ಪಾಕ್ ಮುಖವಾಡ ಮತ್ತೊಮ್ಮೆ ಬಯಲು; ಪಾಕಿಸ್ತಾನದಲ್ಲಿ 30ಕ್ಕೂ ಹೆಚ್ಚು ಲಷ್ಕರ್ ಉಗ್ರರ ಹತ್ಯೆಯನ್ನು ಒಪ್ಪಿಕೊಂಡ ಭಯೋತ್ಪಾದಕ – Kannada News | LeT Terrorist Rizwan Hanif Admits over 30 Outfit Members Killed In Pakistan Alleges India’s Hand

ಇಸ್ಲಾಮಾಬಾದ್, ಆಗಸ್ಟ್ 3: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರದ (PoK) ಪ್ರಮುಖ ನಗರಗಳಲ್ಲಿ ಕಳೆದ ಮೂರರಿಂದ 4 ವರ್ಷಗಳಲ್ಲಿ ತಮ್ಮ ಸಂಘಟನೆಯ 30ಕ್ಕೂ ಹೆಚ್ಚು ಉಗ್ರರನ್ನು ಕೊಲ್ಲಲಾಗಿದೆ ಎಂದು ಲಷ್ಕರ್-ಎ-ತೊಯ್ಬಾ (LeT) ಪ್ರಮುಖ ಉಗ್ರನೊಬ್ಬ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ, ಈ ದಾಳಿಗಳ ಹಿಂದೆ ಭಾರತದ ಜೊತೆ ಸಂಪರ್ಕ ಹೊಂದಿರುವ ಅಪರಿಚಿತ ಬಂದೂಕುಧಾರಿಗಳ ಕೈವಾಡವಿದೆ ಎಂದು ಆತ ಆರೋಪಿಸಿದ್ದಾನೆ. ಈ ಮೂಲಕ ಪಾಕಿಸ್ತಾನದಲ್ಲಿ (Pakistan) ಈಗಲೂ ಲಷ್ಕರ್ ಸಂಘಟನೆ ಬಹಳ ಸಕ್ರಿಯವಾಗಿದೆ ಎಂಬುದು ಬಯಲಾದಂತಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಲಷ್ಕರ್ ಸಂಘಟನೆಯ ಉಗ್ರ ರಿಜ್ವಾನ್ ಹನೀಫ್ ಈ ಹೇಳಿಕೆ ನೀಡಿದ್ದಾನೆ. ರಿಜ್ವಾನ್ ಹನೀಫ್ ಲಷ್ಕರ್-ಎ-ತೊಯ್ಬಾದ ಪಾಕ್ ಆಕ್ರಮಿತ ಕಾಶ್ಮೀರ (PoK) ಭಾಗದ ಹಿರಿಯ ಕಮಾಂಡರ್ ಮತ್ತು ಉಪ ಮುಖ್ಯಸ್ಥನಾಗಿದ್ದು, ಗಡಿಪಾರು ನುಸುಳುವಿಕೆ, ನೇಮಕಾತಿ ಮತ್ತು PAFFನಂತಹ ಉಗ್ರ ಸಂಘಟನೆಗಳೊಂದಿಗೆ ಸಮನ್ವಯ ಸಾಧಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾನೆ. ಈತ ಭಾರತಕ್ಕೂ ಬೇಕಾದ ಉಗ್ರನಾಗಿದ್ದಾನೆ.

ವಿಡಿಯೋದಲ್ಲೇನಿದೆ?:

ತನ್ನ ಭಾಷಣದಲ್ಲಿ ಹನೀಫ್, ಕಳೆದ 3ರಿಂದ 4 ವರ್ಷಗಳಲ್ಲಿ ಪಾಕಿಸ್ತಾನದ ಪೇಶಾವರ, ಕರಾಚಿ, ರಾವಲ್ಪಿಂಡಿ, ರಾವಲಾಕೋಟ್ ಮತ್ತು ಮುಜಫರಾಬಾದ್‌ಗಳಲ್ಲಿ 30ಕ್ಕೂ ಹೆಚ್ಚು ಲಷ್ಕರ್-ಎ-ತೊಯ್ಬಾ ಸದಸ್ಯರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾನೆ. ಈ ಹತ್ಯೆಗಳನ್ನು ಭಾರತೀಯ ಏಜೆಂಟ್‌ಗಳು ಮಾಡಿದ್ದಾರೆ ಎಂದು ಕೂಡ ಆತ ಆರೋಪಿಸಿದ್ದಾನೆ. ಭಾರತದ ಬೆಂಬಲಿತ ‘ಅಪರಿಚಿತ ಬಂದೂಕುಧಾರಿಗಳು’ ಈ ದಾಳಿ ನಡೆಸಿದ್ದಾರೆ ಎಂದು ಆತ ಆರೋಪಿಸಿದ್ದಾನೆ. ಆದರೆ, ತನ್ನ ಈ ಆರೋಪಕ್ಕೆ ಆತ ಯಾವುದೇ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಐವರು ಪೊಲೀಸರು ಸೇರಿ 14 ಮಂದಿ ದಾರುಣ ಸಾವು

ಕಳೆದ 3 ರಿಂದ 4 ವರ್ಷಗಳಲ್ಲಿ 2008ರ ಮುಂಬೈ ಭಯೋತ್ಪಾದಕ ದಾಳಿಯ ಹಿಂದಿದ್ದ ತಮ್ಮ ಸಂಘಟನೆಯ ಅನೇಕ ಸದಸ್ಯರನ್ನು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ (PoK) ವಿವಿಧ ಭಾಗಗಳಲ್ಲಿ ಕೊಲ್ಲಲಾಗಿದೆ ಎಂದು ಕೂಡ ಆತ ಹೇಳಿಕೊಂಡಿದ್ದಾನೆ. ಅಲ್-ಖೈದಾ ಮತ್ತು ತಾಲಿಬಾನ್ ನಂಟು ಹೊಂದಿರುವ ಕಾರಣಕ್ಕೆ 2005ರಲ್ಲಿ ವಿಶ್ವಸಂಸ್ಥೆಯಿಂದ ನಿಷೇಧಕ್ಕೊಳಗಾದ ಲಷ್ಕರ್-ಎ-ತೊಯ್ಬಾಗೆ ಸೇರಿದ ಉಗ್ರನೊಬ್ಬ ಇಂತಹ ಹತ್ಯೆಗಳನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿರುವುದು ಇದೇ ಮೊದಲ ಬಾರಿಯಾಗಿದೆ.

ಇದನ್ನೂ ಓದಿ: ಭಾರತದ ಗಡಿಯಲ್ಲಿ ಪಾಕಿಸ್ತಾನದಿಂದ ಚೀನಾದ 250 ಫಿರಂಗಿಗಳ ನಿಯೋಜನೆ

ಹಿಂದೂ ಧರ್ಮಕ್ಕೆ ಅವಮಾನ:

ಪಾಕಿಸ್ತಾನದಲ್ಲಿ ತೀವ್ರ ಪ್ರತಿಭಟನೆಗಳು, ಬಲೂಚಿಸ್ತಾನ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಶಾಂತಿ ಹಾಗೂ ಅಫ್ಘಾನಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ ಈ ಭಾಷಣ ಹೊರಬಿದ್ದಿದೆ. ತನ್ನ ಭಾಷಣದ ಸಮಯದಲ್ಲಿ, ಹನೀಫ್ ಹಿಂದೂ ಧರ್ಮದ ವಿರುದ್ಧ ಅತ್ಯಂತ ಆಕ್ಷೇಪಾರ್ಹ ಮತ್ತು ದ್ವೇಷಪೂರಿತ ಭಾಷೆಯನ್ನು ಬಳಸಿದ್ದು, ಹಿಂದೂ ಧರ್ಮದ ಅನುಯಾಯಿಗಳನ್ನು ನಿಂದಿಸಿದ್ದಾನೆ.

ಭಾರತದಿಂದ ದೃಢ:

ಭಾರತೀಯ ಭದ್ರತಾ ಸಂಸ್ಥೆಗಳು ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಿದ್ದು, ವಿಡಿಯೋದಲ್ಲಿರುವ ವ್ಯಕ್ತಿಯು ಭಾರತಕ್ಕೆ ಬೇಕಾಗಿರುವ ಲಷ್ಕರ್‌ನ ಹಿರಿಯ ಉಗ್ರ ರಿಜ್ವಾನ್ ಹನೀಫ್ ಎಂಬುದನ್ನು ದೃಢಪಡಿಸಿವೆ. ಪಾಕಿಸ್ತಾನದಲ್ಲಿನ ಸರಣಿ ಹತ್ಯೆಗಳ ಹಿಂದೆ ಭಾರತೀಯ ಗುಪ್ತಚರ ಸಂಸ್ಥೆಗಳ ಕೈವಾಡವಿದೆ ಎಂಬ ಆತನ ಆರೋಪಗಳನ್ನು ಕೂಡ ಭಾರತ ಸಂಪೂರ್ಣವಾಗಿ ತಳ್ಳಿಹಾಕಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *