ವಾಷಿಂಗ್ಟನ್, ಜುಲೈ 2: ಆಯಕಟ್ಟಿನ ಜಾಗತಿಕ ಜಲಮಾರ್ಗವಾಗಿರುವ ‘ಪನಾಮ ಕಾಲುವೆ’ಯ (Panama Canal) ಮೇಲಿನ ಅಮೆರಿಕದ ನಿಯಂತ್ರಣವನ್ನು ಬಿಟ್ಟುಕೊಟ್ಟಿದ್ದು ಐತಿಹಾಸಿಕ ಮೂರ್ಖತನ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಟೀಕಿಸಿದ್ದಾರೆ. ಥಿಯೋಡರ್ ರೂಸ್‌ವೆಲ್ಟ್ ಗ್ರಂಥಾಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈಗ ಚೀನಾ ದೇಶವು ಈ ಜಲಮಾರ್ಗದ ಮೇಲೆ ತನ್ನ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದು, ಅದಕ್ಕೆ ಅಮೆರಿಕ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಕಡಾಖಂಡಿತವಾಗಿ ಹೇಳಿದ್ದಾರೆ.
ಸಮುದ್ರ ಪ್ರಯಾಣದ ದೂರ ಕಡಿಮೆ ಮಾಡುತ್ತೆ
ಅಮೆರಿಕದ ಒಟ್ಟು ಕಂಟೇನರ್ ಹಡಗುಗಳ ಸಂಚಾರದ ಪೈಕಿ ಬರೋಬ್ಬರಿ ಶೇ. 40 ರಷ್ಟು ಭಾಗ ಈ ಕಾಲುವೆಯ ಮೂಲಕವೇ ಹಾದುಹೋಗುತ್ತದೆ. ಇದು ವಾರ್ಷಿಕವಾಗಿ ಸುಮಾರು 270 ಶತಕೋಟಿ ಡಾಲರ್ ಮೌಲ್ಯದ ಸರಕುಗಳಿಗೆ ಸಮನಾಗಿದೆ. ಈ ಕಾಲುವೆಯು ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರಗಳ ನಡುವಿನ ಸಮುದ್ರ ಪ್ರಯಾಣದ ದೂರವನ್ನು ಭಾರಿ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ಇದರಿಂದ ಅಮೆರಿಕಕ್ಕೆ ಇಂಧನ ವೆಚ್ಚ ಮತ್ತು ಲಾಜಿಸ್ಟಿಕ್ಸ್ ವೆಚ್ಚ ಕೋಟ್ಯಂತರ ರೂಪಾಯಿ ಉಳಿತಾಯವಾಗುತ್ತದೆ.
1977ರ ಒಪ್ಪಂದ
1977 ರ ಒಪ್ಪಂದದ ಪ್ರಕಾರ ಅಮೆರಿಕವು 1999 ರಲ್ಲಿ ಇದರ ಸಂಪೂರ್ಣ ನಿಯಂತ್ರಣವನ್ನು ಪನಾಮ ದೇಶಕ್ಕೆ ಹಸ್ತಾಂತರಿಸಿತ್ತು. ಟ್ರಂಪ್ ಪ್ರಕಾರ, ಅಮೆರಿಕ ಹಿಂದೆ ಸರಿದ ತಕ್ಷಣ ಪನಾಮ ಸಾರಿಗೆ ಶುಲ್ಕವನ್ನು ಹಲವು ಪಟ್ಟು ಹೆಚ್ಚಿಸಿ ಭಾರಿ ಹಣ ಮಾಡಿತು ಮತ್ತು ಈಗ ಚೀನಾ ಇದರ ಲಾಭ ಪಡೆಯಲು ಸಂಚು ರೂಪಿಸುತ್ತಿದೆ.
ಇದೇ ವೇದಿಕೆಯಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್ ನೀಡಿರುವ ಜನ್ಮಸಿದ್ಧ ಪೌರತ್ವದ ನಿಯಮಗಳ ಕುರಿತು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದರು. ಜನ್ಮಸಿದ್ಧ ಪೌರತ್ವದ ವಿಷಯದಲ್ಲಿ ನ್ಯಾಯಾಲಯ ತಪ್ಪು ಮಾಡಿದೆ. ಈ ಕಾಯ್ದೆಯು ಅಂತರ್ಯುದ್ಧದ ನಂತರ ಕೇವಲ ಗುಲಾಮರ ಮಕ್ಕಳಿಗಾಗಿ ತರಲಾಗಿತ್ತು. ಇದು ಚೀನಾ ಸೇರಿದಂತೆ ಇತರ ದೇಶಗಳ ಶ್ರೀಮಂತರು ಇಲ್ಲಿಗೆ ಬಂದು ತಮ್ಮ ಮಕ್ಕಳಿಗೆ ಪೌರತ್ವ ಪಡೆದುಕೊಳ್ಳಲು ಉದ್ದೇಶಿಸಿದ್ದಲ್ಲ. ಈ ಸಮಸ್ಯೆಯನ್ನು ನಾವು ಶೀಘ್ರದಲ್ಲೇ ಬಗೆಹರಿಸಲಿದ್ದೇವೆ.
ಅಧ್ಯಕ್ಷೀಯ ಅಧಿಕಾರವನ್ನು ಮರುಸ್ಥಾಪಿಸಿದ ಸುಪ್ರೀಂ ಕೋರ್ಟ್‌ನ ಮತ್ತೊಂದು ಇತ್ತೀಚಿನ ಐತಿಹಾಸಿಕ ತೀರ್ಪನ್ನು ಟ್ರಂಪ್ ಮುಕ್ತಕಂಠದಿಂದ ಶ್ಲಾಘಿಸಿದರು.
ಮತ್ತಷ್ಟು ಓದಿ: ಟ್ರಂಪ್‌ಗೆ ಭಾರಿ ಹಿನ್ನಡೆ; ಜನ್ಮಸಿದ್ಧ ಪೌರತ್ವ ಕಾಯ್ದೆ ಎತ್ತಿಹಿಡಿದ ಅಮೆರಿಕದ ಸುಪ್ರೀಂ ಕೋರ್ಟ್
91 ವರ್ಷಗಳ ಇತಿಹಾಸ ರದ್ದು
ಸುಪ್ರೀಂ ಕೋರ್ಟ್ 6-3 ರ ಬಹುಮತದೊಂದಿಗೆ ಮಹತ್ವದ ತೀರ್ಪು ನೀಡಿದ್ದು, ಸೆನೆಟ್‌ನಿಂದ ದೃಢೀಕರಿಸಲ್ಪಟ್ಟ ಉನ್ನತ ಆಡಳಿತಾತ್ಮಕ ಅಧಿಕಾರಿಗಳನ್ನು ನೇರವಾಗಿ ವಜಾಗೊಳಿಸುವ ಅಮೆರಿಕ ಅಧ್ಯಕ್ಷರ ಅಧಿಕಾರವನ್ನು ಗಮನಾರ್ಹವಾಗಿ ವಿಸ್ತರಿಸಿದೆ. ಈ ಮೂಲಕ 1932 ರಲ್ಲಿ ಫ್ರಾಂಕ್ಲಿನ್ ಡಿ. ರೂಸ್‌ವೆಲ್ಟ್ (FDR) ಕಾಲದಲ್ಲಿ ಅಧ್ಯಕ್ಷರಿಂದ ಕಸಿದುಕೊಳ್ಳಲಾಗಿದ್ದ ಅಧಿಕಾರವನ್ನು ಕೋರ್ಟ್ ಮರಳಿ ನೀಡಿದೆ.
ದೇಶಕ್ಕೆ ನಿಜವಾಗಿಯೂ ಬಲಿಷ್ಠ ನಾಯಕತ್ವದ ಅಗತ್ಯವಿರುವ ಈ ಸಮಯದಲ್ಲಿ, ಅಧ್ಯಕ್ಷರಿಗೆ ಹೆಚ್ಚಿನ ಶಕ್ತಿ ನೀಡಿರುವ ಈ ನಿರ್ಧಾರವು ಇತಿಹಾಸದಲ್ಲೇ ಅತ್ಯಂತ ಪ್ರಮುಖವಾಗಿದೆ ಎಂದು ಟ್ರಂಪ್ ಬಣ್ಣಿಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
