ಕೊಲ್ಕತ್ತಾ, ಏಪ್ರಿಲ್ 21: ಪಶ್ಚಿಮ ಬಂಗಾಳದಲ್ಲಿ (West Bengal Assembly Elections) ಈ ಬಾರಿ ಬಿಜೆಪಿ ಸರ್ಕಾರವನ್ನು ರಚಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಧಾನಸಭಾ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ (Amit Shah), ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ರಾಜ್ಯದ ಜನರು ವಿದಾಯ ಹೇಳುವ ಸಮಯ ಬಂದಿದೆ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಬಹುಪತ್ನಿತ್ವ ಪದ್ಧತಿಯನ್ನು ನಿಷೇಧಿಸಲು ಬಿಜೆಪಿ ಯುಸಿಸಿಯನ್ನು ಜಾರಿಗೆ ತರಲಿದೆ. ನಾವು ಒಮ್ಮೆ ಅಧಿಕಾರಕ್ಕೆ ಬಂದ ನಂತರ ಬಂಗಾಳದಲ್ಲಿ ಯುಸಿಸಿ ಜಾರಿಗೊಳಿಸುವ ಮೂಲಕ ಒಂದು ನಿರ್ದಿಷ್ಟ ಸಮುದಾಯದಲ್ಲಿ 4 ವಿವಾಹಗಳನ್ನು ನಿಷೇಧಿಸುವುದಾಗಿ ಅಮಿತ್ ಶಾ ಭರವಸೆ ನೀಡಿದ್ದಾರೆ.
6 ತಿಂಗಳಲ್ಲಿ ಗೂರ್ಖಾಗಳ ಸಮಸ್ಯೆಗೆ ಪರಿಹಾರ:
ಬಂಗಾಳದ ಕುರ್ಸಿಯೊಂಗ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಡಾರ್ಜಿಲಿಂಗ್‌ನಲ್ಲಿ ಗೂರ್ಖಾ ಸಮುದಾಯಕ್ಕೆ ಸಂಬಂಧಿಸಿದಂತೆ ದೀರ್ಘಕಾಲದಿಂದ ಬಾಕಿ ಉಳಿದಿರುವ ಸಮಸ್ಯೆಗಳಿಗೆ ತ್ವರಿತ ಪರಿಹಾರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಬಿಜೆಪಿ ಸರ್ಕಾರ ರಚನೆಯಾದ ನಂತರ 6 ತಿಂಗಳೊಳಗೆ ಗೂರ್ಖಾಗಳಿಗೆ ಸರಿಯಾದ ಪರಿಹಾರವನ್ನು ನೀಡಲಾಗುವುದು. ಟಿಎಂಸಿ ಮತ್ತು ಕಾಂಗ್ರೆಸ್ ಸೇರಿದಂತೆ ಹಿಂದಿನ ಸರ್ಕಾರಗಳು ಗೂರ್ಖಾಗಳ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿವೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ಎಲ್ಲಾ ಟಿಕೆಟ್‌ಗಳನ್ನು ಮುಸ್ಲಿಂ ಮಹಿಳೆಯರಿಗೆ ನೀಡಿ; ಅಖಿಲೇಶ್ ಯಾದವ್ ವಿರುದ್ಧ ಗುಡುಗಿದ ಅಮಿತ್ ಶಾ
“ಮಮತಾ ದೀದಿ ಗೂರ್ಖಾ ಇತಿಹಾಸವನ್ನು ನಿಗ್ರಹಿಸಲು ಪ್ರಯತ್ನಿಸಿದ್ದಾರೆ. ಈಗ ಗೂರ್ಖಾಗಳ ವಿರುದ್ಧದ ಅನ್ಯಾಯವನ್ನು ಕೊನೆಗೊಳಿಸುವ ಸಮಯ ಬಂದಿದೆ. ಡಾರ್ಜಿಲಿಂಗ್ ಜನರು ಕಾಂಗ್ರೆಸ್, ಕಮ್ಯುನಿಸ್ಟರು ಮತ್ತು ಮಮತಾ ಬ್ಯಾನರ್ಜಿ ಅವರನ್ನು ದಂಡಿಸಬೇಕಾಗಿದೆ. ನಾವು ಗೂರ್ಖಾಗಳಿಗೆ ಆಗಿರುವ ಅನ್ಯಾಯವನ್ನು ಕೊನೆಗೊಳಿಸುತ್ತೇವೆ. ನಮ್ಮ ಗೂರ್ಖಾ ಸಹೋದರರ ವಿರುದ್ಧ ನೂರಾರು ಸುಳ್ಳು ಪ್ರಕರಣಗಳಿವೆ. ಜುಲೈ 31ರ ಮೊದಲು ನಾವು ಎಲ್ಲಾ ಪ್ರಕರಣಗಳನ್ನು ಹಿಂತೆಗೆದುಕೊಳ್ಳುತ್ತೇವೆ” ಎಂದು ಅಮಿತ್ ಶಾ ಘೋಷಿಸಿದ್ದಾರೆ.
ಇದನ್ನೂ ಓದಿ: ಪ್ರತಿ ಚುನಾವಣೆಯಲ್ಲೂ ಮಹಿಳೆಯರ ಕೋಪ ಎದುರಿಸಬೇಕಾಗುತ್ತದೆ; ವಿರೋಧ ಪಕ್ಷಗಳಿಗೆ ಅಮಿತ್ ಶಾ ಎಚ್ಚರಿಕೆ
ಸಂದೇಶಖಾಲಿಯಲ್ಲಿ ನಡೆದಂತಹ ಘಟನೆಗಳನ್ನು ಉಲ್ಲೇಖಿಸಿದ ಅಮಿತ್ ಶಾ, ಪ್ರಸ್ತುತ ಟಿಎಂಸಿ ಸರ್ಕಾರದ ಅಡಿಯಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚಿವೆ ಎಂದು ಆರೋಪಿಸಿದರು. ಬಿಜೆಪಿ ಸರ್ಕಾರ ರಚಿಸಿದರೆ ಅಪರಾಧಗಳಲ್ಲಿ ಭಾಗಿಯಾಗಿರುವ ಎಲ್ಲರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಹೇಳುವ ಮೂಲಕ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಏಪ್ರಿಲ್ 23 ಮತ್ತು 29ರಂದು ಪಶ್ಚಿಮ ಬಂಗಾಳದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಮತ ಎಣಿಕೆಯನ್ನು ಮೇ 4ರಂದು ನಿಗದಿಪಡಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
