ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸುವುದು ಹೇಗೆ? ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪಿನ ಮಾಹಿತಿ ಇಲ್ಲಿದೆ – Kannada News | When Is Property Considered Ancestral? Karnataka High Court Explains Children’s Rights in Inherited Property

ಕರ್ನಾಟಕ ಹೈಕೋರ್ಟ್ (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಜುಲೈ 24: ಪಿತ್ರಾರ್ಜಿತ ಆಸ್ತಿ (Ancestral Property) ಮತ್ತು ಸ್ವಯಾರ್ಜಿತ ಆಸ್ತಿ (Self-acquired Property) ನಡುವಿನ ವ್ಯತ್ಯಾಸದ ಬಗ್ಗೆ ಕರ್ನಾಟಕ ಹೈಕೋರ್ಟ್ (Karnataka High Court) ಇತ್ತೀಚೆಗೆ ಮಹತ್ವದ ತೀರ್ಪು ಹಾಗೂ ಸ್ಪಷ್ಟನೆ ನೀಡಿದೆ. ತಾತನಿಂದ ತಂದೆಗೆ ಬಂದ ಎಲ್ಲ ಆಸ್ತಿಯೂ ಮಕ್ಕಳಿಗೆ ಜನ್ಮಸಿದ್ಧ ಹಕ್ಕು ಹೊಂದಿರುವ ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆಸ್ತಿಯ ಮೂಲ, ಅದು ಹೇಗೆ ಸಂಪಾದನೆಯಾಯಿತು ಮತ್ತು ಅದರ ಕಾನೂನು ಸ್ವರೂಪ ಯಾವುದು ಎಂಬುದರ ಆಧಾರದಲ್ಲೇ ಅದು ಪಿತ್ರಾರ್ಜಿತ ಆಸ್ತಿಯೇ ಅಥವಾ ಸ್ವಯಾರ್ಜಿತ ಆಸ್ತಿಯೇ ಎಂಬುದು ನಿರ್ಧಾರವಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪಿತ್ರಾರ್ಜಿತ ಆಸ್ತಿ ಎಂದು ಯಾವಾಗ ಪರಿಗಣಿಸಲಾಗುತ್ತದೆ?

ಹೈಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ, ಹಿಂದೂ ಅವಿಭಕ್ತ ಕುಟುಂಬದ ಕೌಟುಂಬಿಕ ಆಸ್ತಿಯಾಗಿ ತಲೆಮಾರುಗಳಿಂದ ಮುಂದುವರಿದಿರುವ ಹಾಗೂ ಅದರ ಜಂಟಿ ಸ್ವರೂಪ ಉಳಿಸಿಕೊಂಡಿರುವ ಆಸ್ತಿಯನ್ನೇ ಸಾಮಾನ್ಯವಾಗಿ ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಇಂಥ ಆಸ್ತಿಯಲ್ಲಿ ಮಕ್ಕಳಿಗೆ ಹುಟ್ಟಿನಿಂದಲೇ ಹಕ್ಕು ಉಂಟಾಗುತ್ತದೆ.

ತಂದೆಗೆ ಬಂದ ಎಲ್ಲ ಆಸ್ತಿಯಲ್ಲೂ ಮಕ್ಕಳಿಗೆ ಹುಟ್ಟಿನಿಂದ ಹಕ್ಕಿದೆಯೇ?

ಇಲ್ಲ. ತಾತ ತನ್ನ ಸ್ವಂತ ದುಡಿಮೆಯಿಂದ ಅಥವಾ ಖರೀದಿಯಿಂದ ಸಂಪಾದಿಸಿದ ಸ್ವಯಾರ್ಜಿತ ಆಸ್ತಿಯನ್ನು ನಂತರ ತಂದೆ ಪಡೆದಿದ್ದರೂ, ಅದು ಸ್ವಯಂಚಾಲಿತವಾಗಿ ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಂಥ ಆಸ್ತಿಯನ್ನು ತಂದೆ ತನ್ನ ಪ್ರತ್ಯೇಕ ಆಸ್ತಿಯಾಗಿ ಹೊಂದಿರಬಹುದು. ಆ ಸಂದರ್ಭದಲ್ಲಿ ಮಕ್ಕಳಿಗೆ ಜನ್ಮಸಿದ್ಧ ಹಕ್ಕು ಇರುವುದಿಲ್ಲ.

ಸ್ವಯಾರ್ಜಿತ ಆಸ್ತಿ ಎಂದರೇನು?

ವ್ಯಕ್ತಿಯೊಬ್ಬರು ತಮ್ಮ ಸ್ವಂತ ಆದಾಯ, ಖರೀದಿ, ಉಡುಗೊರೆ, ಉಯಿಲು (Will) ಅಥವಾ ವೈಯಕ್ತಿಕ ಪ್ರಯತ್ನದ ಮೂಲಕ ಪಡೆದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎಂದು ಕರೆಯಲಾಗುತ್ತದೆ. ಇಂತಹ ಆಸ್ತಿಯ ಮೇಲೆ ಸಂಪೂರ್ಣ ಹಕ್ಕು ಆ ವ್ಯಕ್ತಿಗೇ ಇರುತ್ತದೆ. ಅದನ್ನು ಯಾರಿಗೆ ಬೇಕಾದರೂ ವರ್ಗಾಯಿಸುವ ಅಥವಾ ಉಯಿಲು ಮಾಡುವ ಅಧಿಕಾರವೂ ಅವರಿಗೇ ಸೇರಿದೆ.

ಸ್ವಯಾರ್ಜಿತ ಆಸ್ತಿ ಯಾವಾಗ ಪಿತ್ರಾರ್ಜಿತವಾಗಬಹುದು?

ಸ್ವಯಾರ್ಜಿತ ಆಸ್ತಿಯನ್ನು ಮಾಲೀಕರು ಸ್ವಯಂಪ್ರೇರಿತವಾಗಿ ಹಿಂದೂ ಅವಿಭಕ್ತ ಕುಟುಂಬದ ಸಾಮೂಹಿಕ ಆಸ್ತಿಯಾಗಿ ಸೇರಿಸಿದರೆ ಅಥವಾ ಅದು ಕುಟುಂಬದ ಆಸ್ತಿಯಾಗಿ ತನ್ನ ಸ್ವರೂಪ ಉಳಿಸಿಕೊಂಡಿದ್ದರೆ, ಆ ಸಂದರ್ಭಗಳಲ್ಲಿ ಅದರ ಕಾನೂನು ಸ್ವರೂಪ ಬದಲಾಗಬಹುದು. ಕೇವಲ ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾದ ಕಾರಣಕ್ಕೆ ಮಾತ್ರ ಅದು ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಮಕ್ಕಳಿಗೆ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಯಾವಾಗ ಹಕ್ಕು?

ತಂದೆ ಜೀವಂತವಾಗಿರುವವರೆಗೆ ಅವರ ಸ್ವಯಾರ್ಜಿತ ಆಸ್ತಿಯಲ್ಲಿ ಮಕ್ಕಳಿಗೆ ಹಕ್ಕು ಇರುವುದಿಲ್ಲ. ಆದರೆ ತಂದೆ ಉಯಿಲು ಮಾಡದೆ ಮೃತಪಟ್ಟರೆ ಕಾನೂನುಬದ್ಧ ಉತ್ತರಾಧಿಕಾರಿಗಳಾಗಿ ಮಕ್ಕಳು ಪಾಲು ಪಡೆಯಬಹುದು. ಅಥವಾ ತಂದೆ ಉಯಿಲಿನಲ್ಲಿ ಮಕ್ಕಳಿಗೆ ಪಾಲು ನೀಡಿದ್ದರೆ ಅದರಂತೆ ಅವರಿಗೆ ಹಕ್ಕು ಸಿಗುತ್ತದೆ.

ಪಿತ್ರಾರ್ಜಿತ ಆಸ್ತಿಯಲ್ಲಿ ಮಗಳಿಗೆ ಹಕ್ಕು ಇದೆಯೇ?

ಹೌದು. 2005ರ ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆಯ ಪ್ರಕಾರ, ಪಿತ್ರಾರ್ಜಿತ ಆಸ್ತಿಯಲ್ಲಿ ಪುತ್ರಿಯರಿಗೂ ಪುತ್ರರಷ್ಟೇ ಸಮಾನ ಹಕ್ಕು ಇದೆ. ಆದರೆ ಈ ತಿದ್ದುಪಡಿಯ ಪ್ರಕಾರ ಕೂಡ, ಸ್ವಯಾರ್ಜಿತ ಆಸ್ತಿ ಪಿತ್ರಾರ್ಜಿತ ಆಸ್ತಿಯಾಗಿ ಬದಲಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಏನಿದು ಪ್ರಕರಣ?

ಅಮೆರಿಕದಲ್ಲಿ ನೆಲೆಸಿರುವ ಕರ್ನಾಟಕದ ಮಹಿಳೆ ಉಷಾ ಎನ್ ಸ್ವಾಮಿ ಎಂಬವರು ತಮ್ಮ ತಾತನ ಆಸ್ತಿಯಲ್ಲಿ ಸಮಾನ ಪಾಲು ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ತಾತನ ನಿಧನದ ಬಳಿಕ ಆಸ್ತಿ ತಂದೆಗೆ ಬಂದಿರುವುದರಿಂದ ಅದು ಪಿತ್ರಾರ್ಜಿತ ಆಸ್ತಿಯಾಗಿದೆ ಮತ್ತು ತಮಗೂ ಜನ್ಮಸಿದ್ಧ ಹಕ್ಕು ಇದೆ ಎಂದು ಅವರು ವಾದಿಸಿದ್ದರು. ಆದರೆ, ಆ ಆಸ್ತಿಯು ಮೂಲತಃ ತಾತನ ಸ್ವಯಾರ್ಜಿತ ಆಸ್ತಿಯಾಗಿದ್ದು, ನಂತರ ತಂದೆಗೆ ಅವರ ಪ್ರತ್ಯೇಕ ಆಸ್ತಿಯಾಗಿ ಬಂದಿರುವುದರಿಂದ ಅದು ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಕೆಲವು ದಿನಗಳ ಹಿಂದೆ ತೀರ್ಪು ನೀಡಿದೆ. ಹೀಗಾಗಿ ಮಹಿಳೆಯು ಪಾಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಇದನ್ನೂ ಓದಿ: ಹಿಂದೂ ವಿವಾಹ ಒಪ್ಪಂದವಲ್ಲ, ಪವಿತ್ರ ಸಂಸ್ಕಾರ; ಆಸಕ್ತಿ ಇಲ್ಲ ಎಂದು ಹೇಳಿ ಸಂಗಾತಿಯನ್ನು ತೊರೆಯಲು ಸಾಧ್ಯವಿಲ್ಲ: ಕರ್ನಾಟಕ ಹೈಕೋರ್ಟ್

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *