ಪೊಲೀಸರಿಗೆ ಶರಣಾಗಿ, ಖ್ಯಾತ ಹಾಸ್ಯನಟನಿಗೆ ಕೋರ್ಟ್ ಆದೇಶ: ಮಾಡಿದ ತಪ್ಪೇನು? – Kannada News | Delhi High Court ordered Rajpal Yadav to surrender to Jail officers

ಬಾಲಿವುಡ್​ನ ಖ್ಯಾತ ಹಾಸ್ಯನಟ ರಾಜ್​​ಪಾಲ್ ಯಾದವ್ (Rajpal Yadav) ಅವರಿಗೆ ಸಂಕಷ್ಟ ಎದುರಾಗಿದೆ. ಅವರು ಈ ಕೂಡಲೇ ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ನ್ಯಾಯಾಲಯ ಆದೇಶಿಸಿದೆ. ರಾಜ್​ಪಾಲ್ ಯಾದವ್ ಅವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈ ಆದೇಶ ಹೊರಬಿದ್ದಿದೆ. ನ್ಯಾಯಾಲಯದ ಆದೇಶದಂತೆ ಯಾದವ್ ಅವರು ಜೈಲು ಸೇರಲೇ ಬೇಕಿದೆ. ಈ ಬಗ್ಗೆ ನ್ಯಾಯಾಲಯವು ಕಠಿಣ ನಿಲವು ತಳೆದಿದ್ದು, ಯಾದವ್ ಅವರು ಈ ಪ್ರಕರಣದಲ್ಲಿ ಸಾಕಷ್ಟು ನಿಯಮಗಳನ್ನು ಉಲ್ಲಂಘಿಸಿದ್ದು, ಅವುಗಳನ್ನು ನಾವು ನಿರ್ಲಕ್ಷ್ಯಿಸಲಾಗುವುದಿಲ್ಲ’ ಎಂದಿದ್ದಾರೆ.

ರಾಜ್​ಪಾಲ್ ಯಾದವ್ ಅವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ನಡೆದು ಯಾದವ್ ಅವರನ್ನು ಅಪರಾಧಿ ಎಂದು ಘೋಷಿಸಲಾಗಿದೆ. ಅಪರಾಧಿ ಎಂದು ಘೋಷಣೆಯಾಗಿ, ಯಾದವ್ ಅವರು ನಿರ್ದಿಷ್ಟ ಮೊತ್ತದ ಹಣವನ್ನು ದೂರುದಾರರಿಗೆ ನೀಡಬೇಕು ಎಂದು ನ್ಯಾಯಾಲಯ 2024ರಲ್ಲೇ ಆದೇಶ ನೀಡಿತ್ತು. ಆದರೆ ರಾಜ್​​ಪಾಲ್ ಯಾದವ್ ಆದೇಶವನ್ನು ಉಲ್ಲಂಘಿಸಿದ್ದರು. ದೂರುದಾರರಿಗೆ ಹಣ ಪಾವತಿ ಮಾಡಿರಲಿಲ್ಲ. ಹಾಗಾಗಿ ಈಗ ಜೈಲು ಅಧಿಕಾರಿಗಳ ಮುಂದೆ ಶರಣಾಗಿ, ಜೈಲು ವಾಸ ಅನುಭವಿಸುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.

ಚೆಕ್ ಬೌನ್ಸ್ ಪ್ರಕರಣದಲ್ಲಿ ದೆಹಲಿಯ ಸೆಷನ್ಸ್ ನ್ಯಾಯಾಲಯವು ರಾಜ್​ಪಾಲ್ ಯಾದವ್ ಅವರನ್ನು ಅಪರಾಧಿ ಎಂದು ಘೋಷಿಸಿ, ನಿಗದಿತ ಮೊತ್ತವನ್ನು ಕಂತುಗಳಲ್ಲಿ ಪಾವತಿ ಮಾಡುವಂತೆ ಆದೇಶ ನೀಡಿತ್ತು. ಆದರೆ ರಾಜ್​​ಪಾಲ್ ಯಾದವ್ ಹಣವನ್ನು ಪಾವತಿ ಮಾಡಿರಲಿಲ್ಲ. ‘ಆಘಾತಕಾರಿ ಸಂಗತಿಯೆಂದರೆ, ಇಂದಿಗೂ ಸಹ, ಈ ನ್ಯಾಯಾಲಯಕ್ಕೆ ಡಿಮ್ಯಾಂಡ್ ಡ್ರಾಫ್ಟ್‌ಗಳನ್ನು ರಿಜಿಸ್ಟ್ರಾರ್ ಜನರಲ್‌ಗೆ ಠೇವಣಿ ಮಾಡಿಲ್ಲ ಅಥವಾ ₹2.10 ಕೋಟಿ ಮೊತ್ತವನ್ನು ಪಾವತಿಸಿಲ್ಲ’ ಎಂದು ದೆಹಲಿ ಹೈಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿದೆ.

ಇದನ್ನೂ ಓದಿ:ಮತ್ತೆ ಬಾಲಿವುಡ್​​ನತ್ತ ಗನ್ನು ಗುರಿ ಇಟ್ಟ ಭೂಗತ ಜಗತ್ತು: ಎಲ್ಲೆಲ್ಲಿ ದಾಳಿ?

ರಾಜ್​ಪಾಲ್ ಯಾದವ್ ಬಾಲಿವುಡ್​ನ ಬಹು ಜನಪ್ರಿಯ ಹಾಸ್ಯ ನಟರಾಗಿದ್ದು, ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿ ಸಿನಿಮಾಗಳು ಮಾತ್ರವೇ ಅಲ್ಲದೆ, ಮರಾಠಿ, ಭೋಜ್​ಪುರಿ, ತೆಲುಗು ಸಿನಿಮಾಗಳಲ್ಲಿಯೂ ರಾಜ್​ಪಾಲ್ ಯಾದವ್ ನಟಿಸಿದ್ದಾರೆ. ಯಾದವ್ ಅವರಿಗೆ ನ್ಯಾಯಾಲಯದ ಪ್ರಕರಣಗಳು ಹೊಸದೇನಲ್ಲ. 2013 ರಲ್ಲಿ ಸುಳ್ಳು ಅಫಿಡವಿಟ್ ಸಲ್ಲಿಕೆ ಮಾಡಿದ್ದಕ್ಕೆ 10 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿತ್ತು. 2010 ರಲ್ಲಿಯೂ ಸಹ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ರಾಜ್​ಪಾಲ್ ಯಾದವ್​​ಗೆ ಮೂರು ತಿಂಗಳ ಶಿಕ್ಷೆ ವಿಧಿಸಲಾಗಿತ್ತು. ಇದೀಗ ಮತ್ತೊಮ್ಮೆ ಆರು ತಿಂಗಳ ಶಿಕ್ಷೆಯನ್ನು ಯಾದವ್ ಅನುಭವಿಸಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *