ಪಾಕಿಸ್ತಾನದ ಬಿಕ್ಕಟ್ಟಿಗೆ ಅಲ್ಲಿನ ಮಿಲಿಟರಿ ಕಾರಣವೇ ವಿನಃ ಭಾರತವಲ್ಲ; ಸಿಂಗಾಪುರದ ಮಾಜಿ ರಾಯಭಾರಿ ವ್ಯಂಗ್ಯ – Kannada News | Pakistan Crisis Stems From Its own Military Not India says ex Singapore envoy Kausikan

ಸಿಂಗಾಪುರ, ಜುಲೈ 3: ಪಾಕಿಸ್ತಾನದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟುಗಳಿಗೆ ಅಲ್ಲಿನ ಮಿಲಿಟರಿ ಮತ್ತು ರಾಜಕೀಯ ನಾಯಕತ್ವವೇ ನೇರ ಹೊಣೆ ಎಂದು ಸಿಂಗಾಪುರದ ಮಾಜಿ ರಾಯಭಾರಿ ಬಿಲಹರಿ ಕೌಶಿಕನ್ ತರಾಟೆಗೆ ತೆಗೆದುಕೊಂಡಿದ್ದಾರೆ. ಪಾಕಿಸ್ತಾನದ (Pakistan) ಇಂದಿನ ದುಸ್ಥಿತಿಯು ಅದರ ಸ್ವಯಂಕೃತ ಅಪರಾಧವೇ ಹೊರತು, ಭಾರತ ಅಥವಾ ಅಫ್ಘಾನಿಸ್ತಾನದೊಂದಿಗಿನ ಉದ್ವಿಗ್ನತೆಯಿಂದ ಉಂಟಾದದ್ದಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ಸಮ್ಮೇಳನವೊಂದರಲ್ಲಿ ಮಾತನಾಡಿದ ಕೌಶಿಕನ್, ಇತ್ತೀಚಿನ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸುವ ಮೂಲಕ ಪಾಕಿಸ್ತಾನವು ಪಡೆದಿರುವ ರಾಜತಾಂತ್ರಿಕ ಯಶಸ್ಸು, ಅಲ್ಲಿನ ಹದಗೆಡುತ್ತಿರುವ ಆರ್ಥಿಕತೆ ಮತ್ತು ಆಡಳಿತಾತ್ಮಕ ಸವಾಲುಗಳನ್ನು ಎದುರಿಸಲು ಯಾವುದೇ ರೀತಿಯಲ್ಲೂ ಸಹಾಯ ಮಾಡುವುದಿಲ್ಲ ಎಂದು ಮುಕ್ತವಾಗಿ ಹೇಳಿದ್ದಾರೆ.

ಪಾಕಿಸ್ತಾನದ ಸಮಸ್ಯೆ ಭಾರತ ಅಥವಾ ಅಫ್ಘಾನಿಸ್ತಾನವಲ್ಲ:

ಚರ್ಚೆಯ ಸಂದರ್ಭದಲ್ಲಿ, ಪಾಕಿಸ್ತಾನಿ ಪತ್ರಕರ್ತರೊಬ್ಬರು ಪಾಕಿಸ್ತಾನ ಎದುರಿಸುತ್ತಿರುವ ಸವಾಲುಗಳು ಹೆಚ್ಚಾಗಿ ಅದರ ಭೌಗೋಳಿಕ ಸ್ಥಳ ಮತ್ತು ನೆರೆದೇಶಗಳಾದ ಭಾರತ ಹಾಗೂ ಅಫ್ಘಾನಿಸ್ತಾನದೊಂದಿಗಿನ ಅನಾರೋಗ್ಯಕರ ಸಂಬಂಧಗಳಿಗೆ ಸಂಬಂಧಿಸಿವೆ ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದರು. ಆದರೆ, ಈ ವಾದವನ್ನು ತಕ್ಷಣವೇ ತಿರಸ್ಕರಿಸಿದ ಕೌಶಿಕನ್, ಪಾಕಿಸ್ತಾನದ ಸಮಸ್ಯೆಗಳು ಅದರ ನೆರೆಹೊರೆಯವರಿಂದ ಬಂದಿದ್ದಲ್ಲ, ಬದಲಿಗೆ ಅದರದೇ ಆದ ಆಡಳಿತ ವೈಫಲ್ಯದಿಂದ ಹುಟ್ಟಿಕೊಂಡಿದ್ದು ಎಂದರು.

ಇದನ್ನೂ ಓದಿ: ಭಾರತ-ಪಾಕ್ ಕೈದಿಗಳ ಪಟ್ಟಿ ವಿನಿಮಯ: 188 ಭಾರತೀಯರ ತಕ್ಷಣದ ಬಿಡುಗಡೆಗೆ ಪಾಕಿಸ್ತಾನಕ್ಕೆ ಭಾರತ ಒತ್ತಾಯ

ಕಳಪೆ ಆಡಳಿತ ಮತ್ತು ರಾಷ್ಟ್ರೀಯ ಆಂತರಿಕ ವ್ಯವಹಾರಗಳಲ್ಲಿ ಮಿಲಿಟರಿಯ ಅತಿಯಾದ ಹಸ್ತಕ್ಷೇಪವೇ ಪಾಕಿಸ್ತಾನದ ದೀರ್ಘಕಾಲದ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಮೂಲ ಕಾರಣ ಎಂದು ಕೌಶಿಕನ್ ದೂಷಿಸಿದರು. “ಪಾಕಿಸ್ತಾನವನ್ನು ಮೊದಲಿನಿಂದಲೂ ಅತ್ಯಂತ ಭೀಕರವಾಗಿ ಅಸಮರ್ಪಕವಾಗಿ ನಿರ್ವಹಣೆ ಮಾಡಲಾಗಿದೆ. ಇದಕ್ಕೆ ಯಾವುದೇ ಪರಿಹಾರ ನನಗೆ ಕಾಣಿಸುತ್ತಿಲ್ಲ. ಯಾವುದೇ ಪಕ್ಷ ಇರಲಿ, ಅಲ್ಲಿನ ರಾಜಕಾರಣಿಗಳು ಕೇವಲ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಪಾಕಿಸ್ತಾನದಲ್ಲಿನ ಮಿಲಿಟರಿ ವ್ಯವಸ್ಥೆಯು ಈ ಸಮಸ್ಯೆಯ ಬಹುದೊಡ್ಡ ಭಾಗವಾಗಿದೆ” ಎಂದು ಅವರು ವಿವರಿಸಿದರು.

ರಾಜತಾಂತ್ರಿಕ ಯಶಸ್ಸು ದೇಶದ ಜನರಿಗೆ ಅನ್ನ ನೀಡುವುದಿಲ್ಲ:

ಇತ್ತೀಚಿನ ಅಮೆರಿಕ-ಇರಾನ್ ಸಂಘರ್ಷದಲ್ಲಿ ಮಧ್ಯಂತರ ಶಾಂತಿ ಒಪ್ಪಂದ ಏರ್ಪಡುವಂತೆ ಮಧ್ಯಸ್ಥಿಕೆ ವಹಿಸುವ ಮೂಲಕ ಪಾಕಿಸ್ತಾನವು ಜಾಗತಿಕ ಮಟ್ಟದಲ್ಲಿ ತನ್ನ ಇಮೇಜ್ ಅನ್ನು ಸ್ವಲ್ಪಮಟ್ಟಿಗೆ ಸುಧಾರಿಸಿಕೊಂಡಿರಬಹುದು. ಆದರೆ ಈ ಸಾಧನೆಯು ಸಾಮಾನ್ಯ ಪಾಕಿಸ್ತಾನಿಗಳ ಜೀವನವನ್ನು ಉತ್ತಮಗೊಳಿಸುವುದಿಲ್ಲ ಎಂದು ಮಾಜಿ ರಾಯಭಾರಿ ಕೌಶಿಕನ್ ನೆನಪಿಸಿದರು.

“ರಾಜತಾಂತ್ರಿಕ ಅವಕಾಶದ ಲಾಭವನ್ನು ಪಡೆದುಕೊಳ್ಳುವಲ್ಲಿ ಪಾಕಿಸ್ತಾನವು ಅತ್ಯಂತ ಚುರುಕಾಗಿ ಮತ್ತು ಯಶಸ್ವಿಯಾಗಿ ಕಾರ್ಯನಿರ್ವಹಿಸಿತು. ಇದು ಅಮೆರಿಕದ ದೃಷ್ಟಿಯಲ್ಲಿ ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಮರುಸ್ಥಾಪಿಸಲು ಸ್ವಲ್ಪಮಟ್ಟಿಗೆ ಸಹಾಯ ಮಾಡಿದೆ ಎಂಬುದು ನಿಜ. ಆದರೆ, ನೆನಪಿಡಿ, ಆ ಯಶಸ್ಸು ಪಾಕಿಸ್ತಾನದ ಜನರಿಗೆ ಅನ್ನ ನೀಡುವುದಿಲ್ಲ” ಎಂದು ಪಾಕಿಸ್ತಾನದ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಉಲ್ಲೇಖಿಸಿ ಅವರು ವ್ಯಂಗ್ಯವಾಡಿದರು.

ಇದನ್ನೂ ಓದಿ: ಭಾರತದ ಜಲ ದಿಗ್ಬಂಧನಕ್ಕೆ ಕಂಗೆಟ್ಟು ಚೀನಾ ಸಹಾಯ ಕೋರಿದ ಪಾಕಿಸ್ತಾನ

ಪಾಕಿಸ್ತಾನವು ತನ್ನ ಇತಿಹಾಸದ ಅರ್ಧದಷ್ಟು ಅವಧಿಯನ್ನು ನೇರವಾಗಿ ಮಿಲಿಟರಿ ಆಡಳಿತದಲ್ಲೇ ಕಳೆದಿದೆ. ನಾಗರಿಕ ಸರ್ಕಾರದ ಅವಧಿಯಲ್ಲೂ ಮಿಲಿಟರಿಯ ನೆರಳು ಆಡಳಿತದ ಮೇಲಿರುತ್ತದೆ ಎಂಬುದು ಜಗತ್ತಿಗೆ ತಿಳಿದಿರುವ ವಿಚಾರವಾಗಿದೆ. ಆ ಮಿಲಿಟರಿಯಿಂದಲೇ ಇದೀಗ ಪಾಕಿಸ್ತಾನ ಪತನದ ಅಂಚಿಗೆ ತಲುಪಿದೆ ಎಂದು ಕೌಶಿಕನ್ ಟೀಕಿಸಿದ್ದಾರೆ.

ಪತನದ ಅಂಚಿನಲ್ಲಿ ತತ್ತರಿಸುತ್ತಿರುವ ದೇಶ:

ಮುಂದಿನ ಐದು ವರ್ಷಗಳಲ್ಲಿ ಪಾಕಿಸ್ತಾನದ ಭವಿಷ್ಯ ಏನಾಗಬಹುದು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಷ್ಯಾ ಮತ್ತು ಫಿನ್ಲ್ಯಾಂಡ್‌ಗೂ ಸಿಂಗಾಪುರದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದ ಕೌಶಿಕನ್, “ಪಾಕಿಸ್ತಾನ ಪತನದ ಅಂಚಿನಲ್ಲಿ ತತ್ತರಿಸುತ್ತಿರುವ ದೇಶ” ಎಂದು ವ್ಯಾಖ್ಯಾನಿಸಿದರು. ಇತ್ತೀಚಿನ ರಾಜತಾಂತ್ರಿಕ ಯಶಸ್ಸುಗಳು ದೇಶದ ಮೂಲಭೂತ ರಚನಾತ್ಮಕ ಸಮಸ್ಯೆಗಳನ್ನು ಬದಲಾಯಿಸುವುದಿಲ್ಲ ಅಥವಾ ಅಮೆರಿಕದೊಂದಿಗಿನ ಅದರ ಸಂಬಂಧವನ್ನು ದೀರ್ಘಾವಧಿಯಲ್ಲಿ ಸಂಪೂರ್ಣವಾಗಿ ಸುಧಾರಿಸುವುದಿಲ್ಲ ಎಂದು ಅವರು ಹೇಳಿದರು. ಅಮೆರಿಕವು ಪಾಕಿಸ್ತಾನದ ಮೇಲಿರುವ ಎಲ್ಲಾ ನಿರ್ಬಂಧಗಳನ್ನು ಸದ್ಯಕ್ಕಂತೂ ತೆಗೆದುಹಾಕುವುದಿಲ್ಲ ಎಂದರು.

“ಪಾಕಿಸ್ತಾನದ ಬಳಿ ಅಣ್ವಸ್ತ್ರಗಳು ಇರುವುದರಿಂದ ಎಲ್ಲರೂ ಇದರ ಬಗ್ಗೆ ಚಿಂತಿತರಾಗಿದ್ದಾರೆ. ಅವರ ಬಳಿ ಅಣ್ವಸ್ತ್ರಗಳೇ ಇಲ್ಲದಿದ್ದರೆ, ಯಾರೂ ಪಾಕಿಸ್ತಾನವನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ” ಎಂದು ಕೌಶಿಕನ್ ಮಾರ್ಮಿಕವಾಗಿ ಹೇಳಿದ್ದಾರೆ.

ಸಾಲದ ಸುಳಿ ಮತ್ತು ತೀವ್ರ ಆಹಾರ ಬಿಕ್ಕಟ್ಟು:

ಪಾಕಿಸ್ತಾನವು ಪ್ರಸ್ತುತ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಲೇ ಇದ್ದು, ತನ್ನ ಸಾಲಗಳನ್ನು ನಿರ್ವಹಿಸಲು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತು ವಿಶ್ವ ಬ್ಯಾಂಕ್‌ನಂತಹ ಸಂಸ್ಥೆಗಳ ಆರ್ಥಿಕ ಸಹಾಯ ಮತ್ತು ಬೇಲ್‌ಔಟ್‌ಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಪಾಕಿಸ್ತಾನದ ಪ್ರಸಿದ್ಧ ‘ಡಾನ್’ (The Dawn) ಪತ್ರಿಕೆಯ ಇತ್ತೀಚಿನ ವರದಿಯ ಪ್ರಕಾರ, ಪ್ರಸ್ತುತ ವಿಶ್ವದಲ್ಲೇ ಅತ್ಯಂತ ತೀವ್ರವಾದ ಆಹಾರ ಬಿಕ್ಕಟ್ಟನ್ನು ಎದುರಿಸುತ್ತಿರುವ ಮೊದಲ 10 ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನವೂ ಸ್ಥಾನ ಪಡೆದಿದೆ ಎಂಬುದು ಅಲ್ಲಿನ ದಯನೀಯ ಸ್ಥಿತಿಗೆ ಸಾಕ್ಷಿಯಾಗಿದೆ.

ಕೌಶಿಕನ್ ಅವರು ಹಿರಿಯ ರಾಜತಾಂತ್ರಿಕರಾಗಿದ್ದು, ಈ ಹಿಂದೆ 2010ರಿಂದ 2013ರವರೆಗೆ ಸಿಂಗಾಪುರದ ವಿದೇಶಾಂಗ ವ್ಯವಹಾರಗಳ ಖಾಯಂ ಕಾರ್ಯದರ್ಶಿಯಾಗಿ ಮತ್ತು ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಾಪುರದ ಸ್ವಾಯತ್ತ ಸಂಸ್ಥೆಯಾದ ಮಿಡಲ್ ಈಸ್ಟ್ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *