
ಮೀರತ್, ಏಪ್ರಿಲ್ 13: ಮೀರತ್‌ನ ಬೀದಿಗಳಲ್ಲಿ ಒಂದು ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ತಿಂಗಳುಗಳಿಂದ ಬಾಗಿಲು ಹಾಕಿದ್ದ ಮನೆಯೊಳಗೆ ಮಗಳ ಹೆಣದೊಂದಿಗೆ ತಂದೆ(Father)ಯೊಬ್ಬರು ವಾಸವಿದ್ದರು ಎಂಬ ಸತ್ಯ ಬಯಲಾದಾಗ ಪೊಲೀಸರೇ ಬೆಚ್ಚಿಬಿದ್ದರು. 34 ವರ್ಷದ ಪ್ರಿಯಾಂಕಾ ಎಂಬಾಕೆಯ ದೇಹವು ಈಗ ಬಹುತೇಕ ಅಸ್ಥಿಪಂಜರವಾಗಿ ಮಾರ್ಪಟ್ಟಿದೆ.
ನಾಲ್ಕು ತಿಂಗಳ ಮೌನ ಮತ್ತು ಸುಳ್ಳಿನ ಕತೆ
ಪ್ರಿಯಾಂಕಾ ಮತ್ತು ಆಕೆಯ ತಂದೆ ಉದಯ್ ಭಾನ್ ಬಿಸ್ವಾಸ್ ಕಳೆದ ನಾಲ್ಕು ತಿಂಗಳಿನಿಂದ ಅಕ್ಕಪಕ್ಕದ ಮನೆಯವರಿಗೆ ಕಾಣಿಸಿಕೊಂಡಿರಲಿಲ್ಲ. ಮನೆಗೆ ಬೀಗ ಹಾಕಲಾಗಿತ್ತು. ಆತಂಕಗೊಂಡ ಸಂಬಂಧಿಕರು ಹುಡುಕಾಟ ನಡೆಸಿದಾಗ, ಉದಯ್ ಭಾನ್ ಬೇಗಂ ಬಾಗ್‌ನ ಚಹಾ ಅಂಗಡಿಯೊಂದರ ಬಳಿ ಸಿಕ್ಕಿದ್ದರು.
ಮಗಳ ಬಗ್ಗೆ ಕೇಳಿದಾಗ, ಆಕೆಗೆ ಹುಷಾರಿಲ್ಲ, ಡೆಹ್ರಾಡೂನ್‌ನ ಆಸ್ಪತ್ರೆಗೆ ದಾಖಲಿಸಿದ್ದೇನೆ ಎಂದು ಉದಯ್ ಭಾನ್ ಸಬೂಬು ನೀಡಿದ್ದರು. ಸಂಬಂಧಿಕರು ಬಿಡದೇ ವಿಚಾರಿಸಿದಾಗ, ಆಕೆ ಸತ್ತು ಹೋಗಿದ್ದಾಳೆ, ಅವಳ ದೇಹ ಮನೆಯೊಳಗೇ ಇದೆ ಎಂದು ಅವರು ಮೌನ ಮುರಿದಿದ್ದ.
ಪೊಲೀಸರು ಮನೆಯ ಬೀಗ ಒಡೆದು ಒಳಗೆ ಹೋದಾಗ ಕಂಡ ದೃಶ್ಯ ಅತ್ಯಂತ ಭಯಾನಕವಾಗಿತ್ತು. ಮನೆಯ ತುಂಬ ಹಳೆಯ ಕಾಗದಗಳು ಮತ್ತು ಕಸ ತುಂಬಿತ್ತು. ಅದರ ನಡುವೆ ಪ್ರಿಯಾಂಕಾ ಅವರ ಶವವು ಕೊಳೆತು ಅಸ್ಥಿಪಂಜರವಾಗಿ ಮಾರ್ಪಟ್ಟಿತ್ತು. ದೇಹ ಕೊಳೆಯುವಾಗ ವಾಸನೆ ಬರದಂತೆ ನಾನು ಮನೆಯ ತುಂಬೆಲ್ಲಾ ಸುಗಂಧ ದ್ರವ್ಯ (Perfume) ಸಿಂಪಡಿಸುತ್ತಿದ್ದೆ ಎಂದು ತಂದೆ ಹೇಳಿಕೆ ನೀಡಿರುವುದು ಕೇಳುಗರನ್ನು ನಡುಗಿಸುವಂತಿದೆ.
ಮಗಳು ಸತ್ತ ನಂತರವೂ ಸುಮಾರು ನಾಲ್ಕು ದಿನಗಳ ಕಾಲ ಉದಯ್ ಭಾನ್ ಅದೇ ಹೆಣದ ಪಕ್ಕದಲ್ಲೇ ಮಲಗುತ್ತಿದ್ದರು ಎಂದು ತಿಳಿಸಿದ್ದಾರೆ. ಪ್ರಿಯಾಂಕಾ ಅವರ ಸೋದರಸಂಬಂಧಿ ಬಿಸ್ವಜಿತ್ ಬಿಸ್ವಾಸ್ ಅವರ ಪ್ರಕಾರ, ಈ ಕುಟುಂಬದ ದುರಂತಕ್ಕೆ ಹಳೆಯ ನೋವಿನ ಇತಿಹಾಸವಿದೆ.2013 ರಲ್ಲಿ ಪ್ರಿಯಾಂಕಾ ಅವರ ತಾಯಿ ಕೂಡ ಇದೇ ರೀತಿಯಲ್ಲಿ ನಿಧನರಾಗಿದ್ದರು.
ಮತ್ತಷ್ಟು ಓದಿ: ಮಹಾರಾಷ್ಟ್ರ ಪೊಲೀಸ್ ಪಡೆಗೆ ಸೇರ್ಪಡೆಯಾದ ಖುಷಿ, ತಂದೆಯನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ ಮಗಳು
ತಾಯಿಯ ಸಾವಿನ ನಂತರ ತಂದೆ ಮತ್ತು ಮಗಳು ಇಬ್ಬರೂ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಯಾರೊಂದಿಗೂ ಮಾತನಾಡದೆ ಏಕಾಂಗಿಯಾಗಿ ವಾಸಿಸುತ್ತಿದ್ದರು. ಪ್ರಿಯಾಂಕಾ ದೈಹಿಕ ಮತ್ತು ಮಾನಸಿಕವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದರೂ, ತಂದೆ ಯಾರ ಸಹಾಯವನ್ನೂ ಪಡೆಯಲು ಇಷ್ಟಪಡುತ್ತಿರಲಿಲ್ಲ.
ಸದ್ಯ ಪ್ರಿಯಾಂಕಾ ಅವರ ಅವಶೇಷಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆಕೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆಯೇ ಅಥವಾ ಇದರ ಹಿಂದೆ ಬೇರೆ ಏನಾದರೂ ರಹಸ್ಯವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಕೆಗೆ ಸರಿಯಾದ ಚಿಕಿತ್ಸೆ ಕೊಡಿಸದ ತಂದೆಯ ಮೌನ ಮತ್ತು ನಾಲ್ಕು ತಿಂಗಳ ಕಾಲ ಸಾವನ್ನು ಮರೆಮಾಚಿದ್ದು ಈಗ ದೊಡ್ಡ ಪ್ರಶ್ನೆಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ