ಜೈಪುರ, ಜೂನ್ 23: ಪಾಕಿಸ್ತಾನದ ಕುಖ್ಯಾತ ಭಯೋತ್ಪಾದಕ ಸಂಘಟನೆ ‘ಜೈಶ್-ಎ-ಮೊಹಮ್ಮದ್’ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ರಾಜಸ್ಥಾನದ ಭಯೋತ್ಪಾದನಾ ನಿಗ್ರಹ ದಳ (ATS) ಜೈಪುರದಲ್ಲಿ ಮಹಿಳೆಯೊಬ್ಬಳನ್ನು ಬಂಧಿಸಿದೆ. ಆನ್‌ಲೈನ್ ಮೂಲಕ ಭಾರತೀಯರನ್ನು ಸೆಳೆದು, ಮತಾಂತರ(Conversion)ಗೊಳಿಸಿ, ದೇಶವಿರೋಧಿ ಕೃತ್ಯಗಳಿಗೆ ಬಳಸಿಕೊಳ್ಳುವ ಪಾಕಿಸ್ತಾನದ ದೊಡ್ಡ ಜಾಲವೊಂದು ಈ ಬಂಧನದಿಂದ ಬಯಲಾಗಿದೆ.
ಬಂಧಿತ ಮಹಿಳೆಯನ್ನು ಬಬಿತಾ ಧಕಾಡ್ ಎಂದು ಗುರುತಿಸಲಾಗಿದ್ದು, ಆಕೆ ತನ್ನ ಹೆಸರನ್ನು ‘ಖದೀಜಾ’ ಎಂದು ಬದಲಾಯಿಸಿಕೊಂಡಿದ್ದಳು. ಮೂಲತಃ ಗಂಗಾಪುರದವಳಾದ ಈಕೆ ಜೈಪುರದಲ್ಲಿ ಗೃಹಿಣಿಯಾಗಿದ್ದಳು.
ಆಕೆಯ ಮೊಬೈಲ್ ಪರಿಶೀಲಿಸಿದಾಗ ಎರಡು ಸಿಮ್ ಕಾರ್ಡ್‌ಗಳು ಪತ್ತೆಯಾಗಿದ್ದು, ವಾಟ್ಸಾಪ್‌ನಲ್ಲಿ ಹಲವಾರು ಪಾಕಿಸ್ತಾನಿ ನಂಬರ್‌ಗಳು ಹಾಗೂ ವಿದೇಶಿ ವ್ಯಕ್ತಿಗಳೊಂದಿಗೆ ನಿರಂತರವಾಗಿ ಚಾಟ್ ಮಾಡಿರುವುದು ಬೆಳಕಿಗೆ ಬಂದಿದೆ. ಆಕೆಯ ಫೇಸ್‌ಬುಕ್ ಖಾತೆಯ ಗೆಳೆಯರ ಪಟ್ಟಿಯಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಲೋಗೊ, ಮಾರಕಾಸ್ತ್ರಗಳನ್ನು ಹಿಡಿದಿರುವ ಉಗ್ರರ ಪ್ರೊಫೈಲ್‌ಗಳು ಪತ್ತೆಯಾಗಿವೆ.
ಪಾಕಿಸ್ತಾನದ ಧರ್ಮಗುರುವೊಬ್ಬ ಫೋನ್ ಮೂಲಕವೇ ಈಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲು ಪ್ರೇರೇಪಿಸುತ್ತಿದ್ದ. ‘ಅಬು-ಉಬೈದಾ’ ಎಂಬ ವ್ಯಕ್ತಿ ಈಕೆಯನ್ನು ಮದುವೆಯಾಗಲು ಬಯಸುತ್ತಾನೆ ಎಂದು ನಂಬಿಸಿ, ಆಕೆಗೆ ನಮಾಜ್ ಮತ್ತು ಕುರಾನ್ ಪಠಿಸಲು ಸೂಚಿಸಲಾಗಿತ್ತು. ಈಕೆಯನ್ನು ನೇಪಾಳ, ಸೌದಿ ಅರೇಬಿಯಾ ಅಥವಾ ಯುಎಇ (ದುಬೈ) ಮಾರ್ಗವಾಗಿ ಪಾಕಿಸ್ತಾನಕ್ಕೆ ಕರೆಸಿಕೊಳ್ಳಲು ಸಂಚು ರೂಪಿಸಲಾಗಿತ್ತು ಎಂದು ತನಿಖಾ ಸಂಸ್ಥೆಗಳು ಶಂಕಿಸಿವೆ.
ಮತ್ತಷ್ಟು ಓದಿ: ಪ್ರೀತಿ ಪ್ರೇಮದ ಹೆಸರಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರ: ಲವ್ ಜಿಹಾದ್ಗೆ ಬಲಿಯಾದ ಹಿಂದೂ ಯುವತಿ ರೀಟಾ
ಕಂದಹಾರ್ ವಿಮಾನ ಅಪಹರಣದ (IC 814) ಮಾಸ್ಟರ್ ಮೈಂಡ್ ಮಸೂದ್ ಅಜರ್‌ನ ಆಪ್ತರೊಂದಿಗೆ ಈಕೆಯ ಜಾಲಕ್ಕೆ ಸಂಪರ್ಕವಿರುವ ಶಂಕೆ ಇದೆ. ನವೆಂಬರ್ 29, 2016 ರಂದು ಜಮ್ಮುವಿನ ಸೇನಾ ಶಿಬಿರದ ಮೇಲೆ ನಡೆದ ಭೀಕರ ದಾಳಿಯ ಪ್ರಕರಣದಲ್ಲೂ ಈಕೆ ಶಾಮೀಲಾಗಿದ್ದಾಳೆ ಎಂದು ಹೇಳಲಾಗಿದೆ. ಆ ದಾಳಿಯಲ್ಲಿ ಭಾರತದ 6 ಜನ ಸೈನಿಕರು ಮೃತಪಟ್ಟಿದ್ದರು.
ಎಟಿಎಸ್ ಅಧಿಕಾರಿಗಳು ಏನಂತಾರೆ?
ಎಟಿಎಸ್ ಎಸ್‌ಪಿ ಮನೀಶ್ ತ್ರಿಪಾಠಿ ಅವರ ಪ್ರಕಾರ, ತನಿಖೆ ಇನ್ನು ಆರಂಭಿಕ ಹಂತದಲ್ಲಿದೆ. ಕಳೆದ 6-7 ತಿಂಗಳುಗಳಿಂದ ಪಾಕಿಸ್ತಾನದ ಜಾಲವು ಈಕೆಯನ್ನು ಸಂಪೂರ್ಣವಾಗಿ ಬ್ರೈನ್ ವಾಶ್ ಮಾಡಿ, ಮತಾಂತರಗೊಳಿಸಲು ಪ್ರಯತ್ನಿಸುತ್ತಿತ್ತು. ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಈಕೆಯನ್ನು ಸ್ಲೀಪರ್ ಸೆಲ್ ಆಗಿ ಬಳಸಿಕೊಳ್ಳುವ ಉದ್ದೇಶ ಹೊಂದಿದ್ದರು. ಸದ್ಯ ಆಕೆಯ ಮೊಬೈಲ್ ಮತ್ತು ಡಿಜಿಟಲ್ ಸಾಧನಗಳ ಹೆಚ್ಚಿನ ತಪಾಸಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
