ಮಾಜಿ ಸಚಿವೆ, ಕನ್ನಡ ಚಿತ್ರರಂಗದ ಖ್ಯಾತ ನಟಿ ಉಮಾಶ್ರೀ (Umashree) ಅವರು ಮಂಗಳವಾರ ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾದರು. ಸದನದ ನಾಯಕ ಡಾ. ಯತೀಂದ್ರ ಅವರು ಉಮಾಶ್ರೀ ಅವರ ಹೆಸರನ್ನು ಉಪಸಭಾಪತಿ ಹುದ್ದೆಗೆ ಪ್ರಸ್ತಾಪಿಸಿದ ನಂತರ, ಎಲ್ಲಾ ಪಕ್ಷಗಳ ಸದಸ್ಯರು ಅವರ ಆಯ್ಕೆಯನ್ನು ಸ್ವಾಗತಿಸಿದರು. ಈ ಮೂಲಕ ಉಮಾಶ್ರೀ ಅವರು ವಿಧಾನ ಪರಿಷತ್ತಿನ ಉಪಸಭಾಪತಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
68 ವರ್ಷದ ಉಮಾಶ್ರೀ ಅವರು ಹೆಸರಾಂತ ನಟಿಯಾಗಿದ್ದು, 2008ರಲ್ಲಿ ‘ಗುಲಾಬಿ ಟಾಕೀಸ್’ ಚಿತ್ರದಲ್ಲಿನ ಅಭಿನಯಕ್ಕಾಗಿ ಶ್ರೇಷ್ಠ ನಟಿ ಸೇರಿದಂತೆ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ನಟನೆಗೆ ಗೆದ್ದಿದ್ದಾರೆ. ಜೊತೆಗೆ ಎಂಟು ಬಾರಿ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಅವರು ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. ಹಲವು ವರ್ಷಗಳಿಂದ ರಾಜಕೀಯದಲ್ಲೂ ಸಕ್ರಿಯರಾಗಿರುವ ಉಮಾಶ್ರೀ ಅವರು ಈ ಹಿಂದೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಈಗ ಉಪಸಭಾಪತಿಯಾಗಿದ್ದಾರೆ.
ಉಮಾಶ್ರೀ ಅವರದ್ದು ಚಿತ್ರರಂಗದಲ್ಲಿ ಬಲು ಸುದೀರ್ಘ ಮತ್ತು ಗಮನಾರ್ಹ ಸೇವೆ. ಅವರು ಸುಮಾರು 470ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಮತ್ತು 200ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದಾರೆ. ಅವರು ನಟಿಸಿರುವ ನಾಟಕಗಳು 7,000ಕ್ಕೂ ಹೆಚ್ಚು ಪ್ರದರ್ಶನಗಳು ನಡೆದಿವೆ. ಟಿವಿಯಲ್ಲೂ ಸಹ ಉಮಾಶ್ರೀ ಕೆಲಸ ಮಾಡಿದ್ದು, ಅವರ ನಟನೆಯ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಬಲು ಜನಪ್ರಿಯ. ರಾಜಕೀಯ ರಂಗದಲ್ಲಿ, ಅವರು 2001ರಲ್ಲಿ ಮೊದಲ ಬಾರಿಗೆ ಮೇಲ್ಮನೆಗೆ ನಾಮನಿರ್ದೇಶನಗೊಂಡರು ಮತ್ತು 2013ರಲ್ಲಿ ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅವರು ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಉಮಾಶ್ರೀ ಹೇಳಿದ ಆ ಒಂದು ಮಾತಿಗೆ ಕಣ್ಣೀರು ಹಾಕಿದ್ದ ಎಸ್. ಜಾನಕಿ
ಉಮಾಶ್ರೀ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಉಮಾಶ್ರೀ ಅವರ ಆಯ್ಕೆಯ ಕುರಿತು ಸದನದ 26 ಮಂದಿ ಸದಸ್ಯರು ಮಾತನಾಡಿದ್ದು, ಅವರನ್ನು ಬಹುಮುಖ ಪ್ರತಿಭೆಯ ನಟಿ ಮತ್ತು ಜನಸೇವೆ ಮಾಡುವ ಹೃದಯವಂತಿಕೆ ಉಳ್ಳವರು ಎಂದು ಬಣ್ಣಿಸಿದ್ದಾರೆ. ಹಲವು ಸದಸ್ಯರು ಅವರು ಸಚಿವ ಸ್ಥಾನಕ್ಕೆ ಅರ್ಹರಾಗಿದ್ದಾರೆ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಇದು ತಮಗೆ ಭಾವುಕ ಕ್ಷಣ ಎಂದು ಹೇಳಿದ ಉಮಾಶ್ರೀ, ಈ ಸಾಧನೆಯನ್ನು ತಮ್ಮ ಪೋಷಕರಿಗೆ ಅರ್ಪಿಸುವುದಾಗಿ ತಿಳಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 11:16 am, Wed, 19 August 26
