ಕುಲ್ಗಾಮ್, ಆಗಸ್ಟ್ 1: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ನಡೆದ ಉಗ್ರರ ದಾಳಿಯಲ್ಲಿ (Terror Attack) ಛತ್ತೀಸ್‌ಗಢ ಮೂಲದ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಆ ಕಾರ್ಮಿಕರನ್ನು ಜಾತಿ ಮತ್ತು ಸಮುದಾಯದ ಬಗ್ಗೆ ವಿಚಾರಿಸಿದ ನಂತರವೇ ಕೊಂದಿದ್ದಾರೆ ಎಂದು ಅವರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಈ ದಾಳಿಯಲ್ಲಿ ಕೊಲೆಯಾದ ಛತ್ತೀಸ್‌ಗಢದ ಇಬ್ಬರು ಕಾರ್ಮಿಕರಲ್ಲಿ ದೀಪಕ್ ರಾತ್ರೆ ಕೂಡ ಒಬ್ಬರಾಗಿದ್ದಾರೆ. 1 ವರ್ಷದಿಂದ ಜಮ್ಮು-ಕಾಶ್ಮೀರದಲ್ಲಿ ಕೆಲಸ ಮಾಡುತ್ತಿದ್ದ ದೀಪಕ್, ಇಡೀ ಕುಟುಂಬಕ್ಕೆ ಏಕೈಕ ಆಸರೆಯಾಗಿದ್ದರು. ದೀಪಕ್ ಅವರಿಗೆ ಪತ್ನಿ, 4 ತಿಂಗಳ ಮಗು, ವಿಧವೆ ತಾಯಿ ಮತ್ತು ವಿಕಲಚೇತನ ಸಹೋದರನಿದ್ದಾರೆ. ಅವರ ತಂದೆ 10 ವರ್ಷಗಳ ಹಿಂದೆಯೇ ನಿಧನರಾಗಿದ್ದರು. ಈ ದಾಳಿಯಲ್ಲಿ ಛತ್ತೀಸ್‌ಗಢದ ಸಾರಂಗಢ್ ಜಿಲ್ಲೆಯ ಭೂಪೇಂದ್ರ ಎಂಬ ಮತ್ತೊಬ್ಬ ಕಾರ್ಮಿಕನೂ ಮೃತಪಟ್ಟಿದ್ದಾರೆ.
ಮೃತರಾದ ಛತ್ತೀಸ್‌ಗಢ ಮೂಲದ ದೀಪಕ್ ರಾತ್ರೆ ಮತ್ತು ಭೂಪೇಂದ್ರ ಭೈನಾ ಇಬ್ಬರೂ ಕುಲ್ಗಾಮ್‌ನ ಕೆಲಾಮ್ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು. ದೀಪಕ್ ಅವರ ಸಂಬಂಧಿ ಹಲ್ಧರ್ ರಾತ್ರೆ ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಪ್ರಕಾರ, ಉಗ್ರರು ಗುಂಡು ಹಾರಿಸುವ ಮುನ್ನ ಕಾರ್ಮಿಕರ ಜಾತಿ, ಸಮುದಾಯ ಮತ್ತು ಗುರುತನ್ನು ವಿಚಾರಿಸಿದ್ದರು. ಗುರುತು ಖಚಿತಪಡಿಸಿಕೊಂಡ ನಂತರವೇ ಅವರ ಮೇಲೆ ಕ್ರೂರವಾಗಿ ಗುಂಡು ಹಾರಿಸಲಾಗಿದೆ ಎಂದು ಆರೋಪಿಸಿದ್ದಾರೆ. ದೀಪಕ್ ಅವರು ತಮ್ಮ ಕುಟುಂಬಕ್ಕೆ ಏಕೈಕ ಆಸರೆಯಾಗಿದ್ದರು. ಅವರಿಗೆ ಪತ್ನಿ, 4 ತಿಂಗಳ ಮಗು, ವಯಸ್ಸಾದ ತಾಯಿ ಮತ್ತು ವಿಕಲಚೇತನ ಸಹೋದರನಿದ್ದಾರೆ.
ಇದನ್ನೂ ಓದಿ: ಕಾಶ್ಮೀರದ ಕುಲ್ಗಾಮ್‌ನಲ್ಲಿ ಉಗ್ರರ ದಾಳಿ; ಓರ್ವ ಸಾವು, ಒಬ್ಬರ ಸ್ಥಿತಿ ಗಂಭೀರ
ಸರ್ಕಾರದಿಂದ ಪರಿಹಾರ ಘೋಷಣೆ:
ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯ್ ಈ ದಾಳಿಯನ್ನು ಖಂಡಿಸಿದ್ದು, ಮೃತದೇಹಗಳನ್ನು ಸ್ವಗ್ರಾಮಕ್ಕೆ ತರಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಘಟನೆಯ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಉಗ್ರರ ಪತ್ತೆಗೆ ವ್ಯಾಪಕ ಶೋಧ ಕಾರ್ಯ ಮತ್ತು ಉನ್ನತ ಮಟ್ಟದ ಭದ್ರತಾ ಪರಿಶೀಲನೆ ಆರಂಭಿಸಿವೆ.
ಅನಂತನಾಗ್‌ನಲ್ಲಿ ಅಮರನಾಥ ಯಾತ್ರೆಯ ಭದ್ರತಾ ಕರ್ತವ್ಯದಲ್ಲಿದ್ದ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಆಶಿಕ್ ಹುಸೇನ್ ಖುರೇಷಿ ಅವರನ್ನು ಉಗ್ರರು ಕೊಂದ ಕೆಲವೇ ದಿನಗಳಲ್ಲಿ ಈ ದಾಳಿ ನಡೆದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
