ಇನ್ನೇನು ತಮಿಳುನಾಡು ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದೆ. ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ಹಾಗೂ ನಟ ದಳಪತಿ ವಿಜಯ್ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ, ಈ ರಾಜಕೀಯ ಅಬ್ಬರದ ನಡುವೆ ವಿಜಯ್ (Thalapathy Vijay) ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ತಮ್ಮಿಂದ ದೂರವಾಗಿರುವ ಪತ್ನಿ ಸಂಗೀತಾ (Sangeeta Sornalingam) ಅವರ ಫೋಟೋ ಕಂಡು ವಿಜಯ್ ನೀಡಿದ ಪ್ರತಿಕ್ರಿಯೆ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಆ ಕುರಿತ ಪೂರ್ಣ ವಿವರ ಇಲ್ಲಿದೆ.
ಚುನಾವಣಾ ಪ್ರಚಾರದ ನಡುವೆ ಈ ಘಟನೆ ನಡೆದಿದೆ. ರ‍್ಯಾಲಿ ವೇಳೆ ಅಭಿಮಾನಿಯೊಬ್ಬ ವಿಜಯ್ ಅವರ ವಾಹನದ ಬಳಿ ಫ್ರೇಮ್ ಮಾಡಿದ ಫೋಟೋವೊಂದನ್ನು ಹಿಡಿದು ನಿಂತಿದ್ದನು. ಆ ಫೋಟೋದಲ್ಲಿ ದಿವಂಗತ ನಟ-ರಾಜಕಾರಣಿ ವಿಜಯಕಾಂತ್ ಅವರು ವಿಜಯ್ ಮತ್ತು ವಧುವಿನ ಅಲಂಕಾರದಲ್ಲಿದ್ದ ಸಂಗೀತಾ ಅವರ ಕೈ ಹಿಡಿದುಕೊಂಡಿರುವ ಚಿತ್ರವಿತ್ತು.
ಅನೇಕ ಅಭಿಮಾನಿಗಳು ಬೇರೆ ಬೇರೆ ಫೋಟೋಗಳನ್ನು ಹಿಡಿದಿದ್ದರೂ, ವಿಜಯ್ ಕಣ್ಣು ಬಿದ್ದಿದ್ದು ಮಾತ್ರ ಸಂಗೀತಾ ಅವರಿದ್ದ ಆ ಫೋಟೋದ ಮೇಲೆ! ಕೂಡಲೇ ತಮ್ಮ ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಿ, ಆ ಫೋಟೋವನ್ನು ತಮ್ಮ ಬಳಿ ತರಿಸಿಕೊಂಡರು. ಫೋಟೋವನ್ನು ಕೈಗೆತ್ತಿಕೊಂಡ ವಿಜಯ್, ಅದನ್ನು ಎಲ್ಲರಿಗೂ ತೋರಿಸಿದರು. ಆದರೆ ಆ ಚಿತ್ರವನ್ನು ನೋಡುವಾಗ ಅವರ ಮುಖದಲ್ಲಿ ಒಂದು ಕ್ಷಣ ಭಾವುಕತೆ ಮತ್ತು ಹಳೆಯ ನೆನಪುಗಳು ಮೇಳೈಸಿದಂತೆ ಕಂಡಿತು.
Anna ❤😭 pic.twitter.com/vDKWN3pAS1
— Prasanna OG Vote For TVK (@OGprasanna) April 14, 2026
ಈ ಕ್ಷಣದ ಬಗ್ಗೆ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ. ‘ವಿಜಯ್ ಅವರು ಸಂಗೀತಾ ಮೇಲಿನ ಪ್ರೀತಿಯಿಂದ ಆ ಫೋಟೋ ತರಿಸಿಕೊಂಡರಾ ಅಥವಾ ತಮ್ಮ ಗುರು ವಿಜಯಕಾಂತ್ ಅವರ ಮೇಲಿನ ಗೌರವದಿಂದ ಆ ರೀತಿ ಮಾಡಿದ್ದಾರಾ’ ಎಂಬ ಬಗ್ಗೆ ಅಭಿಮಾನಿಗಳು ತಮ್ಮ ಅನಿಸಿಕೆ ತಿಳಿಸುತ್ತಿದ್ದಾರೆ. ಒಟ್ಟಿನಲ್ಲಿ ಅವರು ಪತ್ನಿಯ ಫೋಟೋ ಕಂಡು ಪ್ರತಿಕ್ರಿಯಿಸಿದ ರೀತಿ ಎಲ್ಲರ ಗಮನ ಸೆಳೆದಿದೆ.
ಇದನ್ನೂ ಓದಿ: ಚುನಾವಣೆ ಹತ್ತಿರ ಆದಾಗಲೇ ಡಿವೋರ್ಸ್ ವಿಷಯ ಬಹಿರಂಗ ಮಾಡಿದ್ದಕ್ಕೆ ದಳಪತಿ ವಿಜಯ್ ಗರಂ
ಫೆಬ್ರವರಿಯಲ್ಲಿ ಸಂಗೀತಾ ಅವರು ಚೆನ್ನೈನ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹೊರಬಿತ್ತು. ಈ ಅರ್ಜಿಯಲ್ಲಿ ಸಂಗೀತಾ ಅವರು ವಿಜಯ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವಿಜಯ್ ಅವರು ನಟಿಯೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಸಂಗೀತಾ ಆರೋಪಿಸಿದ್ದಾರೆ. ಆ ಬಳಿಕ ವಿಜಯ್ ಮತ್ತು ತ್ರಿಷಾ ಕೃಷ್ಣನ್ ಅವರು ಮದುವೆಯೊಂದರಲ್ಲಿ ಒಂದೇ ರೀತಿಯ ಉಡುಪು ಧರಿಸಿ ಕಾಣಿಸಿಕೊಂಡಿದ್ದು ಈ ವದಂತಿಗಳಿಗೆ ಮತ್ತಷ್ಟು ತುಪ್ಪ ಸುರಿದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
