ಇಸ್ಲಾಮಾಬಾದ್, ಜುಲೈ 23: ಪಾಕಿಸ್ತಾನ(Pakistan)ದ ಮಾಜಿ ಪ್ರಧಾನಿ ಹಾಗೂ ಆಡಳಿತಾರೂಢ ಪಿಎಂಎಲ್-ಎನ್ ಪಕ್ಷದ ಮುಖ್ಯಸ್ಥ ನವಾಜ್ ಷರೀಫ್(Nawaz Sharif) ಪಾಕ್ ಆಕ್ರಮಿತ ಕಾಶ್ಮೀರದ ‘ಪ್ರಧಾನಿ’ಯಾಗುವ ಹೊಸ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರದೇಶದ ಮೂಲಸೌಕರ್ಯ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಲು ತಮ್ಮ ಸಹೋದರ, ಪ್ರಸ್ತುತ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಬಳಿ ಪಿಒಕೆ ಪ್ರಧಾನಿ ಪಟ್ಟ ಕೊಡುವಂತೆ ಕೇಳಿಕೊಳ್ಳುವುದಾಗಿ ನವಾಜ್ ಷರೀಫ್ ಹೇಳಿದ್ದಾರೆ.
ಪಿಒಕೆಯ ರಾಜಧಾನಿ ಮುಜಫರಾಬಾದ್ನಲ್ಲಿ ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ನವಾಜ್ ಷರೀಫ್, “ಪಿಒಕೆ ನನಗೆ ತವರು ಪ್ರಾಂತ್ಯ ಪಂಜಾಬ್ನಷ್ಟೇ ಪ್ರಿಯವಾಗಿದೆ. ಇದು ನನ್ನ ಎರಡನೇ ಮನೆ, ಏಕೆಂದರೆ ನನ್ನ ಪೂರ್ವಜರು ಕಾಶ್ಮೀರದಿಂದ ವಲಸೆ ಬಂದವರು. ಚುನಾವಣೆಯಲ್ಲಿ ನಮ್ಮ ಪಕ್ಷ ಗೆದ್ದರೆ, ಅಭಿವೃದ್ಧಿಯನ್ನು ಹತ್ತಿರದಿಂದ ನೋಡಿಕೊಳ್ಳಲು ನನ್ನನ್ನೇ ಪಿಒಕೆ ಪ್ರಧಾನಿ ಮಾಡುವಂತೆ ಶೆಹಬಾಜ್ಗೆ ಕೋರುತ್ತೇನೆ” ಎಂದಿದ್ದಾರೆ.
ಹಠಾತ್ ಹಣದುಬ್ಬರ, ವಿದ್ಯುತ್ ದರ ಏರಿಕೆ ಮತ್ತು ರಾಜಕಾರಣಿಗಳ ಸವಲತ್ತುಗಳ ವಿರುದ್ಧ ‘ಜಮ್ಮು ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ’ ನೇತೃತ್ವದಲ್ಲಿ ವ್ಯಾಪಕ ಆಂದೋಲನ ನಡೆಯುತ್ತಿದೆ. ಪ್ರತಿಭಟನಾಕಾರರ ವಿರುದ್ಧ ಪಾಕಿಸ್ತಾನ ಸೇನೆ ಮತ್ತು ಪೊಲೀಸರು ನಡೆಸಿದ ಕಠಿಣ ಲಾಠಿಚಾರ್ಜ್ ಹಾಗೂ ಗುಂಡಿನ ದಾಳಿಯಲ್ಲಿ ಇದುವರೆಗೆ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಮತ್ತಷ್ಟು ಓದಿ: ಈಗಿರುವ ರೂಪದಲ್ಲಿ ಒಪ್ಪಂದ ಸಾಧ್ಯವೇ ಇಲ್ಲ, ಪಾಕಿಸ್ತಾನಕ್ಕೆ ಭಾರತದ ಖಡಕ್ ಎಚ್ಚರಿಕೆ, ಸಿಂಧೂ ಜಲ ಒಪ್ಪಂದದ ಬಗ್ಗೆ ಮತ್ತೆ ಕಠಿಣ ನಿಲುವು
ಪಾಕ್ ಸರ್ಕಾರಕ್ಕೆ ನೀಡಿದ್ದ ಗಡುವು ಮುಗಿದ ಹಿನ್ನೆಲೆಯಲ್ಲಿ ಜುಲೈ 23 ರಿಂದ ಮತ್ತೆ ಬೃಹತ್ ಲಾಂಗ್ ಮಾರ್ಚ್ ಹಾಗೂ ಮುಜಫರಾಬಾದ್ ಕಡೆಗೆ ಧರಣಿ ಪ್ರದರ್ಶನವನ್ನು ಜೆಕೆಜೆಎಎಸಿ ಆರಂಭಿಸಿದೆ. ಜಮ್ಮು-ಕಾಶ್ಮೀರ ಮತ್ತು ಲಡಾಖ್ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಭಾರತದ ಶಾಶ್ವತ ಮತ್ತು ಬೇರ್ಪಡಿಸಲಾಗದ ಅವಿಭಾಜ್ಯ ಅಂಗಗಳಾಗಿವೆ ಎಂಬ ನಿಲುವಿಗೆ ಭಾರತ ಬದ್ಧವಾಗಿದೆ.
ಅಕ್ರಮ ಆಕ್ರಮಣ: ಪಿಒಕೆ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ ಪ್ರದೇಶಗಳನ್ನು ಪಾಕಿಸ್ತಾನಿ ಸೇನೆಯು ಅಕ್ರಮ ಹಾಗೂ ಬಲವಂತವಾಗಿ ಆಕ್ರಮಿಸಿಕೊಂಡಿದೆ ಎಂದು ನವದೆಹಲಿ ಜಾಗತಿಕ ವೇದಿಕೆಗಳಲ್ಲಿ ಸ್ಪಷ್ಟಪಡಿಸಿದೆ.
ಚುನಾವಣೆಗೆ ತೀವ್ರ ವಿರೋಧ: ಪಿಒಕೆಯಲ್ಲಿ ಪಾಕಿಸ್ತಾನ ನಡೆಸುವ ಯಾವುದೇ ಚುನಾವಣೆಯಾಗಲಿ ಅಥವಾ ರಚಿಸುವ ‘ಶಾಸಕಾಂಗ ಸಭೆಗಳನ್ನಾಗಲಿ’ ಭಾರತ ಸರ್ಕಾರ ಅಧಿಕೃತವಾಗಿ ಎಂದು ಗುರುತಿಸುವುದಿಲ್ಲ. ಈ ಪ್ರದೇಶದಲ್ಲಿ ಪಾಕಿಸ್ತಾನ ನಡೆಸುವ ಇಂತಹ ಪ್ರಹಸನಗಳ ವಿರುದ್ಧ ಭಾರತದ ವಿದೇಶಾಂಗ ಸಚಿವಾಲಯವು ಪಾಕಿಸ್ತಾನಕ್ಕೆ ಸರಣಿ ರಾಜತಾಂತ್ರಿಕ ಪ್ರತಿಭಟನೆಗಳನ್ನು ಸಲ್ಲಿಸುತ್ತಲೇ ಬಂದಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ