ಪಾಕಿಸ್ತಾನ ಸೇನೆಗೆ ಆಘಾತ: ಮಿಲಿಟರಿ ಬೆಂಗಾವಲು ಪಡೆ ಮೇಲೆ ಪ್ರತ್ಯೇಕತಾವಾದಿಗಳ ದಾಳಿ, 45 ಸೈನಿಕರು ಸಾವು – Kannada News | Balochistan Attack: BLA Claims 45 plus Pakistani Soldiers Killed in Mastung Convoy Ambush

ಬಲೂಚಿಸ್ತಾನ, ಜುಲೈ 17: ಪಾಕಿಸ್ತಾನ(Pakistan)ದ ಬಲೂಚಿಸ್ತಾನದ ಮಸ್ತುಂಗ್ ಜಿಲ್ಲೆಯಲ್ಲಿ ಪಾಕಿಸ್ತಾನಿ ಮಿಲಿಟರಿ ಬೆಂಗಾವಲು ಪಡೆಯ ಮೇಲೆ ಭೀಕರ ಶಸ್ತ್ರಸಜ್ಜಿತ ದಾಳಿ ನಡೆದಿದೆ. ನಿಷೇಧಿತ ಬಲೂಚ್ ಲಿಬರೇಶನ್ ಆರ್ಮಿ (BLA) ಉಗ್ರಗಾಮಿ ಸಂಘಟನೆಯು ಈ ಸಂಘಟಿತ ದಾಳಿಯ ಹೊಣೆ ಹೊತ್ತುಕೊಂಡಿದ್ದು, ತನ್ನ ಗಣ್ಯ ‘ಫತಾಹ್ ಸ್ಕ್ವಾಡ್’ ನಡೆಸಿದ ಕಾರ್ಯಾಚರಣೆಯಲ್ಲಿ ಬರೋಬ್ಬರಿ 45 ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ .

ಖಾದ್ ಕೂಚಾ ಎಂಬ ಪ್ರದೇಶದ ಹೆದ್ದಾರಿಯಲ್ಲಿ ರಜೆಯಲ್ಲಿದ್ದ ಮಿಲಿಟರಿ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ಬಸ್‌ಗಳನ್ನು ಗುರಿಯಾಗಿಸಿಕೊಂಡು ಡಜನ್‌ಗಟ್ಟಲೆ ಶಸ್ತ್ರಸಜ್ಜಿತ ಪ್ರತ್ಯೇಕತಾವಾದಿಗಳು ಈ ಹೊಂಚುದಾಳಿ ನಡೆಸಿದ್ದಾರೆ.

ಹೆದ್ದಾರಿಯಲ್ಲಿ ರಕ್ತಪಾತ: ಕೋಚ್‌ಗೆ ಬೆಂಕಿ
ಸ್ಥಳೀಯ ಮೂಲಗಳು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ದಾಳಿಯ ತೀವ್ರತೆ ಎಷ್ಟಿತ್ತೆಂದರೆ ಉಗ್ರರು ಸೈನಿಕರಿದ್ದ ಒಂದು ಮಿಲಿಟರಿ ಕೋಚ್ ಬಸ್‌ಗೆ ಸಂಪೂರ್ಣವಾಗಿ ಬೆಂಕಿ ಹಚ್ಚಿದ್ದಾರೆ. ಆರಂಭಿಕ ಹೊಂಚುದಾಳಿಯ ನಂತರ ಪಾಕಿಸ್ತಾನಿ ಸೇನೆ ಮತ್ತು ಉಗ್ರರ ನಡುವೆ ಸುದೀರ್ಘ ಹಾಗೂ ಭೀಕರ ಗುಂಡಿನ ಚಕಮಕಿ ನಡೆದಿದೆ.

ದಾಳಿಯ ನಂತರ ಬಿಎಲ್‌ಎ ಸಂಘಟನೆ ಹೇಳಿಕೆ ಬಿಡುಗಡೆ ಮಾಡಿ, ನಾವು ಸೈನಿಕರನ್ನು ಸಾಗಿಸುತ್ತಿದ್ದ ಬಸ್‌ಗಳನ್ನು ಧ್ವಂಸಗೊಳಿಸಿದ್ದೇವೆ. ಸ್ಥಳದಲ್ಲೇ 45 ಕ್ಕೂ ಹೆಚ್ಚು ಸೈನಿಕರು ಸತ್ತಿದ್ದು, ಹತ್ತಾರು ಸೈನಿಕರು ಗಾಯಗೊಂಡಿದ್ದಾರೆ. ಘರ್ಷಣೆಗಳು ಇನ್ನೂ ಮುಂದುವರೆದಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ಹೇಳಿಕೊಂಡಿದೆ.

ಅಧಿಕೃತ ಸಾವುನೋವುಗಳ ಗೊಂದಲ
ಉಗ್ರಗಾಮಿ ಸಂಘಟನೆಯು 45 ಸೈನಿಕರು ಸತ್ತಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದರೂ, ಪಾಕಿಸ್ತಾನಿ ಅಧಿಕಾರಿಗಳು ಅಥವಾ ಸೇನೆಯು (ISPR) ಈ ಅಂಕಿಅಂಶಗಳನ್ನು ಇನ್ನು ಅಧಿಕೃತವಾಗಿ ದೃಢಪಡಿಸಿಲ್ಲ.ಪ್ರಾಥಮಿಕ ರಕ್ಷಣಾ ವರದಿಗಳ ಪ್ರಕಾರ, ಈ ಭೀಕರ ಗುಂಡಿನ ಚಕಮಕಿಯ ನಡುವೆ ಸಿಲುಕಿ ಮೂವರು ಸಾಮಾನ್ಯ ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ನಾಲ್ಕು ಮಕ್ಕಳು ಸೇರಿದಂತೆ 11 ಜನರು ಗಾಯಗೊಂಡಿದ್ದಾರೆ.

ಮತ್ತಷ್ಟು ಓದಿ: ಪಿಒಕೆಯಲ್ಲಿ ತೀವ್ರಗೊಂಡ ಹಿಂಸಾಚಾರ; ಪಾಕಿಸ್ತಾನಿ ಪಡೆಗಳ ಗುಂಡಿನ ದಾಳಿಗೆ 6 ಜನ ಬಲಿ

ಆರಂಭಿಕ ಸ್ಥಳೀಯ ವರದಿಗಳು ಕನಿಷ್ಠ ಮೂವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಸೂಚಿಸಿದ್ದರೂ, ಸೇನೆಯ ನೈಜ ಸಾವುನೋವುಗಳ ಸಂಖ್ಯೆಯನ್ನು ಪಾಕಿಸ್ತಾನ ಸರ್ಕಾರ ಮುಚ್ಚಿಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ತೀವ್ರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕ್ವೆಟ್ಟಾ ಆಸ್ಪತ್ರೆಗೆ ರವಾನಿಸಲಾಗಿದೆ.

ಹೆದ್ದಾರಿ ಬಂದ್: ಮುಂದುವರೆದ ಸೇನಾ ಕಾರ್ಯಾಚರಣೆ
ಈ ಭೀಕರ ದಾಳಿಯ ಬೆನ್ನಲ್ಲೇ ಪಾಕಿಸ್ತಾನಿ ಭದ್ರತಾ ಪಡೆಗಳು ಇಡೀ ಮಸ್ತುಂಗ್ ಜಿಲ್ಲೆಯನ್ನು ಸುತ್ತುವರೆದಿದ್ದು, ಉಗ್ರರ ಪತ್ತೆಗಾಗಿ ಬೃಹತ್ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಭದ್ರತಾ ಕಾರಣಗಳಿಗಾಗಿ ಪ್ರಮುಖ ಕ್ವೆಟ್ಟಾ-ಕರಾಚಿ ಹೆದ್ದಾರಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪರಿಸ್ಥಿತಿ ತೀವ್ರ ಉದ್ವಿಗ್ನವಾಗಿ ಮುಂದುವರೆದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *