ನವದೆಹಲಿ, ಆಗಸ್ಟ್ 14: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ (Iran War) ನಡುವೆ ಸಂಘರ್ಷ ಹೆಚ್ಚಾದ ಬೆನ್ನಲ್ಲೇ ಮೊದಲ ಭಾರಿಗೆ ಇರಾನ್ ಅಧ್ಯಕ್ಷ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಮುಂಬರುವ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 18ನೇ ಬ್ರಿಕ್ಸ್ ಶೃಂಗಸಭೆಯು ಸೆಪ್ಟೆಂಬರ್ 12 ಹಾಗೂ 13ರಂದು ನಡೆಯಲಿದೆ.
ಪೆಜೆಶ್ಕಿಯನ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ದ್ವಿಪಕ್ಷೀಯ ಮಾತುಕತೆ ಭಾರತ-ಇರಾನ್ ಸಂಬಂಧಗಳನ್ನು ಬಲಪಡಿಸಲು ಹಾದಿ ಮಾಡಿಕೊಡಲಿದೆ. ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳು, ಆರ್ಥಿಕ ಸಹಕಾರ ಹಾಗೂ ಪ್ರಸ್ತುತ ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ಬಗ್ಗೆ ಚರ್ಚೆಗಳು ನಡೆಯುವ ಸಾಧ್ಯತೆಯಿದೆ.
ಇದನ್ನೂ ಓದಿ: ಇರಾನ್ಗೆ ಹೆದರಿ ಕ್ಯಾಟರಿಂಗ್ ಟ್ರಕ್ ಹತ್ತಿದ ಟ್ರಂಪ್; ಟರ್ಕಿಯಿಂದ ರಹಸ್ಯವಾಗಿ ಎಸ್ಕೇಪ್ ಆಗಿದ್ದ ಅಮೆರಿಕ ಅಧ್ಯಕ್ಷ
2024ರಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದ ಪೆಜೆಶ್ಕಿಯನ್:
ರಷ್ಯಾದ ಕಜಾನ್ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ವೇಳೆ ಅಕ್ಟೋಬರ್ 2024ರಲ್ಲಿ ಇರಾನ್ ಅಧ್ಯಕ್ಷ ಪೆಜೆಶ್ಕಿಯನ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಹಾಗೂ ಪ್ರಾದೇಶಿಕ ವಿಷಯಗಳ ಕುರಿತು ಚರ್ಚೆ ನಡೆಸಿದ್ದರು. ಇದಲ್ಲದೆ, ಈಜಿಪ್ಟ್, ಇಥಿಯೋಪಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಜೊತೆಗೆ ಇರಾನ್ 2024ರಲ್ಲಿ ಬ್ರಿಕ್ಸ್ ಸಂಸ್ಥೆಯ ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರವಾಯಿತು. ನಂತರ, 2025ರಲ್ಲಿ ಇಂಡೋನೇಷ್ಯಾ ಕೂಡ ಈ ಒಕ್ಕೂಟಕ್ಕೆ ಸೇರ್ಪಡೆಯಾಗುವುದರೊಂದಿಗೆ ಒಟ್ಟು ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ಕತ್ತಲೆಯಲ್ಲಿ ಇರಾನ್ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿಯನ್ನು ಭೇಟಿಯಾದ್ರಾ ಇರಾನ್ ಅಧ್ಯಕ್ಷ?
ಕಳೆದ ಜೂನ್ ತಿಂಗಳಿನಲ್ಲಿ ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಭಾರತಕ್ಕೆ ಆಗಮಿಸಿದ್ದರು. ಆ ಸಭೆಯ ನಂತರ ನವದೆಹಲಿಯಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ್ದ ಅರಾಘ್ಚಿ, ಜಾಗತಿಕ ಶಾಂತಿಪಾಲಕನಾಗಿ ಭಾರತದ ಬೆಳವಣಿಗೆಯನ್ನು ಶ್ಲಾಘಿಸಿದ್ದರು. ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಭಾರತವು ದೊಡ್ಡ ಪಾತ್ರ ವಹಿಸಬಹುದು ಎಂದು ಕೂಡ ಹೇಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ