ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಇತ್ತೀಚೆಗೆ ಮೂಗಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಪವನ್ ನಿವಾಸಕ್ಕೆ ಭೇಟಿ ನೀಡಿದ್ದಾಗ ಪವನ್ ಚೇತರಿಸಿಕೊಳ್ಳುತ್ತಿರುವುದು ಕಾಣಿಸಿದೆ. ಪವನ್ ಕಲ್ಯಾಣ್ ನಟನೆಗೆ ಮರಳಬೇಕು ಎಂಬುದು ಅನೇಕರ ಕೋರಿಕೆ ಆಗಿತ್ತು. ಅವರು ನಟನೆಗೆ ಮರಳದಿರಲು ರಾಜಕೀಯ ಕಾರಣ ಎನ್ನಲಾಗಿತ್ತು. ಆದರೆ, ಇದಕ್ಕೆ ಬೇರೆಯದೇ ಕಾರಣ ಇದೆ.
ಪವನ್ ಕಲ್ಯಾಣ್ ಅವರು ಡಿಸಿಎಂ ಆದ ಬಳಿಕ ಸಿನಿಮಾದಿಂದ ಅಂತರ ಕಾಯ್ದುಕೊಂಡರು. ಒಪ್ಪಿಕೊಂಡಿದ್ದ ಕೆಲಸ ಸಿನಿಮಾಗಳ ಕೆಲಸವನ್ನು ಕಷ್ಟಪಟ್ಟು ಮುಗಿಸಿದರು. ಹೊಸ ಸಿನಿಮಾ ಒಪ್ಪಿಕೊಳ್ಳದೆ ಹಲವು ವರ್ಷಗಳೇ ಕಳೆದಿವೆ. ಇದಕ್ಕೆ ಕಾರಣ ಅವರ ಅನಾರೋಗ್ಯ.
ವರದಿಗಳ ಪ್ರಕಾರ, ಪವನ್ ಕಲ್ಯಾಣ್ ಅವರು ಈ ಹಿಂದೆ ಸಿನಿಮಾ ಶೂಟಿಂಗ್‌ಗಳ ಸಮಯದಲ್ಲಿ ಅನೇಕ ಬಾರಿ ಪೆಟ್ಟು ಮಾಡಿಕೊಂಡಿದ್ದರು. ಆಗಿನ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಆ ಗಾಯಗಳನ್ನು ಸರಿಯಾಗಿ ಗಮನಿಸದೆ ನಿರ್ಲಕ್ಷಿಸಲಾಗಿತ್ತು. ವರ್ಷಗಳ ಕಾಲ ಹಾಗೆಯೇ ಉಳಿದಿದ್ದ ಆ ಸಣ್ಣಪುಟ್ಟ ಗಾಯಗಳು ಈಗ ಕೆಲವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿವೆಯಂತೆ. ಈ ಬಗ್ಗೆ ಸ್ವತಃ ಪವನ್ ಅವರು ಚಂದ್ರಬಾಬು ನಾಯ್ಡು ಅವರ ಬಳಿ ಹಂಚಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಪವನ್ ಕಲ್ಯಾಣ್ ಅವರು ಉಪಮುಖ್ಯಮಂತ್ರಿಯಾಗಿ ದೊಡ್ಡ ಜವಾಬ್ದಾರಿ ಹೊತ್ತಿದ್ದಾರೆ. ಸರಣಿ ಸಭೆಗಳು, ಕ್ಷೇತ್ರ ಭೇಟಿಗಳು ಮತ್ತು ಪಕ್ಷದ ಕೆಲಸಗಳ ನಡುವೆ ಅವರಿಗೆ ವಿಶ್ರಾಂತಿ ಪಡೆಯಲು ಸಮಯ ಸಿಗುತ್ತಿಲ್ಲ. ಈ ಹಂತದಲ್ಲಿ ಮತ್ತೆ ಸಿನಿಮಾ ಶೂಟಿಂಗ್‌ನ ಅತಿಯಾದ ದೈಹಿಕ ಶ್ರಮದ ಕೆಲಸಗಳಿಗೆ ಕೈ ಹಾಕಿದರೆ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂಬ ಆತಂಕ ಅವರ ಆಪ್ತ ವಲಯದಲ್ಲಿದೆ. ಹೀಗಾಗಿ, ಸಂಪೂರ್ಣವಾಗಿ ಗುಣಮುಖರಾಗುವವರೆಗೂ ಕ್ಯಾಮೆರಾ ಮುಂದೆ ಬರಬೇಡಿ ಎಂಬ ಸಲಹೆ ಅವರಿಗೆ ಸಿಕ್ಕಿದೆ ಎನ್ನಲಾಗಿದೆ.
ಇದನ್ನೂ ಓದಿ: ಶಸ್ತ್ರ ಚಿಕಿತ್ಸೆ ಬಳಿಕ ಪವನ್ ಕಲ್ಯಾಣ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಚಿರಂಜೀವಿ
ಸುರೇಂದರ್ ರೆಡ್ಡಿ ಸಿನಿಮಾದಲ್ಲಿ ಪವನ್ ನಟಿಸಬೇಕಿತ್ತು. ಈ ಚಿತ್ರದ ಚರ್ಚೆ ನಡೆದಿದೆ. ಆದರೆ, ಪವನ್ ಅವರ ಸದ್ಯದ ಆದ್ಯತೆ ಆರೋಗ್ಯ ಮತ್ತು ಆಡಳಿತ. ಶೂಟಿಂಗ್ ಆರಂಭಿಸುವ ಮೊದಲು ತಮ್ಮ ದೈಹಿಕ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ವಾಪಸ್ ಪಡೆಯಲು ಅವರು ನಿರ್ಧರಿಸಿದ್ದಾರೆ. ಹೀಗಾಗಿ, ಸದ್ಯಕ್ಕಂತೂ ಸಿನಿಮಾ ಸೆಟ್ಟೇರಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.