ಪಾಕಿಸ್ತಾನ್ ತಂಡದ WTC ಫೈನಲ್ ಕನಸು ನುಚ್ಚು ನೂರು! – Kannada News | Pakistan Officially OUT of WTC Final Race

ಕೇವಲ 5 ಪಂದ್ಯಗಳಲ್ಲೇ ಪಾಕಿಸ್ತಾನ್ ತಂಡವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಿಂದ ಹೊರಬಿದ್ದಿದೆ. ಇನ್ನು 8 ಪಂದ್ಯಗಳು ಬಾಕಿ ಉಳಿದಿದ್ದರೂ, ಪಾಕ್ ಪಡೆಗೆ ಫೈನಲ್‌ಗೇರಲು ಸಾಧ್ಯವಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ತಂಡದ ಕಳಪೆ ಪ್ರದರ್ಶನ ಹಾಗೂ ಐಸಿಸಿ ವಿಧಿಸಿದ ಭಾರಿ ಪೆನಾಲ್ಟಿ!

ಬಾಂಗ್ಲಾ ವಿರುದ್ಧ ಮುಖಭಂಗ!

ಮೇ 2026 ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ, ಆತಿಥೇಯ ಬಾಂಗ್ಲಾದೇಶ್ ತಂಡವು ಪ್ರವಾಸಿ ಪಾಕಿಸ್ತಾನವನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿ ಐತಿಹಾಸಿಕ ಸಾಧನೆ ಮಾಡಿತು. ಢಾಕಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 104 ರನ್‌ಗಳ ಭಾರಿ ಜಯ ದಾಖಲಿಸಿದ್ದ ಬಾಂಗ್ಲಾದೇಶ್, ಇಡೀ ಸರಣಿಯುದ್ದಕ್ಕೂ ಪಾಕಿಸ್ತಾನದ ಮೇಲೆ ಸಂಪೂರ್ಣ ಮೇಲುಗೈ ಸಾಧಿಸಿತ್ತು. ಬಾಂಗ್ಲಾ ನೆಲದಲ್ಲಿ ಪಾಕಿಸ್ತಾನ್ ಅನುಭವಿಸಿದ ಈ ಹೀನಾಯ ಸರಣಿ ಸೋಲು, ಅದರ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.

‘ಸ್ಲೋ ಓವರ್ ರೇಟ್’ ಶಿಕ್ಷೆ:

ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನಿಗದಿಗಿಂತ 8 ಓವರ್‌ಗಳನ್ನು ಕಡಿಮೆ ಬೌಲಿಂಗ್ ಮಾಡಿದ ಕಾರಣಕ್ಕಾಗಿ, ಐಸಿಸಿ ಮ್ಯಾಚ್ ರೆಫ್ರಿ ಜೆಫ್ ಕ್ರೋ ಪಾಕಿಸ್ತಾನ್ ತಂಡಕ್ಕೆ ಭಾರಿ ದಂಡ ವಿಧಿಸಿದರು. ತಂಡದ ಆಟಗಾರರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ. 40 ರಷ್ಟು ದಂಡ ವಿಧಿಸುವುದರ ಜೊತೆಗೆ, ಅಂಕಪಟ್ಟಿಯಲ್ಲಿದ್ದ ಪ್ರಮುಖ 8 WTC ಅಂಕಗಳನ್ನು ಕಡಿತಗೊಳಿಸಲಾಯಿತು. ಈ ಅಂಕಗಳ ಕಡಿತವು ಪಾಕಿಸ್ತಾನ್ ತಂಡದ ಪಾಲಿಗೆ ಮುಳುವಾಯಿತು.

ಮಕಾಡೆ ಮಲಗಿಸಿದ ವಿಂಡೀಸ್:

ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಪಾಕಿಸ್ತಾನ್, ಮೊದಲ ಟೆಸ್ಟ್ ಪಂದ್ಯದಲ್ಲಿ 90 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ವೆಸ್ಟ್ ಇಂಡೀಸ್ ನೀಡಿದ 211 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಬಾಬರ್ ಆಝಂ ಪಡೆ ಕೇವಲ 120 ರನ್‌ಗಳಿಗೆ ಆಲೌಟ್ ಆಯಿತು. ಈ ಹೀನಾಯ ಸೋಲಿನೊಂದಿಗೆ ಪಾಕಿಸ್ತಾನ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.

ಪಾಕ್ ಪಡೆಗೆ 4 ಸೋಲು:

ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಸರಣಿಯಲ್ಲಿ ಪಾಕಿಸ್ತಾನ್ ತಂಡವು ಈವರೆಗೆ 5 ಪಂದ್ಯಗಳನ್ನಾಡಿದೆ. ಈ ಐದು ಮ್ಯಾಚ್​ಗಳಲ್ಲಿ ಸೌತ್ ಆಫ್ರಿಕಾ ವಿರುದ್ಧ ಒಂದು ಪಂದ್ಯ ಮಾತ್ರ ಗೆದ್ದಿದೆ. ಇನ್ನುಳಿದ 4 ಪಂದ್ಯಗಳಲ್ಲೂ ಹೀನಾಯವಾಗಿ ಸೋತಿರುವ ಕಾರಣ ಇದೀಗ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

WTC ಅಂಕಪಟ್ಟಿ 2026:

ಸ್ಥಾನ ತಂಡ ಪಂದ್ಯ ಗೆಲುವು ಸೋಲು ಡ್ರಾ ದಂಡ (ಪಾಯಿಂಟ್ಸ್​)  ಒಟ್ಟು ಪಾಯಿಂಟ್ಸ್ PCT (%)
1 ಆಸ್ಟ್ರೇಲಿಯಾ 8 7 1 0 0 84 87.50
2 ಸೌತ್ ಆಫ್ರಿಕಾ 4 3 1 0 0 36 75.00
3 ನ್ಯೂಝಿಲೆಂಡ್ 6 4 1 1 12 52 72.22
4 ಬಾಂಗ್ಲಾದೇಶ್ 4 2 1 1 0 28 58.33
5 ಭಾರತ 9 4 4 1 0 52 48.15
6 ಶ್ರೀಲಂಕಾ 4 1 1 2 0 20 41.67
7 ಇಂಗ್ಲೆಂಡ್ 13 4 8 1 14 38 24.36
8 ವೆಸ್ಟ್ ಇಂಡೀಸ್ 11 2 7 2 2 30 22.73
9 ಪಾಕಿಸ್ತಾನ್ 5 1 4 0 8 4 6.67

ಫೈನಲ್​ಗೇರಲು ಸಾಧ್ಯವಿಲ್ಲ!

ಐಸಿಸಿ ನಿಯಮಗಳ ಪ್ರಕಾರ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಲೀಗ್ ಹಂತದ ಮುಕ್ತಾಯದ ವೇಳೆಗೆ ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಲಂಡನ್‌ನ ಓವಲ್ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯುತ್ತವೆ.

ಪಾಕಿಸ್ತಾನ್ ತಂಡವು ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಹಾಗೂ ಇಂಗ್ಲೆಂಡ್ ವಿರುದ್ಧದ ಎಲ್ಲಾ ಪಂದ್ಯಗಳನ್ನು ಬೃಹತ್ ಅಂತರದಿಂದ ಗೆದ್ದರೂ ಸಹ, ಅದರ ಗರಿಷ್ಠ ಗೆಲುವಿನ ಶೇಕಡಾವಾರು (PCT) ಅಗ್ರ ಎರಡು ತಂಡಗಳನ್ನು ಹಿಂದಿಕ್ಕಲು ಸಾಧ್ಯವಿಲ್ಲ.

  • ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಸ್ಥಾನಗಳನ್ನು ಒಟ್ಟು ಪಾಯಿಂಟ್‌ಗಳಿಗಿಂತ PCT (Points Percentage) ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
  • ಪಾಕಿಸ್ತಾನ ಈ ಇಡೀ WTC (2025-27) ಸೈಕಲ್‌ನಲ್ಲಿ ಆಡಬೇಕಿರುವುದು ಒಟ್ಟು 13 ಪಂದ್ಯಗಳನ್ನು ಮಾತ್ರ.
  • ಒಟ್ಟು 13 ಪಂದ್ಯಗಳಿಂದ ಅವರಿಗೆ ಸಿಗಬಹುದಾದ ಗರಿಷ್ಠ ಲಭ್ಯವಿರುವ ಪಾಯಿಂಟ್‌ಗಳು 156.
  • ಪಾಕಿಸ್ತಾನ್ ತಂಡ ಈಗಾಗಲೇ 4 ಪಂದ್ಯಗಳಲ್ಲಿ ಸೋತಿದೆ. ಹಾಗೆಯೇ ಸ್ಲೋ ಓವರ್ ರೇಟ್‌ಗಾಗಿ 8 ಪೆನಾಲ್ಟಿ ಪಾಯಿಂಟ್‌ಗಳ ಕಳೆದುಕೊಂಡಿದೆ.
  • ಪ್ರಸ್ತುತ ಪಾಕಿಸ್ತಾನ್ ತಂಡದ ಒಟ್ಟು ಅಂಕಗಳು ಕೇವಲ 4  ಮಾತ್ರ.
  • ಇನ್ನುಳಿದ 8 ಪಂದ್ಯಗಳನ್ನು ಗೆದ್ದರೆ ಅವರಿಗೆ ಸಿಗುವುದು 96 ಪಾಯಿಂಟ್‌ಗಳು (8 x 12).

PCT ಲೆಕ್ಕಾಚಾರ:

ಪಾಕಿಸ್ತಾನ್ ತಂಡವು ಇನ್ನುಳಿದ 8 ಮ್ಯಾಚ್​ಗಳಲ್ಲಿ ಗೆದ್ದರೆ ಆಗ ಅವರ ಒಟ್ಟು ಪಾಯಿಂಟ್ಸ್ 100 ಆಗುತ್ತದೆ (4 + 96). ಇದರ ಪ್ರಕಾರ ಅವರ ಗರಿಷ್ಠ PCT 64.10% ಮಾತ್ರ ತಲುಪಲು ಸಾಧ್ಯ. ಅಂದರೆ 64.10%  ಶೇಕಡಾವಾರು ಅಂಕಗಳೊಂದಿಗೆ ಟಾಪ್-2 ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗುವುದಿಲ್ಲ.

ಏಕೆಂದರೆ ಆಸ್ಟ್ರೇಲಿಯಾ ತಂಡವು ಈಗಾಗಲೇ 87.50% PCT ನೊಂದಿಗೆ ಅತ್ಯಂತ ಬಲಿಷ್ಠ ಸ್ಥಾನದಲ್ಲಿದೆ. ಇನ್ನು ಸೌತ್ ಆಫ್ರಿಕಾ 75.00% PCT ನೊಂದಿಗೆ ಎರಡನೇ ಸ್ಥಾನದಲ್ಲಿದೆ.

ಇಲ್ಲಿ ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡಗಳು ಮುಂದಿನ ಸರಣಿಗಳ ಮೂಲಕ ಈ ರೇಟಿಂಗ್ ಅನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಅವಕಾಶ ಹೊಂದಿದ್ದಾರೆ.

ಇದರ ಜೊತೆಗೆ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳಿಗೂ ಮುಂದಿನ ಸರಣಿಗಳ ಮೂಲಕ 65% ಕ್ಕಿಂತ ಹೆಚ್ಚಿನ PCT ಪಡೆಯುವ ಅವಕಾಶವಿದೆ.

ಇದನ್ನೂ ಓದಿ: ಅಬ್ಬರ ಸಿಡಿಲಬ್ಬರ… ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿದ ಸ್ಮೃತಿ ಮಂಧಾನ!

ಹೀಗಾಗಿ, ಪಾಕಿಸ್ತಾನ ತಂಡವು ಮುಂಬರುವ ತನ್ನೆಲ್ಲಾ 8 ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ ಗೆದ್ದರೂ ಸಹ, ಅದರ ಗರಿಷ್ಠ ಗೆಲುವಿನ ಶೇಕಡಾವಾರು (PCT) 64.10% ಅನ್ನು ಮಾತ್ರ ತಲುಪಲು ಸಾಧ್ಯ. ಆದರೆ, ಪ್ರಸ್ತುತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಗಳಲ್ಲಿರುವ ಆಸ್ಟ್ರೇಲಿಯಾ (87.50%) ಮತ್ತು ಸೌತ್ ಆಫ್ರಿಕಾ (75%) ತಂಡಗಳ ಸದ್ಯದ ಶೇಕಡಾವಾರನ್ನು ಹಿಂದಿಕ್ಕಲು ಇದು ಸಾಕಾಗುವುದಿಲ್ಲ. ಈ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಪಾಕಿಸ್ತಾನ್ ತಂಡವು ಅಧಿಕೃತವಾಗಿ ಫೈನಲ್ ರೇಸ್‌ನಿಂದ ಹೊರಬಿದ್ದಿದೆ.

Source link

Leave a Reply

Your email address will not be published. Required fields are marked *