
ರಾಮನಗರ, ಮಾರ್ಚ್ 13: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮವಾಗಿ ಹಡಗುಗಳು ಬಾರದೆ ದೇಶದ ಬಹುತೇಕ ರಾಜ್ಯಗಳಲ್ಲಿ ಎಲ್ಪಿಜಿ ವಾಣಿಜ್ಯ ಸಿಲಿಂಡರ್ಗಳ ಅಭಾವ ತಲೆದೋರಿದೆ. ಅದರಲ್ಲಿಯೂ ಕರ್ನಾಟಕದಲ್ಲಿ ಸಮಸ್ಯೆ ತೀರಾ ಹದಗೆಟ್ಟಿದ್ದು, ಸಿಲಿಂಡರ್ಗಳ ಅಲಭ್ಯತೆಯ ಹಿನ್ನೆಲೆ ಬಹುತೇಕ ಹೋಟೆಲ್ಗಳು ಭಾಗಶಃ ಬಂದ್ ಆಗಿವೆ. ಇಲ್ಲವೇ ಗಣನೀಯವಾಗಿ ಮೆನು ಕಡಿತಗೊಳಿಸಿ ಗ್ರಾಹಕರಿಗೆ ಸೇವೆ ನೀಡುತ್ತಿವೆ. ಪಿಜಿಗಳು ಮತ್ತು ಸರಕಾರಿ ಶಾಲೆಗಳಲ್ಲಿ ಊಟ ತಯಾರಿಕೆಗೂ ಸಂಕಷ್ಟ ಬಂದೊದಗಿದ್ದು, ಹೆಚ್ಚಿನ ಹಣ ಕೊಡುತ್ತೇವೆ ಎಂದರೂ ಸಿಲಿಂಡರ್ಗಳು ಸಿಗುತ್ತಿಲ್ಲ ಎಂದು ಆಹಾರೋದ್ಯಮಿಗಳು ಅಲವತ್ತುಕೊಳ್ಳುತ್ತಿದ್ದಾರೆ. ಇದೇ ಸ್ಥಿತಿಯನ್ನು ಬಂಡವಾಳ ಮಾಡಿಕೊಂಡ ಕೆಲವರು ಬ್ಲ್ಯಾಕ್ ಮಾರ್ಕೆಟ್ನಲ್ಲಿ ಸಿಲಿಂಡರ್ ಮಾರುತ್ತಿದ್ದರೆ, ಇನ್ನು ಕೆಲವರು ಮನೆಗಳಿಗೆ ನುಗ್ಗಿ ಕದಿಯುವ ಕೆಲಸಕ್ಕೆ ಕೈಹಾಕಿದ್ದಾರೆ.
ಸ್ಕೂಟರ್ನಲ್ಲಿ ಬಂದ ಆರೋಪಿಗಳು ಮನೆಯ ಕಾಂಪೌಂಡ್ ಪ್ರವೇಶಿಸಿ ಗೃಹೋಪಯೋಗಿ ಎಲ್ಪಿಜಿ ಸಿಲಿಂಡರ್ ಕದ್ದಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ. ಮಾರ್ಚ್ 7ರಂದೇ ಈ ಘಟನೆ ನಡೆದಿದ್ದು, ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಕೃಷ್ಣಪ್ಪ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ಘಟನೆ ವೇಳೆ ಕುಟುಂಬದವರು ಮನೆಯಲ್ಲಿ ಇರಲಿಲ್ಲ. ಬಳಿಕ ಅಡುಗೆ ಮನೆಯ ಸಿಲಿಂಡರ್ ಬದಲಾಯಿಸಲು ಹೋದ ವೇಳೆ ಮನೆಯ ಆವರಣದಲ್ಲಿ ಇಟ್ಟುಕೊಂಡಿದ್ದ ಹೆಚ್ಚುವರಿ ಸಿಲಿಂಡರ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ ಎನ್ನಲಾಗಿದೆ. ಹೀಗಾಗಿ ಸಿಲಿಂಡರ್ ಏನಾಯಿತು ಎಂಬ ಬಗ್ಗೆ ಮನೆಯವರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಳವು ನಡೆದಿರುವುದು ಗೊತ್ತಾಗಿದೆ.
ಇದನ್ನೂ ಓದಿ: ಎಲ್ಪಿಜಿ ಸಿಲಿಂಡರ್ ಕೊರತೆ ಬೆನ್ನಲ್ಲೇ ಅರಣ್ಯ ಇಲಾಖೆ ಹೈ ಅಲರ್ಟ್ ಆಗಿದ್ಯಾಕೆ ಗೊತ್ತಾ?
ಸಿಸಿಟಿವಿ ಕ್ಯಾಮರಾದಲ್ಲಿ ಕಳ್ಳತನದ ದೃಶ್ಯ ಸೆರೆ
ಸ್ಕೂಟರ್ನಲ್ಲಿ ಬಂದ ಆರೋಪಿಗಳ ಪೈಕಿ ಓರ್ವ ಮನೆಯ ಗೇಟ್ ತೆರೆದು ಕಾಂಪೌಂಡ್ ಒಳಗೆ ಪ್ರವೇಶಿಸಿದ್ದು, ಆಕಡೆ ಈಕಡೆ ನೋಡಿ ಸೀದಾ ಸಿಲಿಂಡರ್ ಇಟ್ಟ ಸ್ಥಳಕ್ಕೆ ತೆರಳಿದ್ದಾನೆ. ಕೂಡಲೇ ಅದನ್ನು ಎತ್ತಿಕೊಂಡು ಆತ ಕಾಂಪೌಂಡ್ನಿಂದ ಹೊರ ಹೋಗುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೃತ್ಯವನ್ನು ಗಮನಿಸಿದಾಗ ಮನೆಯವರು ಹೆಚ್ಚುವರಿ ಸಿಲಿಂಡರ್ ಇಡುತ್ತಿದ್ದ ಸ್ಥಳ ಆರೋಪಿಗಳಿಗೆ ಮೊದಲೇ ಗೊತ್ತಿತ್ತಾ ಎನ್ನುವ ಅನುಮಾನವೂ ಇದ್ದು, ಸಿಲಿಂಡರ್ ಪೂರೈಕೆ ವ್ಯತ್ಯಯದಿಂದ ಮೊದಲೇ ಆತಂಕಗೊಂಡಿದ್ದ ನಿವಾಸಿಗಳಿಗೆ ಇದೀಗ ಸಿಲಿಂಡರ್ ಕಳ್ಳರ ಹಾವಳಿ ಹೊಸ ತಲೆನೋವಾಗಿ ಮಾರ್ಪಟ್ಟಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.