ಪಾಕ್ ಉಗ್ರನ ಜತೆ ಸಂಪರ್ಕ ಹೊಂದಿದ್ದ ಇಬ್ಬರ ಬಂಧನ: ಕರ್ನಾಟಕದಲ್ಲಿ ಬೇರೂರುತ್ತಿವೆ ಉಗ್ರರ ಸ್ಲೀಪರ್ ಸೆಲ್! – Kannada News

ಅಲ್ಲಾಬಕ್ಷು ಮತ್ತು ಜಮೀರ್ ಖಾನ್Image Credit source: tv9

ಬೆಂಗಳೂರು, ಜೂನ್ 6: ರಾಜ್ಯದಲ್ಲಿ ವಿದೇಶಿ ಉಗ್ರರ ನೆಟ್‌ವರ್ಕ್ ಮತ್ತು ಸ್ಲೀಪರ್ ಸೆಲ್‌ಗಳು ಸಕ್ರಿಯವಾಗಿರುವ ಆತಂಕಕಾರಿ ವಿಚಾರ ಬಯಲಾಗಿದೆ. ಪಾಕಿಸ್ತಾನ (Pakistan) ಮೂಲದ ಶಂಕಿತ ಉಗ್ರನೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು, ದೇಶದ ಭದ್ರತೆಗೆ ಧಕ್ಕೆ ತರಲು ಹಾಗೂ ಭಯೋತ್ಪಾದಕ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ಇಬ್ಬರು ಯುವಕರನ್ನು ತುಮಕೂರು (Tumakur) ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ತುಮಕೂರು ನಿವಾಸಿ ಅಲ್ಲಾಬಕ್ಷು (24) ಮತ್ತು ದಾವಣಗೆರೆಯ ಬಿಡಿ ಲೇಔಟ್ ನಿವಾಸಿ ಜಮೀರ್ ಖಾನ್ (22) ಎಂದು ಗುರುತಿಸಲಾಗಿದೆ. ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಹತ್ವದ ಸುಳಿವಿನ ಆಧಾರದ ಮೇಲೆ ಈ ಜಂಟಿ ಕಾರ್ಯಾಚರಣೆ ನಡೆದಿದೆ.

ಮುಖ್ಯಾಂಶಗಳು

  • ಇನ್‌ಸ್ಟಾಗ್ರಾಮ್ ಮೂಲಕ ಪಾಕ್ ಉಗ್ರನ ಸಂಪರ್ಕ.
  • ಎಕ್ಸ್ ಮತ್ತು ವಾಟ್ಸ್ ಆ್ಯಪ್ ಗ್ರೂಪ್‌ ಸೃಷ್ಟಿ.
  • ಪುಣೆ ಮೌಲ್ವಿ ಹತ್ಯೆಗೆ ಪ್ರತಿಕಾರಕ್ಕೆ ಸಂಚು.

ಐಸಿಸ್ ಫಂಡಿಂಗ್ ಲಿಂಕ್ ಮತ್ತು ಬಾಂಬ್ ಸ್ಫೋಟದ ಸ್ಕೆಚ್

ದಾವಣಗೆರೆ ಎಸ್ಪಿ ಡಾ. ಎಚ್.ಟಿ. ಶೇಖರ್ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ತುಮಕೂರು ಪೊಲೀಸರು ರೈಲ್ವೆ ನಿಲ್ದಾಣದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಬೇರೆಡೆಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಮೂಲಗಳ ಪ್ರಕಾರ, ಇವರು ಪಾಕಿಸ್ತಾನದ ಐಸಿಸ್ (ISIS) ಉಗ್ರ ಸಂಘಟನೆಗೆ ಫಂಡಿಂಗ್ ಮಾಡುತ್ತಿದ್ದ ಜಾಲದೊಂದಿಗೆ ನೇರ ಸಂಪರ್ಕ ಹೊಂದಿದ್ದರು. ಅಷ್ಟೇ ಅಲ್ಲದೆ, ಭಾರತದ ವಿವಿಧೆಡೆ ಭಾರಿ ಪ್ರಮಾಣದ ಬಾಂಬ್ ಸ್ಫೋಟಗಳನ್ನು ನಡೆಸಲು ವ್ಯವಸ್ಥಿತ ಸಂಚು ಹೂಡುತ್ತಿದ್ದರು ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪಾಕ್ ಉಗ್ರ ರಾಣಾ ಹೆಣೆದಿದ್ದ ಬಲೆ

ಕಳೆದ ಒಂದು ತಿಂಗಳ ಹಿಂದೆ ಪಾಕಿಸ್ತಾನ ಮೂಲದ ‘ರಾಣಾ’ ಎಂಬಾತ ಇನ್‌ಸ್ಟಾಗ್ರಾಮ್ (Instagram) ಮೂಲಕ ಈ ಯುವಕರನ್ನು ಸಂಪರ್ಕಿಸಿದ್ದ. ನಂತರ ಇವರೆಲ್ಲರೂ ಎಕ್ಸ್ (ಟ್ವಿಟರ್) ಖಾತೆಯಲ್ಲಿ ದೇಶವಿರೋಧಿ ಹಾಗೂ ಪ್ರಚೋದನಾತ್ಮಕ ಚರ್ಚೆಗಳನ್ನು ನಡೆಸುತ್ತಿದ್ದರು. ಅಷ್ಟಕ್ಕೆ ನಿಲ್ಲದೆ, ವಾಟ್ಸ್ ಆ್ಯಪ್‌ನಲ್ಲಿ ಗ್ರೂಪ್ ಒಂದನ್ನು ರಚಿಸಿಕೊಂಡು ಅದರಲ್ಲಿ ಉತ್ತರ ಭಾರತದ ಹಲವು ಮುಸ್ಲಿಂ ಯುವಕರನ್ನು ಸೇರಿಸಿಕೊಳ್ಳಲಾಗಿತ್ತು. ಆರಂಭದಲ್ಲಿ ಧರ್ಮದ ಆಚರಣೆಗಳು ಮತ್ತು ಧರ್ಮಗುರುಗಳ ಪ್ರವಚನಗಳನ್ನು ಹಂಚಿಕೊಳ್ಳುತ್ತಿದ್ದ ರಾಣಾ, ತದನಂತರ ‘ನಮ್ಮ ಸಮುದಾಯಕ್ಕೆ ಯಾವುದೇ ತೊಂದರೆಯಾದರೂ ನಾವೆಲ್ಲರೂ ಒಟ್ಟಾಗಿ ಎದುರಿಸಬೇಕು, ತಡೆಯಬೇಕು’ ಎಂದು ಇವರ ತಲೆಗೆ ವಿಷ ತುಂಬಿ ಬ್ರೈನ್‌ವಾಶ್ ಮಾಡಿದ್ದ.

ಪ್ರತಿಕಾರಕ್ಕೆ ಚರ್ಚೆ: ಸ್ಲೀಪರ್ ಸೆಲ್ ಆತಂಕ

ಇತ್ತೀಚೆಗೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದ ಮೌಲ್ವಿ ಹತ್ಯೆಗೆ ದೇಶದೊಳಗೆ ಭೀಕರ ಪ್ರತಿಕಾರ ತೀರಿಸಿಕೊಳ್ಳುವ ಕುರಿತು ಈ ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಉಗ್ರ ರಾಣಾ ಚರ್ಚೆ ಆರಂಭಿಸಿದ್ದ ಎನ್ನಲಾಗಿದೆ. ದೇಶದ ಆಂತರಿಕ ಭದ್ರತೆಗೆ ತೀವ್ರ ಧಕ್ಕೆ ಉಂಟಾಗುವ ಮತ್ತು ಭಯೋತ್ಪಾದಕ ದಾಳಿ ನಡೆಯುವ ಗಂಭೀರ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ಇಲಾಖೆಯು ರಾಜ್ಯ ಪೊಲೀಸರನ್ನು ಅಲರ್ಟ್ ಮಾಡಿತ್ತು.

ಇದನ್ನೂ ಓದಿ: ಪಾಕ್ ಉಗ್ರನ ಜತೆ ಯುವಕರಿಬ್ಬರ ನಂಟು ಬೆಸಿದಿದ್ಹೇಗೆ? ಇಲ್ಲಿದೆ ಕರ್ನಾಟಕ-ಪಾಕ್ ಜಾಲದ ರಹಸ್ಯ

ಮೊದಲಿಗೆ ತುಮಕೂರಿನಲ್ಲಿ ಅಲ್ಲಾಬಕ್ಷುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ದಾವಣಗೆರೆಯ ಜಮೀರ್ ಖಾನ್ ಹೆಸರನ್ನು ಬಾಯಿಬಿಟ್ಟಿದ್ದ. ಸದ್ಯ ಇಬ್ಬರನ್ನೂ ಬಂಧಿಸಿರುವ ತುಮಕೂರು ನಗರ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ರಾಜ್ಯದಲ್ಲಿ ಇವರ ಹಿಂದೆ ಇರುವ ದೊಡ್ಡ ಸ್ಲೀಪರ್ ಸೆಲ್ ನೆಟ್‌ವರ್ಕ್ ಭೇದಿಸಲು ಮುಂದಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *