ಶಿವಮೊಗ್ಗ, ಮೇ 08: ನಗರದ ಪ್ರಸಿದ್ಧ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಚಿಕಿತ್ಸೆಗೆಂದು ದಾಖಲಾಗಿದ್ದ ಯುವತಿ ಒಂದೇ ದಿನಕ್ಕೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿಕಾರಿಪುರದ ಈಸೂರಿನ ನಿವಾಸಿ ನೇಹಾ (17) ಮೃತ ಯುವತಿಯಾಗಿದ್ದು, ಮಗಳ ಹುಷಾರಾಗಿ ಮನೆಗೆ ಬರುತ್ತಾಳೆಂಬ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೀಗ ಆಘಾತ ಉಂಟಾಗಿದೆ. ಯುವತಿಯ ಸಾವಿನ ಹಿಂದೆ ನೂರೆಂಟು ಅನುಮಾನಗಳು ಹುಟ್ಟಿಕೊಂಡಿದ್ದು, ಈ ಬಗ್ಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
8 ತಿಂಗಳ ಹಿಂದೆ ಕಾಲೇಜಿಗೆ ಹೋಗುವಾಗ ಹಾವು ನೋಡಿ ನೇಹಾ ಬೆಚ್ಚಿಬಿದ್ದಿದ್ದಳು. ಓದುವ ವಿಚಾರದಲ್ಲಿಯೂ ಮಂಕಾಗಿದ್ದ ಈಕೆ ಒಮ್ಮೆ ಬ್ಲೇಡ್ನಿಂದ ಕೈ ಸಹ ಕೊಯ್ದುಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಕೂಡ ಬರೆದಿರಲಿಲ್ಲ. 3 ದಿನಗಳ ಹಿಂದೆಯೂ ಯುವತಿಯನ್ನು ಖಾಸಗಿ ನರ್ಸಿಂಗ್ ಹೋಂಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿತ್ತು. ಈ ನಡುವೆ ಶಿವಮೊಗ್ಗದ ಮಾನಸಧಾರ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರದದವರು ನೇಹಾಳನ್ನು ಬೇಸಿಗೆ ಶಿಬಿರಕ್ಕೆ ಸೇರಿಸಿದರೆ ಗುಣಮುಖರಾಗುತ್ತಾಳೆ ಎಂದಿದ್ದರಂತೆ. ಹೀಗಾಗಿ ಮೊನ್ನೆ ಮಧ್ಯಾಹ್ನ 3 ಗಂಟೆಗೆ ಪುನರ್ ವಸತಿ ಕೇಂದ್ರಕ್ಕೆ ನೇಹಾಳನ್ನ ಕರೆತಂದು ಪೋಷಕರು ಸೇರಿಸಿದ್ದರು. ಆದರೆ ನಿನ್ನೆ ಮಧ್ಯಾಹ್ನದ ಹೊತ್ತಿಗೆ ಪುನರ್ವಸತಿ ಕೇಂದ್ರದ ಕಡೆಯಿಂದ ನೇಹಾ ಪೋಷಕರಿಗೆ ಸಾವರ್ ಲೈನ್ ರಸ್ತೆಯಲ್ಲಿರುವ ಖಾಸಗಿ ನರ್ಸಿಂಗ್ ಹೋಂಗೆ ಬನ್ನಿ. ನೇಹಾ ಮತ್ತೆ ಕೈ ಕೊಯ್ದುಕೊಂಡಿದ್ದಾಳೆ ಎಂಬ ಮಾಹಿತಿ ಬಂದಿದೆ. ಕುಟುಂಬ ನರ್ಸಿಂಗ್ ಹೋಂಗೆ ಬಂದ ವೇಳೆ ಆಕೆ ಮೃತಳಾಗಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಬಿಜೆಪಿ ಮುಖಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ; ಸೊರಬ ಪುರಸಭೆ ಮಾಜಿ ಅಧ್ಯಕ್ಷ ಅರೆಸ್ಟ್!
ಸಂಪೂರ್ಣ ಜವಾಬ್ದಾರಿ ನಮ್ಮದೇ ಎಂದು ಪುನರ್ ವಸತಿ ಕೇಂದ್ರಕ್ಕೆ ಸೇರಿಸಿಕೊಂಡಿದ್ದ ವೈದ್ಯರು ಇಂತಹ ಘಟನೆ ನಡೆದ್ರೂ ಪೊಲೀಸರಿಗೆ ಮಾಹಿತಿ ನೀಡದೇ ಖಾಸಗಿ ಆಸ್ಪತ್ರೆಗೆ ಆಕೆಯನ್ನು ಕರೆತಂದಿದ್ದಾರೆ. ಬೇಸಿಗೆ ಶಿಬಿರದಲ್ಲಿ ಸಮಾನ ಮನಸ್ಕರರೊಂದಿಗೆ ನೇಹಾಳನ್ನ ಬಿಡಲಾಗುವುದು ಎಂದಿದ್ದ ಆಸ್ಪತ್ರೆಯವರು ಮಾನಸಿಕ ರೋಗಿಗಳ ಜೊತೆ ಆಕೆಯನ್ನು ಬಿಟ್ಟಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ. ಅಲ್ಲದೆ ಪುನರ್ ವಸತಿ ಕೇಂದ್ರದ ಕೊಠಡಿಯಲ್ಲಿಯೇ ನೇಹಾ ವೇಲ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಗಂಭೀರ ಆರೋಪ ಮಾಡಿದ್ದಾರೆ. ಒಟ್ಟಿನಲ್ಲಿ ಪುನರ್ ವಸತಿ ಕೇಂದ್ರಕ್ಕೆ ಸೇರಿದ ಒಂದೇ ದಿನದಲ್ಲಿ ನೇಹಾ ಪ್ರಾಣಬಿಟ್ಟಿರೋದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 5:14 pm, Fri, 8 May 26
