ನವದೆಹಲಿ, ಮೇ 5: ದೇಶದ ರಾಜಕೀಯ ದಿಕ್ಸೂಚಿ ಎಂದೇ ಪರಿಣಮಿಸಿದ್ದ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ (Assembly Election Result 2026) ಹೊರಬಿದ್ದಿದೆ. ಈ ಬಾರಿಯ ಫಲಿತಾಂಶದಲ್ಲಿ ಮುಸ್ಲಿಂ ಸಮುದಾಯದ ಶಾಸಕರ ಸಂಖ್ಯಾಬಲಕ್ಕೆ ಸಂಬಂಧಿಸಿದಂತೆ ಕುತೂಹಲಕಾರಿ ಅಂಕಿಅಂಖ್ಯೆಗಳು ಲಭ್ಯವಾಗಿವೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಶಾಸಕರ ಪ್ರಭಾವ ತಗ್ಗಿದರೆ, ಕೇರಳದಲ್ಲಿ ಅವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.
ಬಂಗಾಳ ಮತ್ತು ಅಸ್ಸಾಂನಲ್ಲಿ ಮುಸ್ಲಿಂ ಶಾಸಕರ ಸಂಖ್ಯೆ ಇಳಿಕೆ
ಜಮ್ಮು ಮತ್ತು ಕಾಶ್ಮೀರದ ನಂತರ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಈ ಬಾರಿ ಶಾಸಕರ ಸಂಖ್ಯೆ ಗಮನಾರ್ಹವಾಗಿ ಇಳಿಕೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ (ಒಟ್ಟು 294 ಸ್ಥಾನಗಳು) ಕಳೆದ ಬಾರಿ 42 ಮುಸ್ಲಿಂ ಶಾಸಕರಿದ್ದರೆ, ಈ ಬಾರಿ ಆ ಸಂಖ್ಯೆ 36ಕ್ಕೆ ಕುಸಿದಿದೆ. ಇವರಲ್ಲಿ 31 ಮಂದಿ ಟಿಎಂಸಿಯಿಂದ ಹಾಗೂ 5 ಮಂದಿ ಕಾಂಗ್ರೆಸ್-ಸಿಪಿಎಂ ಮೈತ್ರಿಯಿಂದ ಗೆದ್ದಿದ್ದಾರೆ.
ಅದೇ ರೀತಿ, ಅಸ್ಸಾಂನಲ್ಲಿ (ಒಟ್ಟು 126 ಸ್ಥಾನಗಳು) ಈ ಬಾರಿ 22 ಮುಸ್ಲಿಂ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಅಸ್ಸಾಂ ಮತ್ತು ಬಂಗಾಳದಲ್ಲಿ ಒಟ್ಟಾರೆಯಾಗಿ 15 ಮುಸ್ಲಿಂ ಶಾಸಕರು ಕಡಿಮೆಯಾಗಿದ್ದಾರೆ. ಅಸ್ಸಾಂನಲ್ಲಿ ಕಾಂಗ್ರೆಸ್‌ನಿಂದ 18, ಬದ್ರುದ್ದೀನ್ ಅಜ್ಮಲ್ ಪಕ್ಷದಿಂದ 2 ಹಾಗೂ ಅಖಿಲ್ ಗೋಗೊಯ್ ಪಕ್ಷದಿಂದ ಒಬ್ಬರು ಗೆದ್ದಿದ್ದಾರೆ.
ಕೇರಳ, ತಮಿಳುನಾಡಿನಲ್ಲಿ ಹೇಗಿದೆ ಮುಸ್ಲಿಂ ಶಾಸಕಸ ಸಂಖ್ಯೆ?
ಬಂಗಾಳಕ್ಕೆ ವ್ಯತಿರಿಕ್ತವಾಗಿ ಕೇರಳದಲ್ಲಿ (ಒಟ್ಟು 140 ಸ್ಥಾನಗಳು) ಮುಸ್ಲಿಂ ಶಾಸಕರ ಸಂಖ್ಯೆ 32 ರಿಂದ 35ಕ್ಕೆ ಏರಿಕೆಯಾಗಿದೆ. ಇಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ನಿಂದ ಅತಿ ಹೆಚ್ಚು ಅಂದರೆ 22 ಶಾಸಕರು ಮತ್ತು ಕಾಂಗ್ರೆಸ್‌ನಿಂದ 8 ಶಾಸಕರು ಆಯ್ಕೆಯಾಗಿದ್ದಾರೆ. ತಮಿಳುನಾಡಿನಲ್ಲಿ ಈ ಬಾರಿ ಒಟ್ಟು 9 ಮುಸ್ಲಿಂ ಶಾಸಕರು ವಿಧಾನಸಭೆ ಪ್ರವೇಶಿಸಿದ್ದಾರೆ.
ಕಾಂಗ್ರೆಸ್ ಮೈತ್ರಿಕೂಟದಲ್ಲಿ ಮುಸ್ಲಿಂ ಅಭ್ಯರ್ಥಿಗಳ ಭರ್ಜರಿ ಯಶಸ್ಸು: ಅಂಕಿಅಂಖ್ಯೆಗಳು ಇಲ್ಲಿವೆ
- ಅಸ್ಸಾಂ: ಅಸ್ಸಾಂನಲ್ಲಿ ಕಾಂಗ್ರೆಸ್ ಗೆದ್ದಿರುವ ಒಟ್ಟು 19 ಸ್ಥಾನಗಳ ಪೈಕಿ ಬರೋಬ್ಬರಿ 18 ಸ್ಥಾನಗಳಲ್ಲಿ ಮುಸ್ಲಿಂ ಶಾಸಕರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಕಣಕ್ಕಿಳಿಸಿದ್ದ 20 ಮುಸ್ಲಿಂ ಅಭ್ಯರ್ಥಿಗಳಲ್ಲಿ 18 ಮಂದಿ ಗೆಲುವು ಸಾಧಿಸಿದ್ದಾರೆ. ಆದರೆ, ಕಾಂಗ್ರೆಸ್ ಟಿಕೆಟ್ ನೀಡಿದ್ದ ಇತರ 79 ಮುಸ್ಲಿಮೇತರ ಅಭ್ಯರ್ಥಿಗಳಲ್ಲಿ ಗೆದ್ದಿರುವುದು ಕೇವಲ ಒಬ್ಬರು ಮಾತ್ರ.
- ರಾಯ್ಜೋರ್ ದಳ: ಕಾಂಗ್ರೆಸ್ ಮಿತ್ರಪಕ್ಷವಾದ ರೈಜೋರ್ ದಳ 2 ಸ್ಥಾನಗಳನ್ನು ಗೆದ್ದಿದ್ದು, ಅದರಲ್ಲಿ ಒಬ್ಬರು ಮುಸ್ಲಿಂ ಅಭ್ಯರ್ಥಿ. ಮತ್ತೊಬ್ಬರು ಅಖಿಲ್ ಗೋಗೊಯ್.
- ಕೇರಳ: ಕೇರಳ ವಿಧಾನಸಭೆಯ 140 ಸ್ಥಾನಗಳ ಪೈಕಿ ಈ ಬಾರಿ 35 ಮುಸ್ಲಿಂ ಶಾಸಕರು ಆಯ್ಕೆಯಾಗಿದ್ದಾರೆ. ಇವರಲ್ಲಿ 30 ಶಾಸಕರು ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟದವರು. ಕಾಂಗ್ರೆಸ್‌ನ 8 ಮುಸ್ಲಿಂ ಶಾಸಕರು ಮತ್ತು ಮಿತ್ರಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ (IUML) ಎಲ್ಲಾ 22 ಶಾಸಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
- ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಕೇವಲ 2 ಸ್ಥಾನಗಳನ್ನು ಗೆದ್ದಿದ್ದು, ಇಬ್ಬರೂ ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರಗಳ ಮುಸ್ಲಿಂ ಅಭ್ಯರ್ಥಿಗಳಾಗಿದ್ದಾರೆ. ವಿಶೇಷವೆಂದರೆ, ಟಿಎಂಸಿ (47) ಗಿಂತಲೂ ಹೆಚ್ಚು, ಅಂದರೆ 63 ಮುಸ್ಲಿಂ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು.
- ತಮಿಳುನಾಡು: ತಮಿಳುನಾಡಿನಲ್ಲಿ ಕಾಂಗ್ರೆಸ್ ಇಬ್ಬರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು, ಅವರಲ್ಲಿ ಒಬ್ಬರು ಗೆದ್ದಿದ್ದಾರೆ.
- ಗಮನಾರ್ಹ ಅಂಶ: ಕೇರಳ ಮತ್ತು ಅಸ್ಸಾಂ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಮೈತ್ರಿಕೂಟದಿಂದ ಸ್ಪರ್ಧಿಸಿದ್ದ ಮುಸ್ಲಿಂ ಅಭ್ಯರ್ಥಿಗಳ ಗೆಲುವಿನ ಪ್ರಮಾಣ ಶೇಕಡಾ 80ಕ್ಕಿಂತ ಹೆಚ್ಚಿದೆ.
ಇದನ್ನೂ ಓದಿ: ಮನೆ ಕೆಲಸದಾಕೆ ಈಗ ಪಶ್ಚಿಮ ಬಂಗಾಳದ ಶಾಸಕಿ: ಅತ್ಯಾಚಾರ, ಕೊಲೆ ಸಂತ್ರಸ್ತೆಯ ತಾಯಿಯೂ ಆದ್ರು MLA!
ರಾಷ್ಟ್ರ ಮಟ್ಟದಲ್ಲಿ ಮುಸ್ಲಿಂ ಸಮುದಾಯದ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಈ ಬಾರಿಯ ವಿಧಾನಸಭಾ ಫಲಿತಾಂಶಗಳು ಮಿಶ್ರ ಪ್ರತಿಕ್ರಿಯೆಯನ್ನು ನೀಡಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
