಕಾಯಿತು. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಭೀಕರ ಅಪರಾಧದಲ್ಲಿ ರೂಬಿಗೆ ಬೇರೆ ಯಾರಾದರೂ ಸಹಾಯ ಮಾಡಿದ್ದಾರೆಯೇ ಮತ್ತು ಈ ಕೊಲೆಯ ಹಿಂದೆ ಬೇರೆ ಯಾವುದಾದರೂ ದೊಡ್ಡ ಕಾರಣವಿದೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
