ಪೆಟ್ರೋಲ್ ಬೆಲೆ ಏರಿಕೆ ಸಿಟ್ಟಿಗೆ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಬೆಂಕಿ ಹಚ್ಚಿದ ಕಿರಾತಕರು – Kannada News | Gwalior Petrol Pump Attack: Worker Set Ablaze Over Fuel Price Rage, Father Injured

ಭೋಪಾಲ್, ಜೂನ್ 25: ಪೆಟ್ರೋಲ್(Petrol) ಬೆಲೆ ಏರಿಕೆಯ ಕೋಪಕ್ಕೆ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಬೆಂಕಿ ಹಚ್ಚಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ. ಬೆಂಕಿಯ ಜ್ವಾಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಮಗನನ್ನು ರಕ್ಷಿಸಲು ಹೋಗಿದ್ದ ತಂದೆಗೂ ಬೆಂಕಿ ತಗುಲಿದೆ. ಗ್ವಾಲಿಯರ್‌ನ ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಆಕಾಶ್ ಸೆಂಗಾರ್ ಹಲ್ಲೆಗೆ ಒಳಗಾದ ದುರ್ದೈವಿ.
ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಮೂವರು ಯುವಕರು ಬುಲೆಟ್ ಬೈಕ್‌ನಲ್ಲಿ ಪೆಟ್ರೋಲ್ ಹಾಕಿಸಲು ಬಂದಿದ್ದರು. ಇಂಧನದ ದರದ ವಿಚಾರವಾಗಿ ಅವರು ಬಂಕ್ ಸಿಬ್ಬಂದಿ ಆಕಾಶ್ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ.

ಈ ವೇಳೆ ಕ್ರೂರಿಗಳಾದ ಆ ಯುವಕರು ಇದ್ದಕ್ಕಿದ್ದಂತೆ ಆಕಾಶ್ ದೇಹದ ಮೇಲೆ ಪೆಟ್ರೋಲ್ ಸುರಿದು, ಲೈಟರ್‌ನಿಂದ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಆಕಾಶ್ ಬೆಂಕಿಯ ಜ್ವಾಲೆಯಲ್ಲಿ ಸಿಲುಕಿ ರಕ್ಷಣೆಗಾಗಿ ಜೋರಾಗಿ ಕಿರುಚಾಡಲಾರಂಭಿಸಿದ್ದಾನೆ.

ಇದೇ ಪೆಟ್ರೋಲ್ ಪಂಪ್‌ನ ಪಕ್ಕದಲ್ಲಿರುವ ಟ್ರಾವೆಲ್ಸ್ ಕಚೇರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಆಕಾಶ್ ತಂದೆ ರಾಮಚಂದ್ರ ಸೆಂಗಾರ್, ಮಗನ ಕಿರುಚಾಟ ಕೇಳಿ ಓಡಿ ಬಂದಿದ್ದಾರೆ. ಉರಿಯುತ್ತಿದ್ದ ಮಗನನ್ನು ಅಪ್ಪಿಕೊಂಡು ಬೆಂಕಿ ನಂದಿಸಲು ಹತಾಶ ಪ್ರಯತ್ನ ನಡೆಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅವರ ಎರಡೂ ಕಾಲುಗಳು ಭೀಕರವಾಗಿ ಸುಟ್ಟುಹೋಗಿವೆ.

ಮತ್ತಷ್ಟು ಓದಿ: ಪೆಟ್ರೋಲ್ ಡೀಸೆಲ್ ದರ ಏರಿಕೆ: ನಯಾರಾ ಪೆಟ್ರೋಲ್ ಬಂಕ್​ನತ್ತ ಸುಳಿಯದ ವಾಹನ ಸವಾರರು

ಸ್ಥಳೀಯರು ತಕ್ಷಣ ಧಾವಿಸಿ ಬೆಂಕಿ ನಂದಿಸಿ, ತಂದೆ-ಮಗ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕಾಶ್ ದೇಹದ ಶೇ. 37 ರಷ್ಟು ಭಾಗ ಸುಟ್ಟುಹೋಗಿದ್ದು, ಆತನ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಭೀಕರ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಡೋಲಿ ಅಲಿಯಾಸ್ ಅನುಜ್ ಗುರ್ಜರ್ ಮತ್ತು ಸಚಿನ್ ಗುರ್ಜರ್ ಎಂಬ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಮೂರನೇ ಆರೋಪಿ ಅರವಿಂದ್ ಛವಾಯಿ ಪ್ರಸ್ತುತ ತಲೆಮರೆಸಿಕೊಂಡಿದ್ದು, ಆತನಿಗಾಗಿ ತೀವ್ರ ಹುಡುಕಾಟ ನಡೆದಿದೆ. ಪೊಲೀಸರು ಘಟನೆಯ ನಿಖರವಾದ ಘಟನೆ ತಿಳಿಯಲು ಪಂಪ್‌ನಲ್ಲಿರುವ ಸಿಸಿಟಿವಿ ಪರಿಶೀಲಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *