ಪಾಕ್, ಐಸಿಸ್ ಜೊತೆ ನಂಟುImage Credit source: tv9 kannada
ಕಲಬುರಗಿ, ಆಗಸ್ಟ್ 13: ಪಾಕಿಸ್ತಾನ ಹಾಗೂ ಉಗ್ರ ಸಂಘಟನೆ ಐಸಿಸ್ (ISIS) ಜೊತೆ ನಿರಂತರ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ಇಬ್ಬರು ಶಂಕಿತರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ATS) ವಶಕ್ಕೆ ಪಡೆದುಕೊಂಡಿದೆ. ಕೇಂದ್ರ ಗುಪ್ತಚರ ಇಲಾಖೆ ನೀಡಿದ ನಿಖರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಎಟಿಎಸ್ ತಂಡ, ಕಲಬುರಗಿ ತಾಲೂಕಿನ ಮಾಲಗತ್ತಿ ಹಾಗೂ ಉಪಳಾಂವ್ ಗ್ರಾಮದ ಹೊರವಲಯದಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಉತ್ತರ ಪ್ರದೇಶ ಮೂಲದ ಇಬ್ಬರು ವಶಕ್ಕೆ
ಎಟಿಎಸ್ ತಂಡ ವಶಕ್ಕೆ ಪಡೆದಿರುವ ಆರೋಪಿಗಳನ್ನು ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಸಮೀರ್ ಮತ್ತು ಸಲ್ಮಾನ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಮಾಂಸ (ಬೀಫ್) ರಫ್ತು ಮಾಡುವ ಫೇರ್ ಎಕ್ಸ್ ಪೋರ್ಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪಾಕ್ ಸಂಘಟನೆಗಳ ಜೊತೆ ನಂಟು, ದಾವಣಗೆರೆಯಲ್ಲಿ ಮತ್ತೋರ್ವ ಶಂಕಿತ ಉಗ್ರ ಅರೆಸ್ಟ್!
ಆರೋಪಿಗಳು ವಾಟ್ಸಾಪ್ ಕರೆಗಳು ಹಾಗೂ ಫೇಸ್‌ಬುಕ್ ಮೂಲಕ ಪಾಕಿಸ್ತಾನ ಮತ್ತು ಐಸಿಸ್ ಜೊತೆ ನಿರಂತರ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಎಟಿಎಸ್ ತಂಡ ದಾಳಿ ನಡೆಸಿದ ಸಂದರ್ಭದಲ್ಲಿ ಆರೋಪಿ ಸಮೀರ್ ಉಳಿದುಕೊಂಡಿದ್ದ ಕೊಠಡಿಯಲ್ಲಿ ಕೆಲವು ಮ್ಯಾಪ್‌ಗಳು ಪತ್ತೆಯಾಗಿವೆ.
ಸದ್ಯ ಇಬ್ಬರು ಆರೋಪಿಗಳನ್ನು ಕಲಬುರಗಿಯ ಅಜ್ಞಾತ ಸ್ಥಳದಲ್ಲಿಟ್ಟು ಉತ್ತರ ಪ್ರದೇಶ ಎಟಿಎಸ್ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಕಲಬುರಗಿಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ಸಿಕ್ಕಿದ್ದು ಹೇಗೆ?
ಪೊಲೀಸ್ ಮೂಲಗಳ ಪ್ರಕಾರ, ಅಂತಾರಾಜ್ಯ ಸೋಷಿಯಲ್ ಮೀಡಿಯಾ ಮಾನಿಟಿರಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಸಾಮಾಜಿಕ ಜಾಲತಾಣದ ಖಾತೆಗಳ ಮೇಲೆ ಕಳೆದ ಕೆಲವು ದಿನಗಳಿಂದ ಸತತ ನಿಗಾ ಇಡಲಾಗಿತ್ತು. ಪಾಕಿಸ್ತಾನದ ವ್ಯಕ್ತಿಗಳು ನಿರ್ವಹಿಸುತ್ತಿದ್ದ ಫೇಸ್‌ಬುಕ್ ಪೇಜ್ ಹಾಗೂ ಇತರೆ ದೇಶವಿರೋಧಿ ಜಾಲತಾಣಗಳ ಜೊತೆ ಸಮೀರ್ ನಿರಂತರ ಸಂಪರ್ಕದಲ್ಲಿದ್ದ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ಇದರ ಆಧಾರದ ಮೇಲೆ ಕಲಬುರಗಿ ಪೊಲೀಸರು ಮತ್ತು ಉತ್ತರ ಪ್ರದೇಶದ ಎಟಿಎಸ್ ತಂಡ ಜಂಟಿಯಾಗಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಂಬ್ ಸ್ಫೋಟಕ್ಕೆ ಸ್ಕೆಚ್: ದಾವಣಗೆರೆಯಲ್ಲಿ ಪೊಲೀಸರ ಕೈಗೆ ಸಿಕ್ಕ ಶಂಕಿತ ಉಗ್ರನಿಂದ ಸ್ಫೋಟಕ ಮಾಹಿತಿ
ಸದ್ಯ ಎಟಿಎಸ್ ಅಧಿಕಾರಿಗಳು ಸಮೀರ್‌ನನ್ನು ವಿಚಾರಣೆ ನಡೆಸಿದ್ದು, ಆತ ಯಾವೆಲ್ಲಾ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದ ಮತ್ತು ಈ ಜಾಲದಲ್ಲಿ ಇನ್ಯಾರಿದ್ದಾರೆ ಎಂಬ ಬಗ್ಗೆ ಆಳವಾದ ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 3:58 pm, Thu, 13 August 26
