ಅಭಿಮಾನಿಗಳಿಂದ ನಾದಬ್ರಹ್ಮ ಎಂದು ಕರೆಸಿಕೊಳ್ಳುವ ಸಂಗೀತ ನಿರ್ದೇಶಕ, ಗೀತ ಸಾಹಿತಿ ಹಂಸಲೇಖ (Hamsalekha) ಅವರು ಕನ್ನಡ ಚಿತ್ರರಂಗದಲ್ಲಿ ಅರ್ಧ ಶತಮಾನದಿಂದಲೂ ಸಂಗೀತ ಕೃಷಿಯಲ್ಲಿದ್ದಾರೆ. ಸಾವಿರಾರು ಅತ್ಯದ್ಭುತ ಹಾಡುಗಳನ್ನು ಹಂಸಲೇಖ ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ದೊಡ್ಡ ಮಟ್ಟದ ಅಭಿಮಾನಿಗಳ ಪ್ರೀತಿ, ಗೌರವ, ವಿಶ್ವಾಸಗಳನ್ನು ಗಳಿಸಿರುವ ಹಂಸಲೇಖ ಅವರಿಗೆ ಪದ್ಮ ಪ್ರಶಸ್ತಿ ಧಕ್ಕಿಲ್ಲ. ಅವರ ಸಮಕಾಲೀನ ಮತ್ತು ಅವರಿಗಿಂತಲೂ ಕಿರಿಯರಾದ ಕೆಲವು ಸಂಗೀತ ನಿರ್ದೇಶಕರಿಗೆ, ಗೀತ ಸಾಹಿತಿಗಳಿಗೆ ಈಗಾಗಲೇ ಪದ್ಮ ಪ್ರಶಸ್ತಿಗಳು ದೊರೆತಿವೆ. ಇದೀಗ ಹಂಸಲೇಖ ಅವರಿಗೆ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಬೇಕೆಂದು ಅಭಿಯಾನ ಆರಂಭಿಸಲಾಗಿದ್ದು, ಈ ಅಭಿಯಾನ ಆರಂಭಿಸಿರುವುದು ಕನ್ನಡದ ನಟ ಪ್ರೇಮ್.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ನೆನಪಿರಲಿ ಪ್ರೇಮ್, ‘ನಾದಬ್ರಹ್ಮ ಹಂಸಲೇಖ ಅವರಿಗೆ ಪದ್ಮ ಪುರಸ್ಕಾರ ಅಥವಾ ಜ್ಞಾನಪೀಠ ಪ್ರಶಸ್ತಿ ಸಲ್ಲಬೇಕು ಎಂಬುದರ ಕುರಿತು ಅಭಿಯಾನ ಶುರು ಮಾಡಿದ್ದೇನೆ. ಹಾಗಾಗಿ ಕನ್ನಡ ಚಿತ್ರರಂಗ, ಸಾಹಿತ್ಯಗಳು, ಕನ್ನಡ ಚಿತ್ರಪ್ರೇಮಿಗಳು, ಮಾಧ್ಯಮದವರಿಗೂ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಭಾರತ ಕೇಂದ್ರ ಸರ್ಕಾರಕ್ಕೆ ಮನವಿ. 300ಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಹಿತ್ಯ ಹಾಗೂ ಸಂಗೀತ ಕೊಟ್ಟಂತಹ ಏಕೈಕ ಕನ್ನಡಿಗ ನಮ್ಮ ಕನ್ನಡ ಸಿನಿಮಾ ಹಾಗೂ ಸಾಹಿತ್ಯ ಲೋಕದ ಹೆಮ್ಮೆಗೆ ಸಲ್ಲಲೇಬೇಕಾದ ಗೌರವ.
ಈ ಅಭಿಯಾನಕ್ಕೆ ನಿಮ್ಮೆಲ್ಲರ ಸಹಕಾರವಿರಲಿ’ ಎಂದು ಪ್ರೇಮ್ ಮನವಿ ಮಾಡಿದ್ದಾರೆ.
ಕನ್ನಡದಲ್ಲಿ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಿಗೆ ಹಂಸಲೇಖ ಸಂಗೀತ ನೀಡಿದ್ದಾರೆ. ಅದಕ್ಕಿಂತಲೂ ಹೆಚ್ಚು ಸಿನಿಮಾಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಸಾವಿರಾರು ಅತ್ಯದ್ಭುತ ಹಾಡುಗಳನ್ನು ಹಂಸಲೇಖ ನೀಡಿದ್ದಾರೆ. 80ರ ದಶಕದಲ್ಲಿ ಕನ್ನಡ ಸಿನಿಮಾ ಸಾಹಿತ್ಯ ಮತ್ತು ಸಂಗೀತಕ್ಕೆ ಬೇರೆಯದ್ದೇ ಮಾದರಿ ಹಾಕಿಕೊಟ್ಟು, ಕ್ರಾಂತಿ ಮೂಡಿಸಿದ ಸಂಗೀತ ನಿರ್ದೇಶಕ ಮತ್ತು ಸಾಹಿತಿ ಹಂಸಲೇಖ. ಕನ್ನಡ ಮಾತ್ರವೇ ಅಲ್ಲದೆ, ತೆಲುಗು, ತಮಿಳು, ಹಿಂದಿ ಸಿನಿಮಾಗಳಿಗೂ ಸಹ ಹಂಸಲೇಖ ಅವರು ಸಂಗೀತ ಒದಗಿಸಿದ್ದಾರೆ.
ಇದನ್ನೂ ಓದಿ:ಮೈಸೂರಿನಲ್ಲೇ ಎಸ್. ಜಾನಕಿ ಸ್ಮಾರಕ ಆಗಲಿ: ಕಣ್ಣೀರು ಹಾಕುತ್ತಾ ಹಂಸಲೇಖ ವಿನಂತಿ
ಕನ್ನಡ ಸಿನಿಮಾ ಕ್ಷೇತ್ರದ ಅದ್ಭುತ ಸಾಧಕರಾಗಿರುವ ಹಂಸಲೇಖ ಅವರಿಗೆ 1995 ರಲ್ಲಿ ‘ಪಂಚಾಕ್ಷರಿ ಗವಾಯಿ’ ಸಿನಿಮಾದ ಸಂಗೀತಕ್ಕಾಗಿ ರಾಷ್ಟ್ರಪ್ರಶಸ್ತಿ ದೊರಕಿದೆ. ‘ಹಾಲುಂಡ ತವರು’, ‘ನೆನಪಿರಲಿ’ ‘ಪಂಚಾಕ್ಷರಿ ಗವಾಯಿ’ ಸಿನಿಮಾಗಳಿಗೆ ರಾಜ್ಯ ಪ್ರಶಸ್ತಿಗಳು ದೊರಕಿದೆ. ಹಲವು ಬಾರಿ ಫಿಲಂ ಫೇರ್ ದೊರಕಿದೆ. ಇವು ಹಂಸಲೇಖ ಅವರು ಪ್ರತಿಭೆಯಿಂದ ಗೆದ್ದಿರುವ ಪ್ರಶಸ್ತಿಗಳು. ಇವುಗಳ ಹೊರತಾಗಿ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ರಾಜ್ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ, ಎಸ್ ಜಾನಕಿ ಪ್ರಶಸ್ತಿಗಳು ದೊರಕಿವೆ. ಆದರೆ ಕೇಂದ್ರದಿಂದ ನಾಗರೀಕ ಪ್ರಶಸ್ತಿಗಳು ಈ ವರೆಗೆ ಅವರಿಗೆ ದೊರಕಿಲ್ಲ. ಕೇಂದ್ರ ಸರ್ಕಾರವು ಹಂಸಲೇಖ ಅವರ ಸಾಧನೆಯನ್ನು ಈ ವರೆಗೆ ಗುರುತಿಸಿಲ್ಲ.
ಇದೇ ಕಾರಣಕ್ಕೆ ಇದೀಗ ಹಂಸಲೇಖ ಅವರಿಗೆ ನಾಗರೀಕ ಪ್ರಶಸ್ತಿಗಳಿಗೆ ಅಥವಾ ಸಾಹಿತಿಗಳಿಗೆ ನೀಡಲಾಗುವ ಜ್ಞಾನಪೀಠ ಪ್ರಶಸ್ತಿಯನ್ನು ನೀಡಬೇಕು ಎಂಬ ಅಭಿಯಾನ ಆರಂಭಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಚಿತ್ರರಂಗದ ಜನಪ್ರಿಯ ನಟರಾಗಿರುವ ನೆನಪಿರಲಿ ಪ್ರೇಮ್ ಅವರು ಈ ಅಭಿಯಾನ ಆರಂಭಿಸಿರುವುದು ವಿಶೇಷ. ಈ ಹಿಂದೆ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕು ಎಂದು ಅಭಿಯಾನ ಮಾಡಲಾಗಿತ್ತು. ಅದರಂತೆ ಅನಂತ್ ಅವರಿಗೆ ಪದ್ಮ ಪ್ರಶಸ್ತಿ ದೊರಕಿತು. ಈಗ ಹಂಸಲೇಖ ಅವರಿಗೂ ದೊರಕಲಿದೆಯೇ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ