Headlines

ಹನಿಮೂನ್​ಗೆ ಕರೆದೊಯ್ದು ಪತಿ ಹತ್ಯೆ ಪ್ರಕರಣ: ಆರೋಪಿ ಸೋನಮ್ ರಘುವಂಶಿ ಜಾಮೀನು ರದ್ದು, ಶರಣಾಗಲು 3 ವಾರ ಗಡುವು – Kannada News | Honeymoon Death Case, Supreme Court Cancels Sonam Raghuvanshi’s Bail; 3 Weeks to Surrender

ನವದೆಹಲಿ, ಜುಲೈ 23: ಮೇಘಾಲಯಕ್ಕೆ ಹನಿಮೂನ್(Honeymoon)​ಗೆಂದು ತೆರಳಿದ್ದಾಗ ಪತಿ ರಾಜಾ ರಘುವಂಶಿ ಅವರನ್ನು ಕೊಲೆ ಮಾಡಿದ  ಪ್ರಕರಣದ ಪ್ರಮುಖ ಆರೋಪಿ ಸೋನಮ್ ರಘುವಂಶಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ. ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಪಿ.ಬಿ. ವರಾಳೆ ಅವರಿದ್ದ ಪೀಠವು ಮೇಘಾಲಯ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ವಜಾಗೊಳಿಸಿದ್ದು, ಮೂರು ವಾರಗಳ ಒಳಗಾಗಿ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗುವಂತೆ ಸೋನಂ ರಘುವಂಶಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಪ್ರಕರಣದ ವಾಸ್ತವಾಂಶಗಳು ಹಾಗೂ ಆರೋಪಗಳ ಗಂಭೀರತೆಯನ್ನು ಗಮನಿಸಿದಾಗ ಆರೋಪಿಯು ಜಾಮೀನಿಗೆ ಅರ್ಹಳಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. ಈ ಹಿಂದೆ ಮೂರು ಬಾರಿ ಜಾಮೀನು ನಿರಾಕರಿಸಲ್ಪಟ್ಟಿದ್ದನ್ನು ನ್ಯಾಯಾಲಯ ಉಲ್ಲೇಖಿಸಿದೆ. ಪ್ರಸ್ತುತ ಪ್ರಕರಣದ ವಿಚಾರಣೆ ಪ್ರಾರಂಭವಾಗಿದ್ದು, ಈ ನಿರ್ಣಾಯಕ ಹಂತದಲ್ಲಿ ಆರೋಪಿ ಹೊರಗಿದ್ದರೆ ನ್ಯಾಯಸಮ್ಮತ ವಿಚಾರಣೆಗೆ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಅಡ್ಡಿಯಾಗಬಹುದು ಎಂದು ನ್ಯಾಯಾಲಯ ಹೇಳಿದೆ.

ಮೂರು ವಾರಗಳಲ್ಲಿ ಶರಣಾದ ನಂತರ, ಮುಂದಿನ ಆರು ತಿಂಗಳೊಳಗೆ ಪ್ರಕರಣದ ವಿಚಾರಣೆ ಪೂರ್ಣಗೊಳ್ಳದಿದ್ದರೆ ಆರೋಪಿಯು ಮತ್ತೆ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಲು ಸುಪ್ರೀಂ ಕೋರ್ಟ್ ಸ್ವಾತಂತ್ರ್ಯ ನೀಡಿದೆ.

ಮತ್ತಷ್ಟು ಓದಿ: ಪುಣೆಯಲ್ಲಿ ಕಾರಿನ ಮೇಲೆ ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ

ಪ್ರಕರಣದ ಹಿನ್ನೆಲೆ ಏನು?

ಇಂದೋರ್ ಮೂಲದ ಸೋನಮ್ ರಘುವಂಶಿ ಹಾಗೂ ಆಕೆಯ ಪತಿ ರಾಜಾ ರಘುವಂಶಿ ಮೇ 2025 ರಲ್ಲಿ ಮೇಘಾಲಯದ ಪೂರ್ವ ಖಾಸಿ ಬೆಟ್ಟಗಳಿಗೆ ಹನಿಮೂನ್​ಗೆಂದು ತೆರಳಿದ್ದರು. ಅಲ್ಲಿ ಪತಿಯನ್ನು ಕೊಲೆ ಮಾಡಲು ಆಕೆ ಸಂಚು ರೂಪಿಸಿದ್ದಳು ಎನ್ನಲಾಗಿದೆ. ಜೂನ್ 2025 ರಲ್ಲಿ ಆಕೆಯನ್ನು ಉತ್ತರ ಪ್ರದೇಶದ ಗಾಜಿಪುರದಲ್ಲಿ ಬಂಧಿಸಿ, ಕೊಲೆ ಮತ್ತು ಸಂಚು ರೂಪಿಸಿದ ಆರೋಪದಡಿ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು.

ಏಪ್ರಿಲ್ 2026 ರಲ್ಲಿ, ಪೋಲಿಸರು ಬಂಧನದ ಸೂಕ್ತ ಕಾರಣಗಳನ್ನು ನೀಡಲು ವಿಫಲರಾಗಿದ್ದಾರೆ ಎಂಬ ತಾಂತ್ರಿಕ ಕಾರಣ ನೀಡಿ ವಿಚಾರಣಾ ನ್ಯಾಯಾಲಯ ಜಾಮೀನು ನೀಡಿತ್ತು. ಜೂನ್‌ನಲ್ಲಿ ಮೇಘಾಲಯ ಹೈಕೋರ್ಟ್ ಕೂಡ ಇದನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಮೇಘಾಲಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ವಿಚಾರಣೆಯ ಸಂದರ್ಭದಲ್ಲಿ ಬದಲಾಗುತ್ತಿರುವ ಸಾಮಾಜಿಕ ಸನ್ನಿವೇಶ ಮತ್ತು ಯುವಜನರ ಮಾನಸಿಕ ಸ್ಥಿತಿಯ ಕುರಿತು ನ್ಯಾಯಾಲಯ ಹಾಗೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನಡುವೆ ಆಸಕ್ತಿಕರ ಚರ್ಚೆ ನಡೆಯಿತು. ನ್ಯಾಯಮೂರ್ತಿ ವರಾಳೆ ಮಾತನಾಡಿ, ಇಂದಿನ ಪೀಳಿಗೆಗೆ ಜ್ಞಾನ ಹೆಚ್ಚಿರಬಹುದು, ಆದರೆ ಮಾನಸಿಕ ಒತ್ತಡಗಳನ್ನು ನಿಭಾಯಿಸುವ ವಿಷಯದಲ್ಲಿ ಅವರು ಬಹಳ ದುರ್ಬಲರಾಗಿದ್ದಾರೆ ಎಂದಿದ್ದಾರೆ. ಪ್ರಕರಣದಲ್ಲಿ ಒಟ್ಟು 94 ಸಾಕ್ಷಿಗಳಿದ್ದು, ಇದುವರೆಗೆ ಕೇವಲ ನಾಲ್ವರ ವಿಚಾರಣೆ ಮಾತ್ರ ಪೂರ್ಣಗೊಂಡಿದೆ. ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಸೋನಂ ರಘುವಂಶಿ ಮತ್ತೆ ಜೈಲು ಪಾಲಾಗುವುದು ಖಚಿತವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:59 pm, Thu, 23 July 26

Source link

Leave a Reply

Your email address will not be published. Required fields are marked *