ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ 2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ (Women’s T20 World Cup 2026) ಈಗಾಗಲೇ ಹದಿನೆಂಟು ಪಂದ್ಯಗಳು ಮುಗಿದಿವೆ. ಇದರರ್ಥ ಎರಡು ಗುಂಪಿನಲ್ಲಿರುವ ಎಲ್ಲಾ 12 ತಂಡಗಳು ತಲಾ 3 ಪಂದ್ಯಗಳನ್ನು ಆಡಿ ಮುಗಿಸಿವೆ. ಅಂದರೆ ಗುಂಪು ಹಂತದಲ್ಲಿ ಎಲ್ಲಾ ತಂಡಗಳಿಗೆ ಇನ್ನು ಕೇವಲ 2 ಪಂದ್ಯಗಳು ಮಾತ್ರ ಉಳಿದಿವೆ. ಈ ಎರಡು ಪಂದ್ಯಗಳು ಎಲ್ಲಾ ತಂಡಗಳಿಗೂ ನಿರ್ಣಾಯಕವಾಗಿವೆ. ಅದರಲ್ಲೂ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ 2 ಮತ್ತು 3ನೇ ಸ್ಥಾನ ಪಡೆದಿರುವ ತಂಡಗಳು ಸೆಮಿಫೈನಲ್ ರೇಸ್ನಲ್ಲಿ ಜೀವಂತವಾಗಿರಬೇಕೆಂದರೆ ಉಳಿದಿರುವ 2 ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಉಳಿದಂತೆ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನಗಳನ್ನು ಪಡೆದಿರುವ ತಂಡಗಳ ಪ್ರಯಾಣ ಗುಂಪು ಹಂತದಲ್ಲೇ ಮುಗಿಯುವುದು ಭಾಗಶಃ ಖಚಿತವಾಗಿದೆ.
ಪ್ರಸ್ತುತ ಮೂರು ತಂಡಗಳು ಸೆಮಿಫೈನಲ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿವೆ. ಅದರಲ್ಲಿ ಎ ಗುಂಪಿನಲ್ಲಿ ಕೊನೆಯ ಎರಡು ಸ್ಥಾನಗಳಲ್ಲಿರುವ ಪಾಕಿಸ್ತಾನ ಹಾಗೂ ನೆದರ್ಲ್ಯಾಂಡ್ಸ್ ತಂಡಗಳು ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದ್ದರೆ, ಬಿ ಗುಂಪಿನಿಂದ ಐರ್ಲೆಂಡ್ ತಂಡ ಅಧಿಕೃತವಾಗಿ ಸೆಮಿಫೈನಲ್ ರೇಸ್‌ನಿಂದ ಹೊರಗುಳಿದಿದೆ. ಹೀಗಾಗಿ, ಉಳಿದ ಒಂಬತ್ತು ತಂಡಗಳಿಗೆ ಪ್ರತಿ ಪಂದ್ಯ, ಪ್ರತಿ ರನ್ ಮತ್ತು ಪ್ರತಿ ಪಾಯಿಂಟ್ ನಿರ್ಣಾಯಕವಾಗಿದೆ. ಸೆಮಿಫೈನಲ್ ತಲುಪಲು ಭಾರತ ತನ್ನ ಉಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲಬೇಕು. ಉಳಿದ ತಂಡಗಳು ಕೂಡ ಸೆಮಿಫೈನಲ್ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಉಳಿದ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿವೆ.
IND W vs SA W: ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾಕ್ಕೆ ಮೊದಲ ಸೋಲು
- ಮೊದಲಿಗೆ ಟೀಂ ಇಂಡಿಯಾದ ವಿಚಾರಕ್ಕೆ ಬರುವುದಾದರೆ.. ಹರ್ಮನ್‌ಪ್ರೀತ್ ಪಡೆ ಲೀಗ್ ಹಂತದಲ್ಲಿ ತನ್ನ ಕೊನೆಯ ಎರಡು ಪಂದ್ಯಗಳನ್ನು ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಭಾರತ ಎರಡಕ್ಕೆ ಎರಡೂ ಪಂದ್ಯಗಳನ್ನು ಗೆದ್ದರೆ ನೇರವಾಗಿ ಸೆಮಿಫೈನಲ್ಗೇರಲಿದೆ. ಇದರಲ್ಲಿ ಒಂದು ಪಂದ್ಯ ಸೋತರೂ ತಂಡದ ಭವಿಷ್ಯ ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಲಿದೆ.
- ಆಸ್ಟ್ರೇಲಿಯಾ ಆಡಿರುವ ಮೂರಕ್ಕೆ ಮೂರು ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹೀಗಾಗಿ ಆಸ್ಟ್ರೇಲಿಯಾ ಇನ್ನುಳಿದಿರುವ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದರೆ ಸೆಮಿಫೈನಲ್ಗೇರಲಿದೆ. ಇದಕ್ಕೆ ಪೂರಕವಾಗಿ ಆಸ್ಟ್ರೇಲಿಯಾ ಮುಂದಿನ ಎರಡು ಪಂದ್ಯಗಳಲ್ಲಿ ಭಾರತ ಹಾಗೂ ಪಾಕಿಸ್ತಾನವನ್ನು ಎದುರಿಸಲಿದೆ.
- ದಕ್ಷಿಣ ಆಫ್ರಿಕಾ ಇದುವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಸೋತು, ಎರಡರಲ್ಲಿ ಗೆಲುವು ಸಾಧಿಸಿದೆ. ಆದರೆ ನೆಟ್ ರನ್ ರೇಟ್ನಲ್ಲಿ ಭಾರತ ಮುಂದಿರುವ ಕಾರಣ ಅದು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನು ಮೂರನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ, ಉಳಿದಿರುವ ಎರಡು ಪಂದ್ಯಗಳಲ್ಲಿ ಬಾಂಗ್ಲಾದೇಶ ಮತ್ತು ನೆದರ್ಲ್ಯಾಂಡ್ಸ್ ತಂಡಗಳನ್ನು ಎದುರಿಸಲಿದೆ. ಈ ಎರಡೂ ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ಗೆದ್ದರೆ ಅದಕ್ಕೂ ಸೆಮಿಫೈನಲ್ ಬಾಗಿಲು ತೆರೆದಿರಲಿದೆ. ಆದರೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ಪ್ರದರ್ಶನ ಆಫ್ರಿಕಾ ತಂಡದ ಸೆಮಿಫೈನಲ್ ಹಾದಿಯನ್ನು ನಿರ್ಧರಿಸಲಿವೆ.
- ಬಾಂಗ್ಲಾದೇಶ ಕೂಡ ಆಡಿರುವ ಮೂರು ಪಂದ್ಯಗಳಲ್ಲಿ ಎರಡಲ್ಲಿ ಗೆದ್ದು ಸೆಮಿಫೈನಲ್ ಸ್ಥಾನಕ್ಕಾಗಿ ಪೈಪೋಟಿಯಲ್ಲಿದೆ. ಆದಾಗ್ಯೂ, ಅದರೆ ಮುಂದಿನ ಹಾದಿ ಸವಾಲಿನದ್ದಾಗಿದೆ. ಏಕೆಂದರೆ ಬಾಂಗ್ಲಾದೇಶ ತನ್ನ ಮುಂದಿನ ಎರಡು ಪಂದ್ಯಗಳನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಆಡಬೇಕಾಗಿದೆ.
- ಇನ್ನು ಬಿ ಗುಂಪಿನ ವಿಚಾರಕ್ಕೆ ಬರುವುದಾದರೆ.. ಈ ಗುಂಪಿನಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಆಡಿರುವ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದೀಗ ಇಂಗ್ಲೆಂಡ್ ಉಳಿದ ಎರಡು ಪಂದ್ಯಗಳಲ್ಲಿ ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ಮತ್ತು ಮಾಜಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಈ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್ ಒಂದು ಪಂದ್ಯ ಗೆದ್ದರೂ ಅದರ ಸೆಮಿಫೈನಲ್ ಹಾದಿ ಸುಗಮವಾಗಲಿದೆ.
- ವೆಸ್ಟ್ ಇಂಡೀಸ್ ಕೂಡ ಆಡಿರುವ ಮೂರು ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ನೆಟ್ ರನ್ ರೇಟ್ನಲ್ಲಿ ಇಂಗ್ಲೆಂಡ್ ಮುಂದಿರುವ ಕಾರಣ ಅದು ಅಗ್ರಸ್ಥಾನದಲ್ಲಿದೆ. ವಿಂಡೀಸ್ ಪಡೆ ಉಳಿದಿರುವ ಎರಡು ಪಂದ್ಯಗಳಲ್ಲಿ ಐರ್ಲೆಂಡ್ ಮತ್ತು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಇಲ್ಲಿ ಒಂದೇ ಒಂದು ಪಂದ್ಯದಲ್ಲಿ ಗೆದ್ದರೂ ವಿಂಡೀಸ್ ತಂಡಕ್ಕೆ ಸೆಮಿಫೈನಲ್ ಟಿಕೆಟ್ ಸಿಗುವುದು ಖಚಿತವಾಗಲಿದೆ.
- ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋತಿದ್ದು, ಸೆಮಿಫೈನಲ್ ಹಾದಿ ಕಠಿಣವಾಗಿದೆ. ತಂಡ ಇನ್ನೂ ಸೆಮಿಫೈನಲ್ ರೇಸ್ನಲ್ಲಿ ಇದೆಯಾದರೂ ಹಾದಿ ಕಷ್ಟಕರವಾಗಿದೆ. ನ್ಯೂಜಿಲೆಂಡ್‌ನ ಉಳಿದ ಎರಡು ಪಂದ್ಯಗಳು ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧವಿದ್ದು, ತಂಡ ಇನ್ನೊಂದು ಪಂದ್ಯ ಸೋತರೂ ಅದು ಸೆಮಿಫೈನಲ್ನಿಂದ ಹೊರಬೀಳಲಿದೆ.
- ಮೊದಲ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋತ ಶ್ರೀಲಂಕಾಗೂ ಸೆಮಿಫೈನಲ್ ಹಾದಿ ಸುಲಭವಲ್ಲ. ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಲಾ 8 ಅಂಕಗಳನ್ನು ಗಳಿಸಿದರೆ, ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ತಮ್ಮ ಉಳಿದ ಎರಡೂ ಪಂದ್ಯಗಳನ್ನು ಗೆದ್ದರೂ ಸೆಮಿಫೈನಲ್ ತಲುಪಲು ಸಾಧ್ಯವಾಗುವುದಿಲ್ಲ. ಇನ್ನು ಶ್ರೀಲಂಕಾ ಉಳಿದಿರುವ ಎರಡು ಪಂದ್ಯಗಳಲ್ಲಿ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ತಂಡಗಳನ್ನು ಎದುರಿಸಲಿದೆ.
- ಸ್ಕಾಟ್ಲೆಂಡ್ ಕೂಡ ಸೆಮಿಫೈನಲ್ ರೇಸ್‌ನಲ್ಲಿದೆಯಾದರೂ ಅದರ ಹಾದಿ ಕೂಡ ಸುಲಭವಲ್ಲ. ಉಳಿದ ಪಂದ್ಯಗಳಲ್ಲಿ ಸ್ಕಾಟ್ಲೆಂಡ್ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಎದುರಿಸಲಿದೆ. ತಂಡವು ಒಂದು ಪಂದ್ಯವನ್ನು ಸೋತರೂ, ಸೆಮಿಫೈನಲ್ ರೇಸ್‌ನಿಂದ ಹೊರಗುಳಿಯುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 3:17 pm, Mon, 22 June 26
