‘ಸಪ್ತ ಸಾಗರದಾಚೆ ಎಲ್ಲೊ’ (Sapta Sagaradache Ello) ಸಿನಿಮಾ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ ನಿರ್ದೇಶಕ ಹೇಮಂತ್ ರಾವ್. ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಬಳಿಕ ಅವರ ಈ ಹಿಂದಿನ ಸಿನಿಮಾಗಳಾದ ‘ಕವಲುದಾರಿ’, ‘ಗೋದಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾಗಳನ್ನು ಸಹ ಪರಭಾಷೆ ಸಿನಿಮಾ ಪ್ರೇಮಿಗಳು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರೇಕ್ಷಕರನ್ನು ಗಳಿಸಿಕೊಂಡಿರುವ ಹೇಮಂತ್ ರಾವ್ ಅವರಿಗೆ ಇದೀಗ ಪರಭಾಷೆ ಚಿತ್ರರಂಗಗಳಿಂದಲೂ ಅವಕಾಶಗಳು ಅರಸಿ ಬರುತ್ತಿವೆಯಂತೆ. ಈ ಬಗ್ಗೆ ಖುದ್ದು ಹೇಮಂತ್ ರಾವ್ ಅವರೇ ಮಾತನಾಡಿದ್ದಾರೆ.
ತೆಲುಗು ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಹೇಮಂತ್ ರಾವ್ ಅವರಿಗೆ ಪರಭಾಷೆ ಸಿನಿಮಾಗಳಿಂದ ಅವಕಾಶಗಳು ಬರುತ್ತಿವೆಯೇ? ಹಾಗೊಮ್ಮೆ ಬಂದರೆ ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡುತ್ತೀರಾ? ಎಂಬ ಪ್ರಶ್ನೆ ಎದುರಾಯ್ತು. ಇದಕ್ಕೆ ಉತ್ತರಿಸಿದ ಹೇಮಂತ್ ರಾವ್, ‘ನನಗೆ ಸಾಕಷ್ಟು ಆಸಕ್ತಿಕರ ಆಫರ್ಗಳುಗಳು ನನಗೆ ಬಂದಿವೆ, ಬರುತ್ತಿವೆ. ಒಮ್ಮೆ ನೋಡಿದರೆ ನನ್ನ ವೃತ್ತಿ ಬದುಕಿನ ಏಳಿಗೆಗೆ ಸಾಕಷ್ಟು ಅನುಕೂಲ ಆಗಬಹುದಾದಂಥಹಾ ಅವಕಾಶಗಳು ಅವಾಗಿವೆ’ ಎಂದಿದ್ದಾರೆ.
‘ಬಹಳ ಟೆಂಪ್ಟಿಂಗ್ ಆದ ಅವಕಾಶಗಳೇ ಎದುರಿಗೆ ಇವೆ, ಇದ್ದವು. ಆದರೆ ನನಗೆ ಯಾಕೋ, ಏನೋ ಈ ಹಂತದಲ್ಲಿ ಪರ ಭಾಷೆಗೆ ಹೋಗಿ ಸಿನಿಮಾ ಮಾಡುವುದು ಸರಿ ಅನಿಸಲಿಲ್ಲ. ಹೌದು, ಒಬ್ಬ ನಿರ್ದೇಶಕನಾಗಿ ನನಗೆ, ನನ್ನ ಸಿನಿಮಾಗಳನ್ನು ಹೆಚ್ಚು ಹೆಚ್ಚು ಜನರಿಗೆ ತೋರಿಸಬೇಕು ಎಂಬ ಆಸೆ ಇದೆ. ಮಾರ್ಕೆಟ್ ಎಲ್ಲಿ ಹೆಚ್ಚಿದೆಯೋ ಅಲ್ಲಿಗೆ ಹೋಗಬೇಕು ಎಂಬುದು ಸಹ ನಿಜವೇ. ಆದರೆ ನಾನು ಒಬ್ಬ ಹೆಮ್ಮೆಯ ಕನ್ನಡಿಗ, ಭಾಷೆ, ರಾಜ್ಯದ ಬಗ್ಗೆ ಹೆಮ್ಮೆಯುಳ್ಳ ವ್ಯಕ್ತಿ. ನನ್ನ ಭಾಷೆಯಲ್ಲಿ ಸಿನಿಮಾ ಮಾಡುವುದು ನನಗೆ ಹೆಚ್ಚು ಸುಖ, ಆಪ್ತ ಎನಿಸುತ್ತದೆ’ ಎಂದಿದ್ದಾರೆ ಹೇಮಂತ್ ರಾವ್.
ಇದನ್ನೂ ಓದಿ:ಸೈಮಾನಲ್ಲಿ ಪ್ರಶಸ್ತಿಗಳ ಬಾಚಿದ ‘ಸಪ್ತ ಸಾಗರದಾಚೆ ಎಲ್ಲೋ’, ಇಲ್ಲಿದೆ ಪಟ್ಟಿ
‘ಅಲ್ಲದೆ ನನ್ನ ಕತೆಗಳು ನನ್ನ ಸುತ್ತ-ಮುತ್ತಲಿನ ಪರಿಸರದಿಂದ, ಆ ಪರಿಸರದಲ್ಲಿ ಮೂಡಿದ ನನ್ನ ಅನುಭವದಿಂದ ಹುಟ್ಟಿದವು, ಅವು ಪರಭಾಷೆಯವರಿಗೆ ಅಜ್ಞಾತ ಅನಿಸಬಹುದು ಎಂಬ ಭಯವೂ ಇದೆ. ಅಲ್ಲದೆ, ಗೊತ್ತಿಲ್ಲದ ಭಾಷೆಯಲ್ಲಿ ಸಿನಿಮಾ ಮಾಡುವುದು ಸೂಕ್ತವಲ್ಲ ಎಂಬುದು ಸಹ ನನ್ನ ನಂಬಿಕೆ. ಆಗ ನನ್ನ ಐಡಿಯಾಗಳನ್ನು, ಭಾವನೆಗಳನ್ನು ಸೂಕ್ತವಾಗಿ ಹೇಳಲಾಗುವುದಿಲ್ಲ. ಅಲ್ಲದೆ, ನನ್ನನ್ನು ಈಗ ಕನ್ನಡದ ಸಿನಿಮಾ ನಿರ್ದೇಶಕ ಎಂದು ಗುರುತಿಸುತ್ತಾರೆ. ಅದೊಂದು ಗೌರವ, ಹೆಮ್ಮೆ. ನಾನು ಅದಕ್ಕೆ ಬಹಳ ಮೌಲ್ಯ ಕೊಡುತ್ತೀನಿ. ಸದ್ಯಕ್ಕೆ ಕನ್ನಡದಲ್ಲಿ ಮಾತ್ರ ಸಿನಿಮಾ ಮಾಡುವ ಯೋಚನೆ ಇದೆ. ಮುಂದೇನಾಗುತ್ತದೆಯೋ ನೋಡಬೇಕು’ ಎಂದು ಹೇಮಂತ್ ರಾವ್ ಹೇಳಿದ್ದಾರೆ.
ಹೇಮಂತ್ ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾ ಸರಣಿಗಳು ದೇಶದಾದ್ಯಂತ ಸಿನಿಮಾ ಪ್ರೇಮಿಗಳಿಂದ ನೋಡಲ್ಪಟ್ಟಿವೆ. ಈ ಸಿನಿಮಾಗಳಿಗೆ ಪ್ರತ್ಯೇಕ ಅಭಿಮಾನಿ ವರ್ಗವೇ ಹುಟ್ಟಿಕೊಂಡಿದೆ. ಇದೀಗ ಹೇಮಂತ್ ರಾವ್ ಅವರು ‘666 ಆಪರೇಷನ್ ಡ್ರೀಮ್ ಥಿಯೇಟರ್’ ಹೆಸರಿನ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಸಿನಿಮಾನಲ್ಲಿ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಒಟ್ಟಿಗೆ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
