ಮಡಿಕೇರಿ/ ಉತ್ತರ ಕನ್ನಡ, ಫೆಬ್ರವರಿ 19: ವಾಹನದ ಕಾಗದಪತ್ರಗಳು ಇಲ್ಲದ ಹಿನ್ನೆಲೆ ಪೊಲೀಸರನ್ನು ನೋಡಿ ಗಾಬರಿಯಾದ ಬೈಕ್ ಸವಾರ ಏಕಾಏಕಿ ವಾಹನ ತಿರುಗಿಸುವ ವೇಳೆ ಗೂಡ್ಸ್ ವಾಹನ ಡಿಕ್ಕಿಯಾಗಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಮದಲ್ಲಿ ನಡೆದಿದೆ. ಮರೂರು ಗ್ರಾಮದ ನಟೇಶ್ (31) ಮೃತ ವ್ಯಕ್ತಿಯಾಗಿದ್ದು, ಅವರ ಪತ್ನಿ ದಿವ್ಯಾ (30) ಸ್ಥಿತಿ ಚಿಂತಾಜನಕವಾಗಿದೆ. ಅಪಘಾತದಲ್ಲಿ ದಿವ್ಯಾರ ಎರಡೂ ಕಾಲುಗಳು ಮುರಿದಿವೆ ಎನ್ನಲಾಗಿದ್ದು, ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ
ಅಪಘಾತದ ತೀವ್ರತೆಗೆ ನಜ್ಜುಗುಜ್ಜಾಗಿರುವ ವಾಹನಗಳು
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಸುಂಕಸಾಳ ಸಮೀಪ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಸರಣಿ ಅಪಘಾತ ಸಂಭವಿಸಿದ್ದು ಐದಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಎರಡು ಖಾಸಗಿ ಬಸ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಗಾಯಾಳುಗಳನ್ನ ಅಂಕೋಲಾ ಹಾಗೂ ಕಾರವಾರದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಹಂಪಿಯಿಂದ ಗೋವಾ ಕಡೆ ತೆರಳುತಿದ್ದ ಸೀಬರ್ಡ ಬಸ್ ಹುಬ್ಬಳ್ಳಿಯಿಂದ ಮಂಗಳೂರಿಗೆ ತೆರಳುತಿದ್ದ ಗಣೇಶ ಬಸ್ ಮತ್ತು ಯಲ್ಲಾಪುರ ಕಡೆಗೆ ಸಾಗುತಿದ್ದ ಲಾರಿಗೆ ಡಿಕ್ಕಿಯಾಗಿದೆ. ಸರಣಿ ಅಪಘಾತದಿಂದ ಅಂಕೋಲಾ-ಹುಬ್ಬಳ್ಳಿ ಹೆದ್ದಾರಿ ಸಂಚಾರ ಕೆಲ ಕಾಲ ಬಂದ್ ಆಗಿದ್ದು, ಸ್ಥಳಕ್ಕೆ ಅಂಕೋಲಾ ಹಾಗೂ ಯಲ್ಲಾಪುರ ಪೊಲೀಸರು ಭೇಟಿ ನೀಡಿ, ಅಪಘಾತವಾದ ವಾಹನಗಳ ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ; ಇಡೀ ಕುಟುಂಬವೇ ದುರಂತ ಅಂತ್ಯ
ಶಾರ್ಟ್ ಸರ್ಕ್ಯೂಟ್ನಿಂದ ನಿಂತಿದ್ದ ಕಾರಿಗೆ ಬೆಂಕಿ
ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ನಿಂತಿದ್ದ ಕಾರೊಣದು ಬೆಂಕಿಗೆ ಆಗುತಿಯಾಗಿರುವ ಘಟನೆ ತಡರಾತ್ರಿ ನಡೆದಿದೆ. ಬೆಂಕಿಯ ತೀವ್ರತೆಗೆ ಕಾರಿನ ಪಕ್ಕದಲ್ಲೇ ನಿಂತಿದ್ದ ಆಟೋಗೆ ಕೂಡ ಬೆಂಕಿ ತಗುಲಿದ್ದು, ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಆರಿಸಿದ್ದಾರೆ. ಕಾರು ಬಹಳ ದಿನಗಳಿಂದ ಪಾರ್ಕಿಂಗ್ ಪ್ರದೇಶದಲ್ಲಿಯೇ ನಿಂತಿತ್ತು ಎನ್ನಲಾಗಿದ್ದು, ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 9:46 am, Thu, 19 February 26
